

ಬೆಂಗಳೂರು: ಹಿಂದುಗಳ ಹೆಸರಿನಲ್ಲಿ ರಾಜಕಾರಣ ಮಾಡುವುದರಲ್ಲಿ ಬಿಜೆಪಿ ಸದಾ ಮುಂದಿದ್ದು, ಸತ್ಯಶೋಧನೆ ಹೆಸರಿನಲ್ಲಿ ಶಿವಮೊಗ್ಗಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿರುವುದು ಚುನಾವಣಾ ಗಿಮಿಕ್ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಟೀಕಿಸಿದರು.
ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಪಾಕಿಸ್ತಾನ, ಭಯೋತ್ಪಾದಕರು, ಅಂಜನಾದ್ರಿ ಬೆಟ್ಟ ನೆನಪಾಗುತ್ತಿದೆ. ಹಿಂದುಗಳ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದು, ಕಾಂಗ್ರೆಸ್‌ನಲ್ಲಿ ಹಿಂದುಗಳಿಲ್ಲವೆ ? ನಾವೆಲ್ಲ ಹಿಂದುಗಳಲ್ಲವೆ ? ಎಂದು ಕೇಳಿದರು.
ಬಿಜೆಪಿ ಆಡಳಿತದಲ್ಲಿದ್ದಾಗ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ 120 ಕೋಟಿ ರೂ. ಅನುದಾನ ಮೀಸಲಿಟ್ಟ ಹೇಳಿಕೆ ಕಾಗದಕ್ಕೆ ಸೀಮಿತವಾಗಿದೆ. ಕನಕಗಿರಿ ಕ್ಷೇತ್ರಕ್ಕೆ ತೋಟಗಾರಿಕಾ ಥೀಮ್ ಪಾರ್ಕ್ ಮಾಡಲಾಗಿದೆ ಎಂದಿದ್ದರು. ಈ ಪಾರ್ಕ್ ಹುಡುಕುತ್ತಲಿದ್ದು, ಇನ್ನೂವರೆಗೆ ಸಿಕ್ಕಿಲ್ಲವೆಂದು ಗೇಲಿ ಮಾಡಿದರು.
ಸಚಿವ ಸಂಪುಟ ರಚನೆ ವೇಳೆ ಜಾತಿವಾರು ಪ್ರಾತಿನಿಧ್ಯದ ಲೆಕ್ಕಾಚಾರ ಮಾಡಲಾಗುತ್ತದೆ. ಸಾಮಾಜಿಕ ನ್ಯಾಯ ಕಾಯ್ದುಕೊಳ್ಳುವುದು ಈ ಕ್ರಮದ ಮೂಲ ಉದ್ದೇಶವಾಗಿದೆ. ಆದರೆ ಆಡಳಿತಾತ್ಮಕ ವಿಚಾರಕ್ಕೆ ಬಂದಾಗ ಅಧಿಕಾರಿಗಳನ್ನು ಜಾತಿ ಆಧಾರದಲ್ಲಿ ಆಯ್ಕೆ ಮಾಡುವುದಿಲ್ಲ. ಹಿರಿಯರಾದ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ಸರಿಯಲ್ಲ ಎಂದು ಶಿವರಾಜ್ ತಂಗಡಗಿ ಆಕ್ಷೇಪಿಸಿದರು.