ಬಿಜೆಪಿ ನಂಟು, ಜೆಡಿಎಸ್ ಕಗ್ಗಂಟು

BJP JDSW
Published on

| ವಿಲಾಸ ಮೇಲಗಿರಿ ಬೆಂಗಳೂರು

ಭೂಸುಧಾರಣಾ ಕಾಯ್ದೆ, ಮೇಲ್ಮನೆ ಸಭಾಪತಿ ವಿರುದ್ಧ ಅವಿಶ್ವಾಸ ಸೇರಿ ವಿವಿಧ ವಿಷಯಗಳಲ್ಲಿ ಬಿಜೆಪಿ ಜತೆಗಿನ ಜೆಡಿಎಸ್ ವರಿಷ್ಠರ ಸಖ್ಯ ಪಕ್ಷಗಳಲ್ಲಿ ಮಾತ್ರವಲ್ಲ, ಸಾರ್ವಜನಿಕ ವಲಯದಲ್ಲೂ ನಾನಾ ರೀತಿಯ ವ್ಯಾಖ್ಯಾನಕ್ಕೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭೇಟಿ ಮಾಡುವುದು, ಕ್ಷೇತ್ರದ ಅಭಿವೃದ್ಧಿಗೆ ಅಚ್ಚರಿ ಮೂಡಿಸುವಷ್ಟು ಅನುದಾನ ಬಿಡುಗಡೆ ಮಾಡಿಸಿಕೊಳ್ಳುವುದು, ಕಾಂಗ್ರೆಸ್ ಅನ್ನು ಕಟುವಾಗಿ ವಿರೋಧಿಸುವ ಮೂಲಕ ಬಿಜೆಪಿ ಜತೆ ಬಾಂಧವ್ಯ ಬೆಳೆಸುತ್ತಿವುದಕ್ಕೆ ಜೆಡಿಎಸ್ ಶಾಸಕರೇ ಪೆಚ್ಚಾಗಿದ್ದಾರೆ. ಅನೇಕ ಶಾಸಕರು ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗ್ರಹಿಸಲಾಗದೆ ಕಂಗಾಲಾಗಿದ್ದಾರೆ. ಪಕ್ಷದ ತತ್ವ, ಸಿದ್ಧಾಂತ, ಜಾತ್ಯತೀತ ನಿಲುವುಗಳ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡು ಪಕ್ಷ ನಿಷ್ಠೆಯಲ್ಲಿದ್ದ ಶಾಸಕರಿಗೆ ಇತ್ತೀಚಿನ ವಿದ್ಯಮಾನಗಳು ದಿಕ್ಕುತೋಚದಂತೆ ಮಾಡಿವೆ.

ಬಿಜೆಪಿ, ಜೆಡಿಎಸ್ ‘ಮೈತ್ರಿ’ ಮೂಲಕ ವಿಧಾನಪರಿಷತ್ ಸಭಾಪತಿ ಪದಚ್ಯುತಿಗೆ ಸಜ್ಜಾಗಿರುವುದಂತೂ ಯಾರೂ ನಿರೀಕ್ಷಿಸದ ಬೆಳವಣಿಗೆ ಎಂದೇ ಜೆಡಿಎಸ್​ನಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಅಲ್ಲದೆ, ಈ ಬೆಳವಣಿಗೆ ಎರಡೂ ಪಕ್ಷಗಳ ನಂಟನ್ನು ಮತ್ತಷ್ಟು ಬಲಗೊಳಿಸಿದೆ. ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಖುದ್ದು ಪ್ರಧಾನ ಮಂತ್ರಿಯೇ ಶುಭ ಹಾರೈಸಿರುವುದು ಅಚ್ಚರಿ ಮೂಡಿಸಿದೆ. ಜತೆಗೆ ಕೇಂದ್ರದ ಮೂವರು ಸಚಿವರು, ಸಂಸದರು, ರಾಜ್ಯದ 8 ಸಚಿವರು ಶುಭ ಕೋರಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಅಲ್ಲದೆ, ಈ ಬೆಳವಣಿಗೆ ಜೆಡಿಎಸ್​ನಲ್ಲಿ ಹೊಸ ಚೈತನ್ಯ ಉಂಟು ಮಾಡಿದೆ. ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನ ಬಳಿಕ ಅನೇಕ ಶಾಸಕರು ಕುಮಾರಸ್ವಾಮಿ ಜತೆ ಮುನಿಸಿಕೊಂಡಿದ್ದರು. ಬಹುತೇಕರು ಇನ್ನೂ ‘ಅಂತರ’ ಕಾಯ್ದುಕೊಂಡಿದ್ದಾರೆ. ಮತ್ತೆ ಕೆಲವರು ತಾಂತ್ರಿಕವಾಗಿ ಜೆಡಿಎಸ್​ನಲ್ಲಿದ್ದು, ಚುನಾವಣೆ ಸಮೀಪಿಸುವಾಗ ಬಿಜೆಪಿ ಸೇರುವ ನಿರೀಕ್ಷೆ ಇಟ್ಟುಕೊಂಡಿದ್ದರು. ಅಂತಹವರಲ್ಲಂತೂ ಇತ್ತೀಚಿನ ಪಕ್ಷದ ಬೆಳವಣಿಗೆಗಳು ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ.

ದೇವೇಗೌಡ ತಟಸ್ಥ: ಬಿಜೆಪಿಯನ್ನು ಕಂಡರೆ ಕೆಂಡಾಮಂಡಲರಾಗುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರು ಪುತ್ರ ಕುಮಾರಸ್ವಾಮಿ ಬಿಜೆಪಿ ಜತೆ ಬಾಂಧವ್ಯ ಬೆಳೆಸುವುದನ್ನು ಎಲ್ಲೂ ಟೀಕಿಸುತ್ತಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಮಸೂದೆ ಮಂಡನೆಗೆ ತಮ್ಮ ವಿರೋಧವಿದೆ ಎಂಬ ಹೇಳಿಕೆ ಬಿಟ್ಟರೆ ಉಳಿದೆಲ್ಲ ವಿಚಾರಗಳಲ್ಲಿ ತಟಸ್ಥರಾಗಿದ್ದಾರೆ. ಇದು ಕೂಡ ರಾಜಕೀಯ ಚಾಣಾಕ್ಷತನ ಎಂದೇ ಅರ್ಥೈಸಲಾಗುತ್ತಿದೆ.

ಡಬಲ್ ಧಮಾಕಾ: ರಾಜ್ಯದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಕುಮಾರಸ್ವಾಮಿ ಚದುರಂಗದಾಟಕ್ಕೆ ಪೂರಕವಾಗಿವೆ. ಒಂದೆಡೆ ಯಡಿಯೂರಪ್ಪ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಜತೆಗೂ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ. ರಾಜ್ಯದ ರಾಜಕೀಯ ಅತಂತ್ರ ಸ್ಥಿತಿ ತಲುಪಿದರೆ, ಅಧಿಕಾರ ಗದ್ದುಗೆ ಏರಲು ತಮಗೆ ಅನುಕೂಲವಾಗಬಹುದೆಂಬ ಲೆಕ್ಕಾಚಾರವನ್ನು ಯಡಿಯೂರಪ್ಪ ಇಟ್ಟುಕೊಂಡಿದ್ದಾರೆ. ಬಿಜೆಪಿ ದೆಹಲಿ ಹೈಕಮಾಂಡ್ ಕೂಡ ಇದೇ ಕುಮಾರಸ್ವಾಮಿ ಅವರನ್ನು ವಿಶ್ವಾಸದಲ್ಲಿಟ್ಟುಕೊಳ್ಳುವ ತಂತ್ರಗಾರಿಕೆ ನಡೆಸಿದೆ.

ಸಚಿವ ಸ್ಥಾನದ ಆಸೆ: ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂಬ ನಿರೀಕ್ಷೆಯಲ್ಲಿರುವ ಜೆಡಿಎಸ್, ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಪರಿಸ್ಥಿತಿ ತಲೆದೋರಿದರೆ ನಿರ್ಣಾಯಕ ಪಾತ್ರ ಸಿಗುತ್ತದೆ ಎಂಬ ಆಲೋಚನೆಯಲ್ಲಿದೆ. ಇದೇ ತಂತ್ರಗಾರಿಕೆ

ಮನವರಿಕೆ ಮಾಡಿಕೊಟ್ಟು ಸಿ.ಎಂ.ಇಬ್ರಾಹಿಂರನ್ನು ಪಕ್ಷದತ್ತ ಸೆಳೆಯುವ ಪ್ರಯತ್ನ ನಡೆದಿದೆ. ಜತೆಗೆ ಜೆಡಿಎಸ್​ನಿಂದ ಎರಡೂ ಕಾಲು ಹೊರಗಿಟ್ಟಿದ್ದ ಜಿ.ಟಿ. ದೇವೇಗೌಡರನ್ನು ಒಂದು ಹಂತದಲ್ಲಿ ಸಂತೈಸುವ ಕೆಲಸ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಸಚಿವರು ಆಕಾಂಕ್ಷಿಗಳಿಗೆ ಕಸಿವಿಸಿ

ಜೆಡಿಎಸ್​ನಿಂದ ಕಾಲುಕಿತ್ತು ಬಿಜೆಪಿ ಸೇರಿ ಸಚಿವರಾಗಿರುವ ಕೆ.ಗೋಪಾಲಯ್ಯ, ನಾರಾಯಣಗೌಡ, ಮಂತ್ರಿ ಸ್ಥಾನದ ಆಕಾಂಕ್ಷೆ ಹೊಂದಿರುವ ಅಡಗೂರು ವಿಶ್ವನಾಥ್ ಹಾಗೂ ಸಿ.ಪಿ.ಯೋಗೇಶ್ವರ್ ಅವರಿಗಂತೂ ಜೆಡಿಎಸ್, ಬಿಜೆಪಿ ಜತೆ ಬೇಳೆ ಬೇಯಿಸಿಕೊಳ್ಳುತ್ತಿರುವುದು ಇರಿಸುಮುರಿಸು ಉಂಟು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net