

ಬೆಂಗಳೂರು: ಜಾಗತಿಕ ಸಂಚಾರ ಸೂಚ್ಯಂಕದಲ್ಲಿ ಬೆಂಗಳೂರಿನ ಶ್ರೇಯಾಂಕ ಆರರಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. 2023ರಲ್ಲಿ ಶ್ರೇಯಾಂಕವಿತ್ತು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಶ್ರೇಯಾಂಕ ಇಳಿಮುಖವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಎಲ್ಲ ನಗರಗಳು ಒಂದೇ ಸಮಸ್ಯೆಯನ್ನು ಹೊಂದಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುವ ಮೊದಲು ಜಾಗತಿಕ ಸಂಚಾರ ಸೂಚ್ಯಂಕದತ್ತ ಗಮನಹರಿಸಲಿ ಎಂದು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಬಿ.ವೈ.ವಿಜಯೇಂದ್ರ ಸಂದೇಶ ಹಂಚಿಕೊಂಡು ಪ್ರತಿಕ್ರಿಯಿಸಿದ್ದಾರೆ.
ರಸ್ತೆ ಗುಂಡಿಗಳ ಬಗ್ಗೆ ಕೇಳಿದಾಗಲೆಲ್ಲ ಡಿ.ಕೆ.ಶಿವಕುಮಾರ್ ಅವರು ಅದನ್ನು ಬ್ಲ್ಯಾಕ್‌ಮೇಲ್ ಎಂದು ತಳ್ಳಿಹಾಕುತ್ತಾರೆ ಅಥವಾ ಬೇರೆ ರಾಜಧಾನಿಗಳಿಗೆ ಹೋಲಿಸಿ ದಿಕ್ಕು ತಪ್ಪಿಸುತ್ತಾರೆ ಎಂದು ಟೀಕಿಸಿದ್ದಾರೆ.
ಸಂಚಾರ ದಟ್ಟಣೆಯು ಉತ್ಪಾದಕ ಸಮಸಯವನ್ನು ಕಸಿದುಕೊಳ್ಳುತ್ತಿದೆ. ಸಾರ್ವಜನಿಕ ಕೋಪವನ್ನು ಹೆಚ್ಚಿಸುತ್ತಿದೆ. ಹಲವು ಕಂಪನಿಗಳು ಕರ್ನಾಟಕದಿಂದ ಕಾಲ್ತೆಗೆಯುವ ಮಾತನಾಡುತ್ತಿದ್ದು, ಜಮೀನು ನೀಡಿದರೆ ಸಾಲದು ರಸ್ತೆಗಳು ಸೇರಿ ಉತ್ತಮಗುಣಮಟ್ಟದ ರಸ್ತೆಗಳು ಅಷ್ಟೇ ಮುಖ್ಯವಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ದೆಹಲಿಯಲ್ಲಿ ಪ್ರಧಾನಿಯವರ ಮನೆ ಮುಂದೆ ರಸ್ತೆಯಲ್ಲಿ ಗುಂಡಿಯಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುವುದಾದರೆ ತಮ್ಮ ಮನೆ ಮುಂದೆ ಹೊಂಡ ಇಲ್ಲವೇ ಕೆರೆಯನ್ನು ಮಾಡಿಕೊಳ್ಳಲಿ ಎಂದು ಮಾಜಿ ಸಚಿವ, ಶಾಸಕ ಸಿ.ಟಿ.ಪಾಟೀಲ ಲೇವಡಿ ಮಾಡಿದರು.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರಕ್ಕೆ ಬಂದು ಎರಡು ಕಾಲು ವರ್ಷಗಳಾಯಿತು, ಇನ್ನೂ ಹಿಂದಿನ ಬಿಜೆಪಿ ಸರ್ಕಾರದ ಕಡೆಗೆ ಬೊಟ್ಟು ತೋರಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ಅಸಮರ್ಥತೆ ತೋರಿಸುತ್ತದೆ ಎಂದರು.
ಗುಂಡಿ ಮುಚ್ಚುವ ಕೆಲಸಕ್ಕೆ ಅಧಿಕಾರಿಗಳನ್ನು ನೇಮಿಸಿರುವುದು ಕರ್ನಾಟಕದ ಇತಿಹಾಸದಲ್ಲಿ ಮೊದಲ ಸರ್ಕಾರವಿದು. ಸೋಮವಾರ ರಾತ್ರಿ ಮಳೆ ಸುರಿಯುತ್ತಿದ್ದರೂ ಗುಂಡಿ ಮುಚ್ಚುತ್ತಿದ್ದರು. ಮಳೆ ನೀರಿಗೆ ಗುಂಡಿ ಮುಚ್ಚಿದ್ದು ನಿಲ್ಲುತ್ತದೆಯೆ ? ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಅಷ್ಟೂ ಪರಿಜ್ಞಾನ ಬೇಡವೆ ? ಎಂದು ಸಿ.ಸಿ.ಪಾಟೀಲ ಕೇಳಿದರು.
ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ, ರಸ್ತೆ ಗುಂಡಿಗಳ ಸಮಸ್ಯೆಯ ತೀವ್ರತೆಯನ್ನು ಕಾಂಗ್ರೆಸ್ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಎಲ್ಲ ಜಿಲ್ಲೆಗಳಲ್ಲಿ ರಸ್ತೆ ಸಂಚಾರ ತಡೆ ಬುಧವಾರ ನಡೆಸಲಾಗುವುದು ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.
ತೆರಿಗೆಗಳ ಏರಿಕೆ ಭಾರದಿಂದ ಜನಸಾಮಾನ್ಯ ತತ್ತರಿಸಿದ್ದಾರೆ. ರಸ್ತೆ ಗುಂಡಿಗಳ ಸಮಸ್ಯೆಯಿಂದ ಬೆಂಗಳೂರಿನಲ್ಲಿ ಕಂಪನಿಗಳು ಬೇಸತ್ತುಕೊಂಡಿವೆ. ಅಭಿವೃದ್ಧಿ, ಆಡಳಿತದಲ್ಲಿ ವಿಲವಾಗಿರುವ ಜನ ವಿರೋಧಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಸಾಂಕೇತಿಕವಾಗಿ ಈ ಹೋರಾಟ ನಡೆಸುತ್ತಿದ್ದೇವೆ ಎಂದರು.
ಪಂಚ ಗ್ಯಾರಂಟಿಗಳಿಗೆ 90 ಸಾವಿರ ಕೋಟಿ ರೂ. ವೆಚ್ಚ ಮಾಡಿದ್ದೇವೆ, ಜನರ ತಲಾ ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ತೆರಿಗೆಗಳ ಏರಿಕೆ ಮೂಲಕ 1.50 ಲಕ್ಷ ಕೋಟಿ ರೂ. ಪಡೆದುಕೊಂಡಿದ್ದು, ಎಸ್‌ಸಿಪಿ-ಟಿಎಸ್‌ಪಿಯಡಿ 39 ಸಾವಿರ ಕೋಟಿ ರೂ. ಅನುದಾನ ಕಡಿತ ಮಾಡಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಟೀಕಿಸಿದರು.