ಪೊಲೀಸರನ್ನು ನಮ್ಮ ಬೂಟು ನೆಕ್ಕಲು ಇಟ್ಟುಕೊಳ್ಳುತ್ತೇವೆ ಎಂದ ಬಿಜೆಪಿ ನಾಯಕ!

bjp
Published on

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯ ಕಾವು ಈಗಾಗಲೇ ಆರಂಭವಾಗಿದೆ. ಆಡಳಿತದಲ್ಲಿರುವ ಟಿಎಂಸಿ ಮತ್ತು ಕೇಂದ್ರದ ಆಡಳಿತದಲ್ಲಿರುವ ಬಿಜೆಪಿ ಪಕ್ಷಕ್ಕೆ ರಾಜ್ಯದಲ್ಲಿ ನೇರ ಹಣಾಹಣಿ ಉಂಟಾಗಿದೆ. ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗಿದ್ದು, ಈ ಸಮಯದಲ್ಲಿ ಬಿಜೆಪಿ ನಾಯಕರೊಬ್ಬರು ವಿವಾದಕ್ಕೀಡಾಗಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿರುವುದರ ವಿರೋಧವಾಗಿ ಪ್ರತಿಭಟನಾ ಸಭೆ ನಡೆಸಲಾಗುತ್ತಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕ ರಾಜು ಬ್ಯಾನರ್ಜಿ ಅವರು ಹೇಳಿರುವ ಮಾತುಗಳು ಇದೀಗ ಅನೇಕರ ವಿರೋಧಕ್ಕೆ ಕಾರಣವಾಗಿದೆ.

'ರಾಜ್ಯದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನೀವೇ ನೋಡುತ್ತಿದ್ದೀರಿ. ಗೂಂಡಾ ರಾಜ್​ ಮೇಲುಗೈ ಸಾಧಿಸಲು ನೋಡುತ್ತಿದೆ. ಹಲ್ಲೆಗೆ ಒಳಗಾಗುತ್ತಿರುವವರಿಗೆ ಪೊಲೀಸರೂ ಏನೂ ರಕ್ಷಣೆ ನೀಡುತ್ತಿಲ್ಲ. ಇಂತಹ ಪೊಲೀಸರಿಗೆ ಏನು ಮಾಡಬೇಕು? ನಾವು ಅವರನ್ನು ನಮ್ಮ ಬೂಟು ನೆಕ್ಕಲು ಇಟ್ಟುಕೊಳ್ಳುತ್ತೇವೆ' ಎಂದು ರಾಜು ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ರಾಜ್ಯದ ಬಿಜೆಪಿ ಅಧ್ಯಕ್ಷ ದಿಲೀಪ್​ ಘೋಷ್​ ಅವರ ಮೇಲೆ 15 ದಿನದಲ್ಲಿ ಎರಡು ಬಾರಿ ನಡೆಸಲಾಗಿದೆ. ಟಿಎಂಸಿ ಪಕ್ಷದ ಕಾರ್ಯಕರ್ತರೇ ಹಲ್ಲೆ ನಡೆಸಿರುವುದಾಗಿ ಅವರು ದೂರಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಕೈಲಾಶ್​ ವಿಜಯವರ್ಗೀಯ ಅವರ ಮೇಲೂ ಹಲ್ಲೆ ನಡೆಸಲು ಪ್ರಯತ್ನಿಸಲಾಗಿತ್ತು ಎಂದು ನಾಯಕರು ದೂರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net