5 ವರ್ಷಗಳಲ್ಲಿ ತುಮಕೂರಿನ ಚಿತ್ರಣವೇ ಬದಲು ಮಾಡುತ್ತೇನೆಂದು ಭರವಸೆ ನೀಡಿದ ಜ್ಯೋತಿಗಣೇಶ್

BJP Jyotiganesh Campaign
Published on

ತುಮಕೂರು: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೋಡಿ ಬಳಿಕ ಬಿಜೆಪಿ ಕಾರ್ಯಕರ್ತರಲ್ಲಿ ರಣೋತ್ಸಾಹ ಹೆಚ್ಚಿದೆ. ಇದಕ್ಕೆ ಸಾಕ್ಷಿಯೆಂಬಂತೆ ನಗರದ ಅರಳೆಪೇಟೆ, ಹೊರಪೇಟೆ, ಎಂಜಿ ರಸ್ತೆಗಳಲ್ಲಿ ಶಾಸಕ, ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್ ಶನಿವಾರ ಭರ್ಜರಿ ಮತಬೇಟೆ ನಡೆಸಿದರು.

ಪಾದಯಾತ್ರೆ ಮೂಲಕ ಮನೆ, ಅಂಗಡಿಗಳಿಗೆ ಭೇಟಿ ನೀಡಿ ಮತಯಾಚಿಸಿದ ಜ್ಯೋತಿಗಣೇಶ್, ಸ್ಮಾರ್ಟ್‌ಸಿಟಿ ಯೋಜನೆ ಅಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ತುಮಕೂರಿನ ಚಿತ್ರಣವನ್ನೇ ಬದಲಿಸಿದೆ. ಅಮಾನಿಕೆರೆಗೆ ಹೇಮೆ ನೀರು ತುಂಬಿಸುವ ಮೂಲಕ ನಗರದಲ್ಲಿ ಅಂತರ್ಜಲ ವೃದ್ಧಿಗೆ ಒತ್ತುಕೊಡಲಾಗಿದೆ. ಇನ್ನು ಬುಗಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಕಾಲಕಾಲಕ್ಕೆ ಹೇಮೆ ನೀರು ತುಂಬಿಸಿ ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಲಾಗಿದೆ. ಡಬಲ್ ಇಂಜಿನ್ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಯಲು ಬಿಜೆಪಿಯನ್ನು ಮತ್ತೊಮ್ಮೆ ಬೆಂಬಲಿಸುವಂತೆ ಮನವಿ ಮಾಡಿದರು. ಟಿ.ಎಸ್.ನಿರಂಜನ್ ಉಪಸ್ಥಿತರಿದ್ದರು.

ಶಿರಾಗೇಟ್, ಯಲ್ಲಾಪುರದಲ್ಲೂ ಪ್ರಚಾರ: ನಗರ ಹೊರವಲಯದ ವಾರ್ಡ್‌ಗಳಲ್ಲೂ ಜ್ಯೋತಿಗಣೇಶ್ ಮತ ಪ್ರಚಾರ ಮುಂದುವರಿಸಿದರು. ಯಲ್ಲಾಪುರ, ಅಂತರಸನಹಳ್ಳಿ, ಶಿರಾಗೇಟ್, ನಾಗಣ್ಣನಪಾಳ್ಯ, ಅರಳೀಮರದ ಪಾಳ್ಯ ಭಾಗಗಳಲ್ಲಿ ನೂರಾರು ಕಾರ್ಯಕರ್ತರೊಂದಿಗೆ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.

ಮಾಜಿ ಸಚಿವ ಡಿ.ಎಸ್.ವೀರಯ್ಯ ಸಾಥ್: ಮಾಜಿ ಸಚಿವ ಡಿ.ಎಸ್.ವೀರಯ್ಯ ನೇತೃತ್ವದಲ್ಲಿ ನಗರದ 22ನೇ ವಾರ್ಡ್‌ನಲ್ಲಿ ಜ್ಯೋತಿಗಣೇಶ್ ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಪಕ್ಷದ ಮುಖಂಡರು ಬಿಜೆಪಿ ತತ್ವ ಸಿದ್ಧಾಂತಗಳನ್ನು ಹಾಗೂ ಜಿ.ಬಿ.ಜ್ಯೋತಿಗಣೇಶ್ ಅಭಿವೃದ್ಧಿ ಕಾರ್ಯವೈಖರಿ ಮೆಚ್ಚಿ ಪಕ್ಷ ಸೇರ್ಪಡೆಯಾದರು. ಜ್ಯೋತಿಗಣೇಶ್ ಎಲ್ಲರಿಗೂ ಪಕ್ಷದ ಬಾವುಟ ಕೊಟ್ಟು ಬರಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net