ತಮಿಳುನಾಡು ಸಿಎಂ ಪುತ್ರನ ವಿರುದ್ಧ ಮುಗಿಬಿದ್ದ ರಾಜ್ಯ ಬಿಜೆಪಿ ನಾಯಕರು

BJP symbol
Published on

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಸನಾತನದ ಧರ್ಮ ಕುರಿತು ಮಾತುಗಳ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಮುಗಿಬಿದ್ದಿದ್ದು, ಅಧಿಕಾರದ ಮದವೆಂದು ಜರಿದು ಸಚಿವ ಸಂಪುಟದಿಂದ ಕಿತ್ತೊಗೆಯಲು ಆಗ್ರಹಿಸಿದ್ದಾರೆ.

ಈ ಕುರಿತು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಸುದ್ದಿಗಾರರಿಗೆ ಭಾನುವಾರ ಪ್ರತ್ಯೇಕವಾಗಿ ಪ್ರತಿಕ್ರಿಯಿಸಿದ್ದು, ದೇಶದ ಪುರಾತನ ಹಾಗೂ ಭವ್ಯ ಪರಂಪರೆಯನ್ನು ಕಟ್ಟಿಕೊಟ್ಟ ಸನಾತನ ಧರ್ಮಕ್ಕೆ ಉದಯನಿಧಿ ಅವಹೇಳನ ಮಾಡಿದ್ದಾರೆ ಎಂದು ಕಿಡಿಕಾರಿದರು.

ತಮಿಳುನಾಡು ಸಿಎಂ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ದುರಹಂಕಾರದ ಮಾತನಾಡಿದ್ದಾರೆ. ತಕ್ಷಣ ಈ ಹೇಳಿಕೆ ವಾಪಸ್ ಪಡೆದು, ದೇಶದ ಜನರ ಕ್ಷಮೆಯಾಚಿಸಬೇಕು. ಸಚಿವ ಸಂಪುಟದಿಂದ ವಜಾ, ಡಿಎಂಕೆ ಪಕ್ಷದ ಮಾನ್ಯತೆ ರದ್ದಾಗಬೇಕು ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಆಗ್ರಹಿಸಿದರು.

ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ಗೆ ಮತಿಭ್ರಮಣೆಯಾದಂತಿದೆ. ಈ ಕಾರಣಕ್ಕೆ ಪುರಾತನವಾದ ಸನಾತನ ಧರ್ಮವನ್ನು ಅವಹೇಳನ ಮಾಡಿದ್ದಾರೆ. ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ ನಿಮ್ಹಾನ್ಸ್‌ಗೆ ಸೇರಿಸುವುದು ಒಳಿತು ಎಂದು ಬಿಜೆಪಿ ರಾಜ್ಯ ಪ್ರಧಾನ, ಎಂಎಲ್‌ಸಿ ಎನ್.ರವಿಕುಮಾರ್ ವ್ಯಂಗ್ಯದ ಧಾಟಿಯಲ್ಲಿ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net