ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಬಲಿಷ್ಠ

byr
ಶಿಕಾರಿಪುರದಲ್ಲಿ ಸೆಲ್ಫೀ ವಿಥ್ ಬೆನಿಫಿಷಿಯರಿ ಅಭಿಯಾನದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಬಿಜೆಪಿ ಎಚ್.ಟಿ.ಬಳಿಗಾರ್, ರಾಘವೇಂದ್ರ, ಹನುಮಂತಪ್ಪ, ಬೆಣ್ಣೆ ಪ್ರವೀಣ್ ಇತರರಿದ್ದರು.
Published on

ಶಿಕಾರಿಪುರ: ಪ್ರತಿ ಬೂತ್ ಸಶಕ್ತವಾದಾಗ ಪಕ್ಷ ಸದೃಢವಾಗುತ್ತದೆ. ಮೊದಲು ನಮ್ಮ ನಡೆ ಬೂತ್ ಕಡೆಗಿರಬೇಕು. ನೀವು ಪಕ್ಷ ಕಟ್ಟುವ ಸೇನಾನಿಗಳು ನೀವೀಗ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಶುಕ್ರವಾರ ಸೆಲ್ಫೀ ವಿಥ್ ಬೆನಿಫಿಷಿಯರಿ ಅಭಿಯಾನದಲ್ಲಿ ಮಾತನಾಡಿದ ಅವರು, ಇಂದು ವಿಶ್ವವೇ ಭಾರತದ ಕಡೆಗೆ ಬೆರಗುಗಣ್ಣಿನಿಂದ ನೋಡುವ ಹಾಗೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಅವರ ಕರ್ತೃತ್ವ ಶಕ್ತಿ ಅಗಾಧವಾದುದು. ದಿನದ 18 ತಾಸು ದೇಶಕ್ಕಾಗಿ ಅವಿರತ ಅವಿಶ್ರಾಂತವಾಗಿ ಕೆಲಸ ಮಾಡುವ ಅವರು ರಾಷ್ಟ್ರ ಕಾರ್ಯಕ್ಕಾಗಿಯೇ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಜನತೆಗೆ ಅರಿವು ಮೂಡಿಸುವ ಮತ್ತು ಯೋಜನೆಗಳು ತಲುಪುವಂತೆ ಮಾಡುವುದು ನಿಮ್ಮ ಹೊಣೆ. ಒಬ್ಬೊಬ್ಬ ಕಾರ್ಯಕರ್ತನೂ ಪಕ್ಷದ ಆಸ್ತಿ. ಬಿಜೆಪಿ ಇಂದು ಜಗತ್ತಿನ ಅತಿದೊಡ್ಡ ಪಕ್ಷವಾಗಿ ಬೆಳೆಯಲು ಕಾರ್ಯಕರ್ತರ ಪರಿಶ್ರಮವೇ ಕಾರಣ. ನೀವು ನಮ್ಮ ಪಕ್ಷದ ಸದಸ್ಯರು ಎನ್ನುವುದೇ ಹೆಮ್ಮೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಕಳೆದ ಒಂಬತ್ತು ವರ್ಷಗಳಲ್ಲಿ ದೇಶದ ಕಟ್ಟಕಡೆಯ ವ್ಯಕ್ತಿಯನ್ನು ಕೇಂದ್ರೀಕರಿಸಿ ಮೂಲ ಸೌಕರ್ಯ ಕಲ್ಪಿಸುತ್ತಿದೆ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುನ್ನೆಲೆಗೆ ತರುವ ಉದ್ದೇಶದಿಂದ ಜಾರಿಗೆ ತಂದಿರುವ ಹಲವು ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಲಾಗುತ್ತಿದೆ. ಅದರಿಂದ ಆಗಿರುವ ಪ್ರಯೋಜನ ಕುರಿತು ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲು ದೇಶಾದ್ಯಂತ ಪ್ರತಿ ಬೂತ್ ಮಟ್ಟದಲ್ಲಿ ವಿಶೇಷ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಪಕ್ಷದ ಪ್ರಮುಖರಾದ ಎಚ್.ಟಿ.ಬಳಿಗಾರ್, ರಾಘವೇಂದ್ರ, ಹನುಮಂತಪ್ಪ, ಬೆಣ್ಣೆ ಪ್ರವೀಣ್, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net