

ಬೆಂಗಳೂರು: ರಾಜ್ಯದಲ್ಲಿ ಹಳೇ ಮೈಸೂರು, ಬೇರೆ ಪ್ರಾಂತ ಎನ್ನುವುದೇನಿಲ್ಲ. ಚುನಾವಣಾ ಪೂರ್ವ ಬಿಜೆಪಿ- ಜೆಡಿಎಸ್ ಮೈತ್ರಿ, ನಂತರ ಉಭಯ ಪಕ್ಷಗಳ ನಾಯಕರು ಸೇರಿಕೊಂಡು ಸಾಧಿಸಿದ ಸಮನ್ವಯ ವರ್ಕೌಟ್ ಆಗಿದೆ ಎಂದು ತುಮಕೂರು ಬಿಜೆಪಿ ಸಂಸದ ವಿ.ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಗೆದ್ದ ಖುಷಿಯಲ್ಲಿರುವ ಸೋಮಣ್ಣ, ಜೆ.ಪಿ.ನಗರ ನಿವಾಸದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬುಧವಾರ ಭೇಟಿ ಮಾಡಿ ಸಹಕಾರಕ್ಕೆ ಧನ್ಯವಾದ ಸಲ್ಲಿಸಿ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ರಾಜ್ಯದ ಜನರು ಯಾರಿಗೆ ಎಷ್ಟು ಗೌರವ ಕೊಡಬೇಕು ಕೊಟ್ಟಿದ್ದಾರೆ. ತುಮಕೂರು ಕ್ಷೇತ್ರದ ಜನರ ವಿಶ್ವಾಸ, ಆಶೀರ್ವಾದಿಂದ ಜಯ ಸಾಧ್ಯವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪ್ರಚಾರ, ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾರ್ಯತಂತ್ರ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ ಎಚ್.ಡಿ.ಕುಮಾರಸ್ವಾಮಿ ಸಂಚಾರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಪರಿಶ್ರಮ ತುಮಕೂರು ಮಾತ್ರವಲ್ಲದೆ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಅನುಕೂಲ ಮಾಡಿಕೊಟ್ಟಿದೆ ಎಂದರು.
ಉಭಯ ಪಕ್ಷಗಳು ನಾಯಕರು ಸಮನ್ವಯ, ಜಂಟಿಯಾಗಿ ಕಾರ್ಯನಿರ್ವಹಣೆ ಕುರಿತು ಮತ್ತೊಷ್ಟು ಮಾತುಕತೆ, ಶ್ರಮ ಹಾಕಿದ್ದರೆ ರಾಜ್ಯದ ಇನ್ನೂ 2-3 ಕ್ಷೇತ್ರಗಳಲ್ಲಿ ಪಕ್ಷಕ್ಕೆ ಗೆಲುವಿನ ಅವಕಾಶವಿತ್ತು ಎಂದು ವಿ.ಸೋಮಣ್ಣ ವಿಶ್ಲೇಷಿಸಿದರು.
ಉಭಯ ಪಕ್ಷಗಳ ಮೈತ್ರಿ, ಸಮನ್ವಯ ಸಾಧನೆ ಬಗ್ಗೆ ಕುಮಾರಸ್ವಾಮಿ ಜತೆಗೆ ಹಂಚಿಕೊಂಡು ಸಹಕಾರಕ್ಕೆ ಧನ್ಯವಾದ ತಿಳಿಸಿದರು. ಹಿರಿಯರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ನಮ್ಮ ನಾಯಕರಾದ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಇಂದು ಸಂಜೆ ಭೇಟಿಯಾಗುವೆ. ನಾಳೆ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲು ಉದ್ದೇಶಿಸಿರುವೆ ಎಂದು ಹೇಳಿದರು.