

ಬೆಂಗಳೂರು: ಬಿಜೆಪಿ ಜತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಖ್ಯ ಜೆಡಿಎಸ್ನಲ್ಲಿ ಅಪಸ್ವರಕ್ಕೆ ಕಾರಣವಾಗಿದೆ. ಭೂಸುಧಾರಣಾ ತಿದ್ದುಪಡಿ ವಿಧೇಯಕ ಒಪ್ಪಿಗೆ ಸೂಚಿಸಿದ್ದಂತೂ ಜೆಡಿಎಸ್ನಲ್ಲಿ ದೊಡ್ಡ ಅಸಮಾಧಾನ ಉಂಟು ಮಾಡಿದೆ. ಅಲ್ಲದೆ ಈ ಕಾಯ್ದೆ ವಿಚಾರದಲ್ಲಿ ಬೆಳಗ್ಗೆ ಒಂದು, ಸಂಜೆ ಇನ್ನೊಂದು ನಿಲುವು ವ್ಯಕ್ತವಾದ್ದಂತೂ ಪಕ್ಷಕ್ಕೆ ದೊಡ್ಡ ಮುಜುಗರ ಉಂಟು ಮಾಡಿದೆ. ಈ ಎಲ್ಲ ಗೊಂದಲಗಳಿಗೆ ತೇಪೆ ಹಾಕಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶೀಘ್ರದಲ್ಲೇ ರಂಗ ಪ್ರವೇಶಿಸಲಿದ್ದಾರೆ.
ಕುಮಾರಸ್ವಾಮಿ ಏಕಾಏಕಿ ನಿರ್ಧಾರ ಕೈಗೊಳ್ಳುವುದು, ಪಕ್ಷದ ವೇದಿಕೆಯಲ್ಲಿ ರ್ಚಚಿಸದೆ ಸರ್ಕಾರದ ಜತೆ ಕೈ ಮಿಲಾಯಿಸುವುದು ಶಾಸಕರ ಅತೃಪ್ತಿಗೆ ಕಾರಣವಾಗಿದೆ. ಕಾಂಗ್ರೆಸ್ ಜತೆ ಸರ್ಕಾರ ಮಾಡಿ, ಈಗ ಬಿಜೆಪಿ ಜತೆ ಕೈ ಜೋಡಿಸಲು ಮುಂದಾಗುತ್ತಿರುವುದರಿಂದ ಉಂಟಾಗುತ್ತಿರುವ ರಾಜಕೀಯ ಪರಿಣಾಮಗಳ ಬಗ್ಗೆಯೂ ಅನೇಕರು ಚಿಂತಾಕ್ರಾಂತರಾಗಿದ್ದಾರೆ. ಬಿಜೆಪಿಯನ್ನು ತನ್ನ ರಾಜಕೀಯ ಕಡು ವೈರಿ ಎಂದುಕೊಂಡ ಶಾಸಕರಂತೂ ಕುಮಾರಸ್ವಾಮಿ ನಡೆ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ದ್ವಂದ್ವ ನಿಲುವು ತಳೆದದ್ದಂತೂ ಹಲವು ಶಾಸಕರಿಗೆ ನುಂಗಲಾರದ ತುತ್ತಾಗಿದೆ. ಯಾವ ಆಯಾಮದಲ್ಲೂ ಸಮರ್ಥಿಸಿಕೊಳ್ಳಲು ಸಾಧ್ಯವಾಗದ ಇಕ್ಕಟ್ಟಿಗೆ ಇನ್ನು ಕೆಲವರು ಸಿಲುಕಿದ್ದಾರೆ. ಬಿಜೆಪಿ ಬಗ್ಗೆ ಜೆಡಿಎಸ್ ವರಿಷ್ಠರ ಮೃಧು ಧೋರಣೆ ಕೂಡ ಪಕ್ಷದ ವಲಯದಲ್ಲಿ ಬಹು ವಿಧದ ಚರ್ಚೆಗೆ ಗ್ರಾಸವಾಗಿದೆ. ಅನೇಕ ಶಾಸಕರು ಇದರ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದು, ವರಿಷ್ಠರ ಜತೆಗಿನ ಒಡನಾಟದಿಂದಲೇ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಭೂಸುಧಾರಣಾ ಕಾಯ್ದೆ ವಿಚಾರದಲ್ಲಿ ಮೇಲ್ಮನೆಯ ಕೆಲವು ಶಾಸಕರು ಹೈಕಮಾಂಡ್ ನಿರ್ದೇಶನವನ್ನೂ ಮೀರಿ ಕಲಾಪದಿಂದ ಹೊರಗುಳಿದಿದ್ದರು. ಕಾಯ್ದೆಗೆ ಬೆಂಬಲ ಸೂಚಿಸಿದ್ದು ಸಾಮಾಜಿಕ ಜಾಲತಾಣ, ಸಾರ್ವಜನಿಕ ವಲಯದಲ್ಲಿ ಮತ್ತು ಪಕ್ಷದ ಭೂಮಿಕೆಯಲ್ಲಿ ವಿಭಿನ್ನ ವ್ಯಾಖ್ಯಾನಕ್ಕೆ ಆಸ್ಪದ ಮಾಡಿಕೊಟ್ಟಿದೆ. ರೈತ ಮುಖಂಡರೊಬ್ಬರು ಕುಮಾರಸ್ವಾಮಿ ‘ಡೀಲ್ ಮಾಸ್ಟರ್’ ಎಂದು ಆರೋಪಿಸಿದರೆ, ಎಡಪಕ್ಷಗಳು ‘ಕುಮಾರಸ್ವಾಮಿ ನಿಜ ಬಣ್ಣ ಬಯಲಾಗಿದೆ’ ಎಂದು ಟೀಕಿಸಿದ್ದವು.
ಇನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬೆಳಗ್ಗೆ ಜೆಡಿಎಸ್ನವರು ಭೂಸುಧಾರಣಾ ಕಾಯ್ದೆ ವಿರುದ್ಧದ ಚಳವಳಿಯಲ್ಲಿ ಭಾಗವಹಿಸುತ್ತಾರೆ. ಸಂಜೆ ವಿಧೇಯಕಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಇದೆಂತಹ ಪಕ್ಷ? ಮಣ್ಣಿನ ಮಕ್ಕಳೆಂದು ರೈತರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದರು. ಈ ಗೊಂದಲ ದೊಡ್ಡ ಮಟ್ಟದ ಆರೋಪ-ಪ್ರತ್ಯಾರೋಪಕ್ಕೆ ಇಂಬುಕೊಟ್ಟು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಈ ಡ್ಯಾಮೇಜ್ ಕಂಟ್ರೋಲ್ಗೆ ಕೈಹಾಕಿರುವ ಕುಮಾರಸ್ವಾಮಿ, ಭೂಸುಧಾರಣಾ ಕಾಯ್ದೆ ವಿಚಾರದಲ್ಲಿ ಸರ್ಕಾರ ತಮ್ಮ ಸಲಹೆಗಳನ್ನು ಸಮ್ಮತಿಸಿದೆ. ಹಾಗಾಗಿ ತಾವು ವಿಧೇಯಕಕ್ಕೆ ಒಪ್ಪಿಗೆ ಸೂಚಿಸಬೇಕಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ರೈತ ವಿರೋಧಿ ಎಂಬ ಭಾವನೆ ಬರದಂತೆ ನೋಡಿಕೊಳ್ಳುವ ಹಿನ್ನೆಲೆಯಲ್ಲಿ ಎಚ್.ಡಿ.ದೇವೇಗೌಡ ಖುದ್ದು ಆಖಾಡಕ್ಕಿಳಿಯಲಿದ್ದಾರೆ. ಶಾಸಕರಲ್ಲಿರುವ ವೈಮನಸ್ಸನ್ನು ಪರಿಹರಿಸಿ, ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.