ಬಿಜೆಪಿ, ಜೆಡಿಎಸ್ ಮೈತ್ರಿ: ವೈಯಕ್ತಿಕ ಪ್ರತಿಷ್ಠೆ, ಸಮನ್ವಯದ ಸಮಸ್ಯೆ|BJP, JDS Alliance problem

BJP and JDS
Published on

ಬೆಂಗಳೂರು: ಬಿಜೆಪಿ, ಜೆಡಿಎಸ್ ನಡುವಿನ ಮೈತ್ರಿ ದಿನೇ ದಿನೆ ಹಳಿ ತಪ್ಪುತ್ತಿದೆ. ವೈಯಕ್ತಿಕ ಪ್ರತಿಷ್ಠೆ, ಸಮನ್ವಯದ ಸಮಸ್ಯೆಯಿಂದ ಮೈತ್ರಿಧರ್ಮಕ್ಕೆ ಚ್ಯುತಿ ಬಂದಿದೆ(BJP, JDS alliance: A problem of personal prestige, coordination).

ಲೋಕಸಭೆ ಚುನಾವಣೆಯಲ್ಲಿ ಜೋಡೆತ್ತಿನ ರೀತಿಯಲ್ಲಿ ಹೋರಾಡಿ ಯಶಸ್ಸು ಕಂಡ ಮೈತ್ರಿ ಪಕ್ಷಗಳು ಬಳಿಕ ಸಮನ್ವಯದ ಕೊರತೆ ಎದುರಿಸುತ್ತಿವೆ. ಇದರ ಪರಿಣಾಮ ಈಗ ಢಾಳಾಗಿ ಕಾಣಿಸುತ್ತಿದೆ.

ಮುಡಾ ಪಾದಯಾತ್ರೆಯೊಂದನ್ನು ಹೊರತುಪಡಿಸಿದರೆ ಉಳಿದಂತೆ ಸರ್ಕಾರದ ವಿರುದ್ಧ ನಡೆದ ಎಲ್ಲ ಹೋರಾಟಗಳಲ್ಲೂ ಬಿಜೆಪಿ, ಜೆಡಿಎಸ್ ತಮ್ಮ ತಮ್ಮ ಹಾದಿ ತುಳಿದಿವೆ. ತಮ್ಮ ಅಸ್ತಿತ್ವ, ಅಸ್ಮಿತೆಯ ಉಳಿವಿಗೆ ಹೆಣಗಾಡುತ್ತಿವೆ.

ಮುಡಾ ಪಾದಯಾತ್ರೆಯಲ್ಲಿ ತೋರಿದ ಉತ್ಸುಕತೆಯನ್ನು ಉಭಯ ಪಕ್ಷಗಳು ಸರ್ಕಾರದ ವಿರುದ್ಧ ನಡೆದ ಯಾವುದೇ ಹೋರಾಟದಲ್ಲಿ ತೋರಿಸಿಲ್ಲ. ಪಾದಯಾತ್ರೆಯಲ್ಲಿ ತಮ್ಮ ವೈಯಕ್ತಿಕ ಪ್ರತಿಷ್ಠೆಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆಯಿಂದ ಬಿಜೆಪಿ ಹಾಗೂ ಜೆಡಿಎಸ್ ಒಗ್ಗೂಡಿದ್ದವು.

ತರುವಾಯ ಬಜೆಟ್ ಅಧಿವೇಶನಕ್ಕೆ ಮುನ್ನ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ನ ಕೆಲವು ನಾಯಕರು ಕಾಣಿಸಿಕೊಂಡಿದ್ದನ್ನು ಬಿಟ್ಟರೆ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟದಲ್ಲಿ ಎರಡೂ ಪಕ್ಷಗಳು ಅಂತರ ಕಾಯ್ದುಕೊಂಡಿವೆ.

ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಕಾರ್ಯಬಾಹುಳ್ಯದ ಒತ್ತಡದಲ್ಲಿರುವುದರಿಂದ ಹಾಗೂ ದೆಹಲಿಯಲ್ಲೇ ಹೆಚ್ಚು ಕಾಲ ಬೀಡು ಬಿಡಬೇಕಾಗಿರುವುದರಿಂದ ಜತೆಗೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆಗೆ ಉತ್ತಮ ಬಾಂಧವ್ಯ ಹೊಂದಿರುವ ಕಾರಣ ಸಣ್ಣಪುಟ್ಟ ಹೋರಾಟಗಳಿಗೆ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕುಮಾರಸ್ವಾಮಿ ಅವರ ಜತೆ ಸಮನ್ವಯ ಸಾಧಿಸಲು ರಾಜ್ಯ ಬಿಜೆಪಿ ನಾಯಕರು ಹಿಂದೇಟು ಹಾಕುತ್ತಿರುವುದೂ ಕೂಡ ಮೈತ್ರಿ ಸಮನ್ವಯ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

ಅಲ್ಲದೆ, ಕೆಳ ಹಂತದ ನಾಯಕರ ನಡುವೆ ಉಭಯ ಪಕ್ಷಗಳಲ್ಲಿ ಹೊಂದಾಣಿಕೆ ತೀರಾ ಕಡಿಮೆ. ಹಾಗಾಗಿ ತಮ್ಮ ಪಾಡಿಗೆ ತಾವು ಹೋರಾಟ ನಡೆಸುತ್ತಿವೆ.

ಜೆಡಿಎಸ್ ಪೆಟ್ರೋಲ್ ಬೆಲೆ ಏರಿಕೆ, ಮೆಟ್ರೋ ಪ್ರಯಾಣ ದರ ಹೆಚ್ಚಳ, ಸ್ಟಾಂಪ್ ಡ್ಯೂಟಿ ಏರಿಕೆ, ಪ್ರಜ್ವಲ್ ಲೈಂಗಿಕ ಪ್ರಕರಣದ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ನಡೆಸಿದ ಸಂಭಾಷಣೆ ವಿರೋಧಿಸಿ ಪ್ರತಿಭಟನೆ ನಡೆಸಿದೆ.

ಜತೆಗೆ ಗ್ರೇಟರ್ ಬೆಂಗಳೂರು ವಿಧೇಯಕ, ಗೃಹಲಕ್ಷ್ಮಿ ಹಣ ವಿತರಣೆ ವಿಳಂಬ, ಕಸ ಹಾಗೂ ಇ-ಖಾತೆ ಸಮಸ್ಯೆ...ಹೀಗೆ ಅನೇಕ ದೊಡ್ಡ ಮಟ್ಟದ ಹೋರಾಟಗಳು ಜೆಡಿಎಸ್ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ನಡೆದಿವೆ. ಅದೇ ರೀತಿ ಬಿಜೆಪಿ ಕೂಡ ಅನೇಕ ಹೋರಾಟಗಳನ್ನು ಜಂಟಿಯಾಗಿ ಮಾಡುವ ಬದಲು ಒಂಟಿಯಾಗಿ ಮಾಡಿದೆ.

ಆದರೆ, ಈಗ ಸಮನ್ವಯದ ಸಮಸ್ಯೆ ಭುಗಿಲೆದ್ದಿದೆ. ಬಿಜೆಪಿ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಜೆಡಿಎಸ್‌ಗೆ ಆಹ್ವಾನ ನೀಡಿಲ್ಲ. ಈ ಬಗ್ಗೆ ವಿಧಾನಸಭೆ ಜೆಡಿಎಸ್ ನಾಯಕ ಸುರೇಶ್‌ಬಾಬು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಜತೆಗೆ ತಮ್ಮ ಪಕ್ಷದ ವರಿಷ್ಠರ ಗಮನಕ್ಕೂ ತಂದಿದ್ದಾರೆ. ಈ ನಡುವೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಈ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಜತೆ ಮಾತನಾಡಿ ಸರಿಪಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಉಭಯ ಪಕ್ಷಗಳಲ್ಲಿ ಸಮನ್ವಯದ ಸಮಸ್ಯೆ ಇದೆ ಎಂಬುದಂತೂ ಎದ್ದು ಕಾಣುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net