

ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನ ಪರಿಷತ್ಗೆ ಜೂನ್ನಲ್ಲಿ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಹೆಸರಿನ ಪಟ್ಟಿ ಶಿಫಾರಸು ‘ಶಾಸ್ತ್ರ’ ಮುಗಿಸುವುದರೊಂದಿಗೆ ಆಡಳಿತಾರೂಢ ಬಿಜೆಪಿ ಅಖಾಡಕ್ಕೆ ಇಳಿಯಲು ಮುನ್ನುಡಿ ಬರೆದಿದೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ನಡೆದ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ವರಿಷ್ಠರು ನೀಡಿದ ಮಾರ್ಗಸೂಚಿಯಂತೆ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಕೋರ್ ಕಮಿಟಿ ಸಭೆ ಮುಗಿದ ನಂತರ ‘ಕೇಶವ ಶಿಲ್ಪ’ದಲ್ಲಿ ‘ಸಂಘ’ ಹಾಗೂ ಬಿಜೆಪಿ ಪ್ರಮುಖರ ಸಭೆ ನಡೆದಿದ್ದು, ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣೆ ಕಾರ್ಯತಂತ್ರದ ಬಗ್ಗೆ ವಿಚಾರ-ವಿಮರ್ಶೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭೆಯಿಂದ ರಾಜ್ಯ ಸಭೆಯ ನಾಲ್ಕು ಸ್ಥಾನಗಳು ಹಾಗೂ ವಿಧಾನ ಪರಿಷತ್ನ ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ರಾಜ್ಯಸಭೆ ಚುನಾವಣೆಗೆ ಮೇ 24, ಪರಿಷತ್ ಚುನಾವಣೆಗೆ ಮೇ 19ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದೆ. ವಿಧಾನಸಭೆಯಲ್ಲಿ ಬಿಜೆಪಿ ಹೊಂದಿರುವ ಬಲ ಹಾಗೂ ನಿಗದಿತ ಮತಗಳ ಕೋಟಾ ಲೆಕ್ಕಾಚಾರದ ಪ್ರಕಾರ ರಾಜ್ಯಸಭೆಯ 2 ಮತ್ತು ಪರಿಷತ್ನ 4 ಸ್ಥಾನಗಳನ್ನು ನಿರಾಯಾಸವಾಗಿ ತನ್ನದಾಗಿಸಿಕೊಳ್ಳಲಿದೆ. ಪಕ್ಷದ ವರಿಷ್ಠರು ನಿಗದಿ ಮಾಡಿದ ಮಾನದಂಡದಂತೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಸಾಮಾನ್ಯ ವರ್ಗ ಹಾಗೂ ಮಹಿಳೆಯರು ಸೇರಿ ತಲಾ ಐದರಂತೆ ಹೆಸರುಗಳ ಪಟ್ಟಿ ಸಿದ್ಧಪಡಿಸಿ ಶಿಫಾರಸು ಮಾಡಲು ಹೆಸರುಗಳನ್ನು ಅಂತಿಮಗೊಳಿಸಲಾಯಿತು. ಆದರೆ ಕೆಲವು ವರ್ಗಗಳ ಕೋಟಾದಲ್ಲಿ ಏಳೆಂಟು ಹೆಸರುಗಳು ಸೇರಿಕೊಂಡಿದ್ದು, ನಾಲ್ಕು ಸ್ಥಾನಗಳಿಗೆ ಒಟ್ಟು 30 ಅಭ್ಯರ್ಥಿಗಳ ಹೆಸರುಗಳನ್ನು ಪಕ್ಷದ ಕೇಂದ್ರೀಯ ಚುನಾವಣೆ ಸಮಿತಿಗೆ ಶಿಫಾರಸು ಮಾಡಲು ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.
ಮೂರನೇ ಸ್ಥಾನಕ್ಕೂ ಕಣ್ಣು: ರಾಜ್ಯಸಭೆ ಎರಡು ಸ್ಥಾನಗಳ ಪೈಕಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪುನರಾಯ್ಕೆ ಬಹುತೇಕ ಖಚಿತವಾಗಿದ್ದರೆ, ಮತ್ತೊಂದು ಸ್ಥಾನಕ್ಕೆ ಹಾಲಿ ಸದಸ್ಯ ಕೆ.ಸಿ.ರಾಮಮೂರ್ತಿ ಜತೆಗೆ ನಿರ್ಮಲ್ ಕುಮಾರ್ ಸುರಾನಾ ಹೆಸರು ಸೇರ್ಪಡೆ ಕುತೂಹಲ ಕೆರಳಿಸಿದೆ. ಮೂರನೇ ಸ್ಥಾನಕ್ಕೂ ಕಮಲಪಡೆ ಕಣ್ಣಿಟ್ಟಿದ್ದು, ಹೆಚ್ಚುವರಿಯಾಗಿ ಉಳಿಯುವ 30 ಮತಗಳ ಜತೆಗೆ ಸ್ವಂತ ಬಲದ ಮೇಲೆ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಿಲ್ಲದ ಜೆಡಿಎಸ್ನ 32 ಸದಸ್ಯ ಬಲ ಗಿಟ್ಟಿಸಿಕೊಳ್ಳುವ ತಂತ್ರೋಪಾಯ ಹೂಡಿದೆ.
ನೇರವಾಗಿ ಜೆಡಿಎಸ್ ಜತೆಗೆ ಮೈತ್ರಿ ಬಗ್ಗೆ ಆಸಕ್ತಿಹೊಂದಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯಸಭೆ ಪ್ರವೇಶಿಸಲು ‘ನೆರವು’ ನೀಡಿದ್ದರ ಋಣ ನೆನಪಿಸಲು ವೇದಿಕೆ ಸಿದ್ಧಗೊಳಿಸಿದೆ. ಹೋಟೆಲ್ ಉದ್ಯಮಿ ಪ್ರಕಾಶ್ ಶೆಟ್ಟಿ ಹಾಗೂ ಹಾಲಿ ಎಂಎಲ್ಸಿ ಲೆಹರ್ ಸಿಂಗ್ ಸಿರೋಯಿ ಹೆಸರು ಕೇಂದ್ರ ಸಮಿತಿಗೆ ಶಿಫಾರಸು ಮಾಡಿದ್ದು, ಜೆಡಿಎಸ್ ಮನವೊಲಿಸಿ ಬೆಂಬಲ ಗಿಟ್ಟಿಸಿಕೊಳ್ಳುವ ಹೊಣೆ ಈ ಅಭ್ಯರ್ಥಿಗಳಿಗೆ ಒಪ್ಪಿಸಲು ತಾತ್ವಿಕವಾಗಿ ಸಭೆ ಸಮ್ಮತಿಸಿದ್ದು, ಅಂತಿಮ ನಿರ್ಧಾರವನ್ನು ಕೇಂದ್ರ ಸಮಿತಿ ವಿವೇಚನೆಗೆ ಬಿಡಲಾಗಿದೆ ಎಂದು ಮೂಲಗಳು ಹೇಳಿವೆ.
ಮೊರೆಗೆ ಒತ್ತಾಸೆ: ಹಿಂದುಳಿದ ವರ್ಗಗಳ ರಾಜಕೀಯ ಮೀಸಲು ಕಲ್ಪಿಸಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬ ಆತಂಕ ಕೋರ್ ಕಮಿಟಿ ವ್ಯಕ್ತಪಡಿಸಿದೆ. ಸುಪ್ರೀಂಕೋರ್ಟ್ಗೆ ಆದಷ್ಟು ಬೇಗ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು. ಹಿಂದಿನ ಮೀಸಲು ಪ್ರಕಾರ ಇದೊಂದು ಬಾರಿ ಚುನಾವಣೆಗೆ ಅವಕಾಶ ನೀಡುವಂತೆ ಮೊರೆಯಿಡಲು ಒತ್ತಾಸೆ ನೀಡಿದೆ. ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲು ಕಲ್ಪಿಸುವ ಸಂಬಂಧ ವೈಜ್ಞಾನಿಕ ಅಧ್ಯಯನ ಹಾಗೂ ನಿಖರ ಅಂಕಿ-ಅಂಶಗಳ ಸಂಗ್ರಹಕ್ಕೆ ಆಯೋಗ ರಚಿಸಿರುವ ಬಗ್ಗೆ ಸುಪ್ರೀಂ ಕೋರ್ಟ್ ಮನವರಿಕೆ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಸಭೆ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ತಂತ್ರಗಾರಿಕೆ ಸಿದ್ಧ: ಕೇಶವ ಕೃಪಾದಲ್ಲಿ ಪ್ರಮುಖರು ಶನಿವಾರ ಸಭೆ ಸೇರಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ರ್ಚಚಿಸಿ, ಚುನಾವಣಾ ತಂತ್ರಗಾರಿಕೆಯನ್ನು ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಕೋರ್ ಕಮಿಟಿ ಶಿಫಾರಸು ಮಾಡಿದ ಪಟ್ಟಿಯನ್ನು ಯಥಾವತ್ ಕೇಂದ್ರ ಸಮಿತಿಗೆ ಕಳುಹಿಸುವ ಬದಲು ಪರಿಷ್ಕರಿಸಿ ‘ಸೂಕ್ತ’ವೆನಿಸುವ ಪಟ್ಟಿ ಅಂತಿಮಗೊಳಿಸಿದೆ. ಅಲ್ಲದೆ, ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ ಹೊರಟ್ಟಿ ಜತೆಗೆ ಇನ್ನೊಬ್ಬರ ಹೆಸರು ಶಿಫಾರಸು ಮಾಡಿದ್ದರ ಬಗ್ಗೆ ಸಮಾಲೋಚಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭೆ, ವಿಧಾನ ಪರಿಷತ್ನ ಚುನಾವಣೆ ಬಗ್ಗೆ ಚರ್ಚೆ ಮಾಡಲಾಗಿದೆ. ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಲಾಗುತ್ತದೆ. ಅಂತಿಮವಾಗಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ ತೀರ್ಮಾನ ತೆಗೆದುಕೊಳ್ಳಲಿದೆ. | ಅರುಣ್ ಸಿಂಗ್ ರಾಜ್ಯ ಬಿಜೆಪಿ ಉಸ್ತುವಾರಿ
ವಿಜಯೇಂದ್ರ ಸಾಮರ್ಥ್ಯ ಬಳಕೆಗೆ ವರಿಷ್ಠರು ಉತ್ಸುಕ: ಕೇಂದ್ರ ನಾಯಕರ ಆಣತಿಯಂತೆ ಪರಿಷತ್ಗೆ ಬಿ.ವೈ.ವಿಜಯೇಂದ್ರ ಹೆಸರು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಯಾಗಿದ್ದು, ನಿಗದಿತ ಮಾನದಂಡದ ಪ್ರಕಾರ ಅವರ ಹೆಸರು ಶಿಫಾರಸು ಮಾಡಲು ನಿರ್ಧರಿಸಿದೆ. ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಎಂಬ ಕಾರಣ ಬಿಟ್ಟು, ಅವರ ಸಂಘಟನಾ ಸಾಮರ್ಥ್ಯ ಬಳಸಲು ವರಿಷ್ಠರು ಉತ್ಸುಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಪ್ರಮುಖರ ಸಭೆಗೆ ಸ್ಪಷ್ಟ ನಿರ್ದೇಶನ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.