

ದಾವಣಗೆರೆ: ಬಿಜೆಪಿ ಆಂತರಿಕ ಗೊಂದಲ ನಿವಾರಿಸಲು ವರಿಷ್ಠರು ಮಧ್ಯಪ್ರವೇಶಿಸಿ ಗುಂಪುಗಾರಿಕೆ ಚಟುವಟಿಕೆ ನಡೆಸದಂತೆ ಸ್ಪಷ್ಟ ನಿರ್ದೇಶನ ನೀಡಿದ್ದರೂ ಪಕ್ಷ ನಿಷ್ಠರ ಹೆಸರಲ್ಲಿ ಭಾನುವಾರ ದಾವಣಗೆರೆಯಲ್ಲಿ ಮಹತ್ವದ ಸಭೆಯೊಂದು ನಡೆಯುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ. ಪಕ್ಷ ಸಂಘಟನೆ ನೆಪದಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು, ಮುಖಂಡರು ದಾವಣಗೆರೆಯತ್ತ ಮುಖ ಮಾಡಿದ್ದು, ಶನಿವಾರ ರಾತ್ರಿಯೇ 30 ಜನ ಬಂದಿಳಿದಿದ್ದಾರೆ. ಉಳಿದವರು ತಡರಾತ್ರಿ ಅಥವಾ ಬೆಳಗ್ಗೆ ಬಂದು ಸೇರಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಬೇಲೂರು ಪುರಸಭೆ ಅಧ್ಯಕ್ಷರ ಕೊಠಡಿಯ ಹಿಂಭಾಗ ವಾಮಾಚಾರ
ಒಟ್ಟು 60ಕ್ಕೂ ಅಧಿಕ ಮಾಜಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ನಿಷ್ಠರ ತಂಡದ ರೇಣುಕಾಚಾರ್ಯ ಹೇಳಿಕೊಂಡಿದ್ದಾರೆ. ಪೂರ್ವನಿಗದಿಯಂತೆ ಡಿ.10 ಕ್ಕೆ ಸಭೆ ಸೇರಬೇಕಿತ್ತು ಆದರೆ ಕಾರಣಾಂತರಗಳಿಂದ 15ಕ್ಕೆ ನಡೆಯುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರಿಗೆ ಮುಜುಗರ ತರುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟಿಸುವಂತೆ ಈ ತಂಡ ಪಟ್ಟು ಹಿಡಿದಿದೆ. ಈ ಮಧ್ಯೆ ಪಕ್ಷದ ಕೇಂದ್ರ ಶಿಸ್ತು ಸಮಿತಿ ಕಾರಣ ಕೇಳಿ ನೀಡಿದ ನೋಟಿಸ್‌ಗೆ ಯತ್ನಾಳ್ ಲಿಖಿತ ಹಾಗೂ ಮೌಖಿಕ ವಿವರ ನೀಡಿ ಬಂದಾಗಿದೆ.
ಇನ್ನೇನಿದ್ದರೂ ವರಿಷ್ಠರ ವಿವೇಚನೆಗೆ ಮುಂದಿನ ನಿರ್ಧಾರ ಎಂದು ಭಾವಿಸಲಾಗಿತ್ತು. ರಾಜ್ಯ ಉಸ್ತುವಾರಿ ಡಾ. ರಾಧಾ ಮೋಹನ್‌ದಾಸ್ ಅಗರವಾಲ್ ಕೂಡ ಹಾದಿ ಬೀದಿಯಲ್ಲಿ ಮಾತನಾಡದಂತೆ, ಗುಂಪುಗಾರಿಕೆ ನಡೆಸದಂತೆ ಖಡಕ್ ಎಚ್ಚರಿಕೆ ನೀಡಿಯಾಗಿದೆ. ಇದರಿಂದ ಗುಂಪುಗಾರಿಕೆ ಚಟುವಟಿಕೆ ತಣ್ಣಗಾಯಿತು, ಆಂತರಿಕ ಕಚ್ಚಾಟ ಮುಗಿಯಿತು ಎಂದು ಭಾ ವಿಸುತ್ತಿರುವಾಗಲೇ ನಿಷ್ಠರ ತಂಡ ಮತ್ತೆ ಚುರುಕಾಗಿದೆ. ಯತ್ನಾಳ್ ವಿರುದ್ಧ ಕ್ರಮಕ್ಕೆ ವರಿಷ್ಠರ ಮೇಲೆ ಒತ್ತ ಡ ಹೇರುವ ತಂತ್ರವೇ ಈ ಸಭೆಯ ಅಜೆಂಡಾ ಆಗಿರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ದಾವಣಗೆರೆ ಸಭೆ ಬಳಿಕ ಬಿಜೆಪಿ ಬೆಳವಣಿಗೆಗಳು ಮತ್ಯಾವ ತಿರುವು ಪಡೆಯಲಿವೆಯೋ ಎಂಬ ಆತಂಕ ಕಾರ್ಯಕರ್ತರಕಲ್ಲಿ ಮನೆ ಮಾಡಿದೆ. ಯತ್ನಾಳ್ ವಿಷಯದಲ್ಲಿ ದೆಹಲಿ ನಾಯಕರು ಮೃದು ಧೋರಣೆ ತಳೆದಿದ್ದಾರೆ ಎಂಬ ಅನುಮಾನ ದಟ್ಟವಾಗಿರುವ ಕಾರಣ ನಿಷ್ಠರ ಬಣ ಮತ್ತೆ ಶಕ್ತಿ ಪ್ರದರ್ಶನಕ್ಕೆ ಆಸಕ್ತಿ ವಹಿಸಿದೆ ಎಂದು ಹೇಳಲಾಗುತ್ತಿದೆ.
ದಾವಣಗೆರೆಯ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ಭಾನುವಾರ ಬೆಳಗ್ಗೆ 11ಕ್ಕೆ ಸಭೆ ನಡೆಯಲಿದೆ. ಸಭೆಗೆ ಮುನ್ನ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಹಾಗೂ ದೊಡ್ಡಬಾತಿ ರೇವಣಸಿದ್ದೇಶ್ವರ ದೇವರ ದರ್ಶನ ಪಡೆದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಅವರ ತೋಟದ ಮನೆಯಲ್ಲಿ ಈ ತಂಡ ಉಪಾಹಾರ ಸೇವಿಸಲಿದೆ.
ಪಕ್ಷ ನಿಷ್ಠರ ಬಣದ ಕಾರ್ಯಸೂಚಿ
ಪಕ್ಷದ ಬಲವರ್ಧನೆ ಉದ್ದೇಶದಿಂದ ಪಕ್ಷ ನಿಷ್ಠರಾದ ೬೦ಕ್ಕೂ ಅಧಿಕ ಮಾಜಿ ಸಚಿವರು,ಶಾಸಕರು, ಮುಖಂಡರು ದಾವಣಗೆರೆಯಲ್ಲಿ ಸಭೆ ಸೇರಿ ಚರ್ಚಿಸಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಿದ್ದೇವೆ. ಶಕ್ತಿ ಪ್ರದರ್ಶನಕ್ಕಾಗಲೀ.., ಯಾರಿಗೋ ಸಂದೇಶ ರವಾನಿಸುವ ಉದ್ದೇಶ ನಮಗಿಲ್ಲ. ರಾಜ್ಯಾಧ್ಯಕ್ಷರು ಉತ್ತಮ ಕೆಲಸ ಮಾಡುತ್ತಿದ್ದು ಅವರ ಕೈ ಬಲಪಡಿಸಲು ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ. - ಎಂ.ಪಿ.ರೇಣುಕಾಚಾರ್ಯ , ಮಾಜಿ ಸಚಿವರು