ಮೂವರು ಶಾಸಕರು ಸೇರಿ ಐವರಿಗೆ ಕಾರಣ ಕೇಳಿ ಬಿಜೆಪಿ ನೋಟಿಸ್ | Set a 72 hours deadline

STS Hebbar and Harish
Published on

ಬೆಂಗಳೂರು: ಬಿಜೆಪಿಯ ಬಂಡಾಯ ಶಾಸಕರು ಸೇರಿ, ವರಿಷ್ಠರ ಸೂಚನೆಯನ್ನೂ ಮೀರಿ ಪದೇಪದೆ ಬಹಿರಂಗ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದ ಒಬ್ಬರು ಹಾಲಿ, ಇಬ್ಬರು ಮಾಜಿ ಶಾಸಕರಿಗೆ ಪಕ್ಷದ ಕೇಂದ್ರೀಯ ಶಿಸ್ತು ಸಮಿತಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಇದರೊಂದಿಗೆ ಆಂತರಿಕ ಕಚ್ಚಾಟಕ್ಕೆ ಕೊನೆಗೊಳಿಸಲು ದೆಹಲಿ ನಾಯಕರು ಮುಂದಾದಂತಿದೆ.

ಹರಿಹರ ಶಾಸಕ ಬಿ.ಪಿ.ಹರೀಶ್, ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, 72 ಗಂಟೆಯಲ್ಲೆ ಸಮಜಾಯಿಷಿ ನೀಡಲು ಅವಕಾಶ ನೀಡಿದೆ.

ಶಿವರಾಮ್ ಹೆಬ್ಬಾರ್ ಹಾಗೂ ಎಸ್.ಟಿ.ಸೋಮಶೇಖರ್ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಳ್ಳುವ ಜತೆ ಕಾಂಗ್ರೆಸ್‌ನಲ್ಲಿ ಪ್ರತ್ಯಕ್ಷ- ಪರೋಕ್ಷವಾಗಿ ಗುರುತಿಸಿಕೊಂಡಿದ್ದರು. ಪಕ್ಷ ತೆಗೆದುಕೊಂಡ ನಿರ್ಣಯಗಳಿಗೆ ವಿರುದ್ಧವಾಗಿ ನಡೆದುಕೊಂಡು ನಾಯಕರನ್ನೂ ಸಹ ಟೀಕಿಸಿದ್ದರು.

ಈ ಹಿನ್ನೆಲೆಯಲ್ಲಿ ಪಕ್ಷದ ಕೋರ್ ಕಮಿಟಿ ಇವರಿಬ್ಬರ ವಿರುದ್ಧ ಕ್ರಮಕ್ಕೆ ಶಿಾರಸು ಮಾಡಿತ್ತು. ಶಾಸಕ ಬಿ.ಪಿ.ಹರೀಶ್ ಅತೃಪ್ತರ ಬಣದಲ್ಲಿ ಗುರುತಿಸಿಕೊಂಡು ರಾಜ್ಯ ನಾಯಕತ್ವದ ಪದೇಪದೆ ಮುಜುಗರ ಉಂಟು ಮಾಡುವ ಹೇಳಿಕೆ, ಸಂಘಟನೆ ವರ್ಚಸ್ಸಿಗೆ ಧಕ್ಕೆ ತರುವ ಆರೋಪ ಮಾಡಿಕೊಂಡುಬಂದಿದ್ದರು.

ಯತ್ನಾಳ್ ಬಣದ ವಿರುದ್ಧ ಸೆಡ್ಡು ಹೊಡೆದು ಪಕ್ಷ ನಿಷ್ಠರೆಂದು ಹೇಳಿಕೊಂಡ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು ಬಹಿರಂಗವಾಗಿ ಸ್ವಪಕ್ಷ ನಾಯಕರ ಬಗ್ಗೆಯೇ ಟೀಕೆ, ಗುಂಪು ಸಭೆ ನಡೆಸಿದ್ದರು.

ಇದೀಗ ಈ ಕ್ರಮದ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಗೆ ಪರೋಕ್ಷವಾಗಿ ಭೂಮಿಕೆ ಸೃಷ್ಟಿಯಾಗಿದೆ, ವರಿಷ್ಠರ ಸೂತ್ರದ ಪ್ರಕಾರ ಮತ್ತು ಸಹಮತದ ಮೂಲಕವೇ ಆಯ್ಕೆ ನಡೆಯಲಿದೆ ಎಂಬ ಸುಳಿವು ಸಿಕ್ಕಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net