ಮೈತ್ರಿ ಒಗ್ಗಟ್ಟು ಕಾಂಗ್ರೆಸ್​ಗೆ ಇಕ್ಕಟ್ಟು

Untitled-design-2-4
Published on

ಸ್ಥಳೀಯ ಸಂಸ್ಥೆ ಚುನಾವಣೆಗೆ ಲೆಕ್ಕಾಚಾರ | ಪರಿಣಾಮಗಳ ಬಗ್ಗೆ ಚರ್ಚೆ

ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ ಹೊಸ ಲೆಕ್ಕಾಚಾರಗಳನ್ನು ತೆರೆದಿಟ್ಟ ಬೆನ್ನಲ್ಲೇ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಇತರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಗಬಹುದಾದ ಪರಿಣಾಮಗಳ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ಶುರುವಾಗಿದೆ.

ಸ್ಥಳೀಯ ಸಂಸ್ಥೆ ಚುನಾವಣೆಯು ಅಭ್ಯರ್ಥಿ ಪ್ರಾಧಾನ್ಯವಾಗಿ ನಡೆಯುವುದಾದರೂ ಮೈತ್ರಿ ಹೋರಾಟ ರಾಜಕೀಯ ಚಿತ್ರಣ ಬದಲು ಮಾಡುವ ಸಾಧ್ಯತೆಯನ್ನು ಕೈ ನಾಯಕರು ತಳ್ಳಿಹಾಕುತ್ತಿಲ್ಲ. ಜತೆಗೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ಮತಗಳು ಒಟ್ಟಾಗಿದ್ದು ಸ್ಪಷ್ಟವಾಗಿ ಅರಿವಿಗೆ ಬಂದಿದೆ. ಸ್ಥಳೀಯ ಸಂಸ್ಥೆಯಲ್ಲೂ ಇಂತಹದ್ದೇ ಪರಿವರ್ತನೆಯನ್ನು ಬಿಜೆಪಿ ಮತ್ತು ಜೆಡಿಎಸ್ ಬಯಸಿದಂತೆಯೂ ಕಾಣಿಸಿದ್ದನ್ನು ಕೈ ನಾಯಕರು ಗಮನಿಸಿದ್ದಾರೆ. ಒಂದು ವೇಳೆ ಜೆಡಿಎಸ್- ಬಿಜೆಪಿ ಒಟ್ಟಾಗಿ ತಂತ್ರ ರೂಪಿಸಿದ್ದೇ ಆದರೆ ತಳಮಟ್ಟದಲ್ಲಿ ತೀವ್ರ ಪ್ರತಿರೋಧ ಎದುರಿಸಬೇಕಾಗಿ ಬರಬಹುದು ಎಂದು ಕೆಪಿಸಿಸಿ ಪದಾಧಿಕಾರಿಗಳೇ ಅಭಿಪ್ರಾಯಪಡುತ್ತಾರೆ.

ಜನತಾ ಪರಿವಾರ ಗಟ್ಟಿಯಾಗಿದ್ದ ಸಂದರ್ಭ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದೇ ಹೆಚ್ಚು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು ಇತಿಹಾಸ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಗ್ಯಾರಂಟಿ ಯೋಜನೆಯ ಅನುಷ್ಠಾನ ಮಾಡಿರುವುದರಿಂದ ಕೈ ನಾಯಕರು ಪೂರ್ಣ ಹಿಡಿತ ಸಾಧಿಸಲು ಬಯಸಿದ್ದಾರೆ. ಈ ನಡುವೆ ಮೈತ್ರಿ ಸವಾಲು ಎದುರಾಗಿದೆ. ಇದು ತಾಪತ್ರಯ ಕೊಡಬಹುದು ಎಂದೂ ಅಂದಾಜಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ಮತಗಳು ಒಗ್ಗೂಡಿದ ಪರಿಣಾಮ 147 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಂದೆ ಬಿದ್ದಿದೆ. ಇದೇ ಟ್ರೆಂಡ್ ಮುಂದುವರಿಸುವ ಆಲೋಚನೆ ಬಿಜೆಪಿ- ಜೆಡಿಎಸ್ ನಾಯಕರಿಗಿದ್ದಂತಿದೆ.

ಮೈತ್ರಿ ಅಂದಾಜು: ಲೋಕಸಭೆ ಚುನಾವಣೆಯಲ್ಲಿನ ಮೈತ್ರಿ ಯನ್ನು ವಿವಿಧ ಹಂತದವರೆಗೂ ಮುಂದುವ ರಿಸುವ ವಿಚಾರದಲ್ಲಿ ಬಿಜೆಪಿ- ಜೆಡಿಎಸ್ ನಡುವೆ ಯಾವುದೇ ಸ್ಪಷ್ಟ ಮಾತುಕತೆ ಇನ್ನೂ ನಡೆದಿಲ್ಲ. ಎರಡೂ ಪಕ್ಷದ ನಾಯಕರು ಮಾತ್ರ ಒಲವು ಹೊಂದಿರುವುದು ಅವರ ಹೇಳಿಕೆಯಿಂದ ಬಹಿರಂಗವಾಗುತ್ತಿದೆ. ಮೈತ್ರಿಯ ರುಚಿಯಿಂದ ಲೋಕಸಭೆಯಲ್ಲಿ ಲಾಭವಾಗಿದ್ದಲ್ಲದೇ, ಪರಿಷತ್​ಗೆ ನಡೆದ ಚುನಾವಣೆಯಲ್ಲೂ ಜೆಡಿಎಸ್​ಗೆ ವರದಾನವಾಯಿತು. ಹೀಗಾಗಿ ಆ ಪಕ್ಷದವರು 2ನೇ ಆಲೋಚನೆ ಮಾಡುವ ಸ್ಥಿತಿಯಲ್ಲಿಲ್ಲ.

ಹಾಗೆ ನೋಡಿದರೆ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಇತರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಎಷ್ಟು ಲಾಭ, ಫ್ರೆಂಡ್ಲಿ ಫೈಟ್ ಮಾಡಿದರೆ ಯಾವ ರೀತಿ ಅನುಕೂಲ ಎಂಬ ಕುರಿತು ಅನೌಪಚಾರಿಕ ಚರ್ಚೆಯಂತೂ ಕೆಳಹಂತದ ನಾಯಕರ ನಡುವೆ ನಡೆದಿದೆ. ಅಂತಿಮವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿರ್ಧಾರ ಮಾಡುತ್ತಾರೆ. ಅದಕ್ಕೂ ಮುನ್ನ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರಕ್ಕೆ ಬರಲಾಗುತ್ತದೆ. ಪೂರ್ವ ಅಂದಾಜಿನಂತೆ ಕೆಲವು ಭಾಗದಲ್ಲಿ ತ್ರಿಕೋನ ಸ್ಪರ್ಧೆ ನಡೆದಾಗಲಷ್ಟೇ ಬಿಜೆಪಿಗೆ ಅಥವಾ ಜೆಡಿಎಸ್​ಗೆ ಅನುಕೂಲಕರವಾಗಲಿದೆ. ಇನ್ನು ಕೆಲವು ಪ್ರದೇಶದಲ್ಲಿ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಿ ಕಾಂಗ್ರೆಸ್ ವಿರೋಧಿ ಮತಗಳನ್ನು ಒಗ್ಗೂಡಿಸಲು ಸಾಧ್ಯವಾಗುತ್ತದೆ. ತಳಮಟ್ಟದ ಅಭಿಪ್ರಾಯ ಸಂಗ್ರಹಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್​ಗೆ ಅತೀ ಮುಖ್ಯ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಒಂದು ಮಿನಿ ಸರ್ಕಾರ ಇದ್ದಂತೆ, ಇಲ್ಲಿ ಅಧಿಕಾರ ಹಿಡಿಯುವುದು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ವಿಚಾರ. ಅದರಲ್ಲೂ ದೊಡ್ಡ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೇರಿ ಒಂದು ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್​ಗೆ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯುವುದು ಅತೀ ಮುಖ್ಯವಾಗಲಿದೆ. ಹಾಗೆಯೇ ಜಿಲ್ಲಾ ಆಡಳಿಗಳು ಮತ್ತು ವಿವಿಧ ಪಾಲಿಕೆಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಹಿಂದೆ ಬಿದ್ದರೆ ಇಡೀ ನಾಡಿಗೆ ನಕಾರಾತ್ಮಕ ಸಂದೇಶ ಹೋಗಲಿದೆ. ಇದೇ ಕಾರಣಕ್ಕೆ ಕಾಂಗ್ರೆಸ್​ಗೆ ಮುಂಬರುವ ಚುನಾವಣೆ ಗೆಲ್ಲುವುದು ಅತೀ ಮುಖ್ಯವಾಗಿರಲಿದೆ.

ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯಕ್ಕೆ ಲಭಿಸಿದ ಬಂಪರ್ ಪ್ರಾತಿನಿಧ್ಯವು ರಾಜ್ಯ ಬಿಜೆಪಿಯಲ್ಲಿ ಖುಷಿ ಇಮ್ಮಡಿಸುವಂತೆ ಮಾಡಿದೆ. ಮುಂದೆ ಎದುರಾಗುವ ಸ್ಥಳೀಯ ಸಂಸ್ಥೆಗಳ ಚುನಾವಣೆ ದೃಷ್ಟಿಯಿಂದ ಸಂಘಟನೆ ಬಲವರ್ಧನೆಗೆ ನೆರವಿನ ನಿರೀಕ್ಷೆಯಿದೆ. ಹಾಗೆ ನೋಡಿದರೆ ಕೇಂದ್ರ ಸಚಿವರಾದವರಿಗೂ ಪಕ್ಷ ಸಂಘಟನೆಗೂ ಹೆಚ್ಚೇನು ನಂಟಿಲ್ಲ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪ್ರತಿಯೊಂದು ನಿರ್ಧಾರವೂ ಪಕ್ಷದ ನೆಲೆಯಲ್ಲಿ ಪ್ರಾಮುಖ್ಯತೆ ಪಡೆದಿದೆ.

ಆಡಳಿತಾರೂಢ ಕಾಂಗ್ರೆಸ್ ಅಬ್ಬರ, ಗ್ಯಾರಂಟಿಗಳ ಪ್ರಭಾವ ಮೆಟ್ಟಿನಿಂತು ಲೋಕಸಭೆ ಚುನಾವಣೆಯಲ್ಲಿ ಗೆದ್ದ ಉಮೇದಿ ಕಾಪಿಟ್ಟುಕೊಳ್ಳಲು ಸಾಧ್ಯವಾಗಲಿದೆ. ಕೇಂದ್ರ ಮಂತ್ರಿ ಮಂಡಲದಲ್ಲಿ ರಾಜ್ಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ದೊರೆತಿದೆ. ಪಕ್ಷದ ವರಿಷ್ಠರ ನಿರ್ಧಾರದ ಬಗ್ಗೆ ತಳಮಟ್ಟದ ಕಾರ್ಯಕರ್ತರಲ್ಲಿ ಹೆಮ್ಮೆ, ಅಭಿಮಾನ ಮೂಡಿಸುತ್ತದೆ. ಅಂತಿಮವಾಗಿ ಸಂಘಟನೆಯಲ್ಲಿ ಚೈತನ್ಯ ತುಂಬಿ, ಕಾರ್ಯಯೋಜನೆ ಪರಿಣಾಮಕಾರಿ ಅನುಷ್ಠಾನದ ಛಲ, ಪರಿಶ್ರಮಕ್ಕೆ ಒತ್ತಾಸೆ ನೀಡುತ್ತದೆ ಎಂಬುದು ಹಿರಿಯ ನಾಯಕರೊಬ್ಬರ ವಿಶ್ಲೇಷಣೆಯಾಗಿದೆ.

ಸಮತೋಲನದ ಸಂದೇಶ: ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ಅವಕಾಶ ಕಲ್ಪಿಸಿ ಸಾಮಾಜಿಕ ನ್ಯಾಯ ಪಾಲಿಸಲಾಗಿದೆ. ಮೈಸೂರು ಭಾಗ, ಕಿತ್ತೂರು ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಿ ಪ್ರಾದೇಶಿಕ ಸಮತೋಲನದ ಸಂದೇಶ ರವಾನಿಸಲಾಗಿದೆ. ಕರಾವಳಿ ಭಾಗದಿಂದ ಮೊದಲ ಬಾರಿಗೆ ಗೆದ್ದವರು, ಕಲ್ಯಾಣ ಕರ್ನಾಟಕದಿಂದ ಯಾವೊಬ್ಬ ಬಿಜೆಪಿ ಸಂಸದರಿಲ್ಲ. ರಾಜ್ಯದ ನೆಲೆಯಲ್ಲಿ ಹಿಂದುಳಿದವರು, ದಲಿತರಿಗೆ ಅವಕಾಶ ಸಿಕ್ಕಿಲ್ಲ. ಒಟ್ಟು ಸಚಿವ ಸಂಪುಟ ಗಮನಿಸಿದರೆ ಸೋಷಿಯಲ್ ಇಂಜಿನಿಯರಿಂಗ್ ಸ್ಪಷ್ಟವಾಗಲಿದೆ ಎಂದು ಮೂಲಗಳು ಹೇಳುತ್ತವೆ.

ಹುರುಪಿಗೆ ಆದ್ಯತೆ: ಬಿಬಿಎಂಪಿ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಇದೇ ವರ್ಷ ನಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಲು ಆದ್ಯತೆ ನೀಡಲಾಗಿದೆ. ಮೇಲುಗೈ ಸಾಧಿಸುವ ಛಲ, ಉಮೇದಿ ನಾಯಕರಲ್ಲೂ ಇದೇ ಎಂದು ಸೂಚ್ಯವಾಗಿ ತಿಳಿಸಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗಿನ ಮೈತ್ರಿ ಎರಡೂ ಪಕ್ಷಗಳಿಗೆ ಲಾಭ ತಂದುಕೊಟ್ಟಿದ್ದು, ಮೈತ್ರಿಧರ್ಮ ಪಾಲನೆ ಭಾಗವಾಗಿ ಎಚ್.ಡಿ.ಕುಮಾರಸ್ವಾಮಿ ಸೇರ್ಪಡೆಯಾಗಿದ್ದಾರೆ. ಈ ಮೈತ್ರಿಯು ಲೋಕಸಭೆ ಚುನಾವಣೆಗೆ ಸೀಮಿತವಲ್ಲ, ಮುಂದುವರಿಯಲಿದೆ ಎನ್ನುವ ಆಶಯ, ಅಪೇಕ್ಷೆ ವ್ಯಕ್ತವಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net