

ಭೋಪಾಲ್: ಆಸ್ತಿ ಆಸೆ ಎಂತವರನ್ನೂ ಪಾಪಿಗಳನ್ನಾಗಿ ಮಾಡಿಬಿಡುತ್ತದೆ. ಅಣ್ಣ ತಮ್ಮಂದಿರ ಮಧ್ಯೆ ಜಗಳ ಹುಟ್ಟುವುದಕ್ಕೆ ಮುಖ್ಯ ಕಾರಣವೇ ಆಸ್ತಿ. ಈ ಆಸ್ತಿಯ ಕಾರಣದಿಂದಲೇ ಆತ್ಮಹತ್ಯೆಗೆ ಶರಣಾದ ತಮ್ಮನೊಬ್ಬ, ಸಾಯುವುದಕ್ಕೂ ಮುನ್ನ ಅಣ್ಣನ ಕುಟುಂಬವನ್ನೂ ಸಂಪೂರ್ಣವಾಗಿ ನಾಶ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ರಾಜ್ಯದ ಅನುಪ್ಪುರ ಜಿಲ್ಲೆಯಲ್ಲಿ ಓಂಕಾರ್ ವಿಶ್ವಕರ್ಮ (35)ನ ಕುಟುಂಬ, ತಮ್ಮ ದೀಪಕ್ ವಿಶ್ವಕರ್ಮನೊಂದಿಗೆ ಬದುಕುತ್ತಿತ್ತು. ಇತ್ತೀಚೆಗೆ ಅಣ್ಣ ತಮ್ಮನ ನಡುವೆ ಆಸ್ತಿಯ ವಿಚಾರದಲ್ಲಿ ಜಗಳವಾಗಿದೆ. ಓಂಕಾರ್ ಸಿಟ್ಟಿನಿಂದ ತಮ್ಮನನ್ನು ಮನೆಯಿಂದ ಹೊರಗೆ ಹಾಕಿದ್ದನಂತೆ. ಅಣ್ಣ ಮನೆಯಿಂದ ಹೊರಗೆ ಹಾಕಿದ್ದಕ್ಕೆ ದ್ವೇಷ ಬೆಳೆಸಿಕೊಂಡ ದೀಪಕ್ ಗುರುವಾರ ನೇಣಿಗೆ ಶರಣಾಗಿದ್ದಾನೆ.
ನೇಣಿಗೆ ಶರಣಾಗುವ ಮುನ್ನ ತನ್ನ ದ್ವೇಷವನ್ನು ದೀಪಕ್ ತೀರಿಸಿಕೊಂಡಿದ್ದಾನೆ. ಬುಧವಾರ ರಾತ್ರಿ ಅಣ್ಣನ ಮನೆ ಬಳಿ ಹೋದ ದೀಪಕ್, ಮನೆಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿ ಅವಘಡದಿಂದಾಗಿ ಓಂಕಾರ್, ಪತ್ನಿ ಕಸ್ತೂರಿಯಾ (31) ಮತ್ತು ನಾಲ್ಕು ವರ್ಷದ ಮಗ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳೀಯರ ಸಹಾಯದಿಂದಾಗಿ 17 ವರ್ಷದ ಮಗಳನ್ನು ಮಾತ್ರವೇ ಬದುಕುಳಿಸಿಕೊಳ್ಳಲಾಗಿದೆ. ಆಸ್ಪತ್ರೆ ಸೇರಿರುವ ಮಗಳ ಸ್ಥಿತಿಯೂ ಗಂಭೀರವಾಗಿರುವುದಾಗಿ ತಿಳಿಸಲಾಗಿದೆ.
ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)