ಕೊಪ್ಪಳ: ಕಾಂಗ್ರೆಸ್ ಸರ್ಕಾರ ರೈತ ಪರ ಯೋಜನೆಗಳನ್ನು ರದ್ದುಪಡಿಸಿ ರೈತ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಲಂಕೇಶ ಗುಳದಾಳ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಲಾಗಿದೆ. ಏಕಾಏಕಿ ವಿದ್ಯುತ್ ದರ ಏರಿಸಿದ್ದು ಜನರಿಗೆ ಸಾಕಷ್ಟು ತೊಂದರೆ ಆಗಿದೆ. ರೈತ ಮಕ್ಕಳ ಶಿಕ್ಷಣಕ್ಕೆ ವರವಾಗಿದ್ದ ರೈತ ವಿದ್ಯಾನಿಧಿ ಯೋಜನೆ ರದ್ದುಪಡಿಸಿ ಬಡವರ ಮಕ್ಕಳ ಶಿಕ್ಷಣಕ್ಕೆ ಕೊಕ್ಕೆ ಹಾಕಿದೆ. ಗೋ ಹತ್ಯೆ ಪ್ರೋತ್ಸಾಹಿಸುವ ಉದ್ದೇಶದಿಂದ ಗೋಶಾಲೆಗಳನ್ನು ಮುಚ್ಚಿಸಲಾಗುತ್ತಿದೆ. ರೈತರಿಗೆ ವರವಾಗಿರುವ ಭೂ ಸಿರಿ ಯೋಜನೆ ರದ್ದುಪಡಿಸಲಾಗುತ್ತಿದೆ.
ಕೇಂದ್ರ ಸರ್ಕಾರದೊಂದಿಗೆ ಕಿಸಾನ್ ಸಮ್ಮಾನ್ ನಿಧಿ ಅಡಿ ಪೂರಕವಾಗಿ ರಾಜ್ಯ ಸರ್ಕಾರ ನೀಡುತ್ತಿದ್ದ ನಾಲ್ಕು ಸಾವಿರ ರೂ. ಬಂದ್ ಮಾಡಲಾಗಿದೆ. ಪ್ರತಿ ಎಕರೆಗೆ 250ರೂ. ನಂತೆ ನೀಡುತ್ತಿದ್ದ ಪ್ರೋತ್ಸಾಹಧನವನ್ನೂ ಹಿಂಪಡೆಯಲಾಗಿದೆ. ಜತೆಗೆ ಪ್ರಮುಖವಾಗಿ ನೀರಾವರಿ ಯೋಜನೆಗಳಿಗೆ ಯಾವುದೇ ಅನುದಾನ ನೀಡಿಲ್ಲವೆಂದು ವಾಗ್ದಾಳಿ ನಡೆಸಿದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ರಾಜ್ಯ ಸರ್ಕಾರ ರೈತ ವಿರೋಧಿ ನಡೆ ಅನುಸರಿಸುತ್ತಿದೆ. ಬಜೆಟ್ ನಲ್ಲಿ ನಮ್ಮ ಜಿಲ್ಲೆಯ ಯೋಜನೆಗಳಿಗೆ ಆದ್ಯತೆ ನೀಡಿಲ್ಲ. ಹನಿಮೂನ್ ಪಿರಿಯಡ್ ನಲ್ಲಿದ್ದಾರೆ. ಮುಂದೆ ಯೋಜನೆಗಳನ್ನು ಅನುಷ್ಠಾನ ಮಾಡದಿದ್ದರೆ ಹೋರಾಟ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳಿಂದ ಇತರ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗಿದೆ. ಶಕ್ತಿ ಯೋಜನೆಯಡಿ ಪುರುಷರಿಗೂ ಶೇ.50ರಷ್ಟು ಟಿಕೆಟ್ ದರ ಪಡೆದು ಪ್ರಯಾಣಿಸಲು ಅವಕಾಶ ನೀಡಬೇಕಿತ್ತು. ಇದರಿಂದ ಅನುಕೂಲವಾಗುತ್ತಿತ್ತು. ರೈಲ್ವೆ ಯೋಜನೆಗಳಿಗೂ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡಬೇಕೆಂದು ಒತ್ತಾಯಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲನಗೌಡ ಹೊಸಮನಿ, ಅಂದಪ್ಪ ಯಲ್ಲಮ್ಮನವರ ಇದ್ದರು.