

ತುಮಕೂರು: ಜೆಡಿಎಸ್‌ನ ಪಂಚರತ್ನ ಯಾತ್ರೆ, ಕಾಂಗ್ರೆಸ್‌ನ ಬಸ್‌ಯಾತ್ರೆ ಅಬ್ಬರದಲ್ಲಿ ಸ್ವಲ್ಪ ಕಳಾಹೀನಗೊಂಡಿರುವಂತೆ ಕಾಣುತ್ತಿರುವ ಬಿಜೆಪಿ ಇದೀಗ ‘ವಿಜಯ ಸಂಕಲ್ಪ’ ಅಭಿಯಾನ ಹಮ್ಮಿಕೊಂಡಿದೆ.
ಜ.21 ರಿಂದ 29ರವರೆಗೆ ರಾಜ್ಯದ 58185 ಮತಗಟ್ಟೆಗಳಲ್ಲಿ ಅಭಿಯಾನ ನಡೆಸಲಿದ್ದು, ಪ್ರತೀ ಮತಗಟ್ಟೆಯ ಎಲ್ಲ ಮನೆಗಳ ಸಂಪರ್ಕ ಸಾಧಿಸುವ ಮೂಲಕ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಲು ಕಾರ್ಯತಂತ್ರ ರೂಪಿಸಿದೆ. ಬೂತ್ ವಿಜಯ್ ಅಭಿಯಾನ ಪೂರ್ಣಗೊಳಿಸಿರುವ ಕಾರ್ಯಕರ್ತರಿಗೆ ಪಕ್ಷವು ಮತ್ತೊಂದು ಟಾಸ್ಕ್ ನೀಡಿದೆ.
ಈ ಬಾರಿ ಪ್ರತಿಮತಗಟ್ಟೆಯಲ್ಲಿ ಅಭಿಯಾನದ ಜತೆಗೆ ಸದಸ್ಯತ್ವ ಅಭಿಯಾನ ನಡೆಸಲಾಗುವುದು. ಈ ವೇಳೆ ಸರ್ಕಾರದ ಸಾಧನೆಗಳ ಕರಪತ್ರ ಹಾಗೂ ಸ್ಟಿಕ್ಕರ್‌ಗಳನ್ನು ಪ್ರತೀ ಮನೆಗೆ ವಿತರಿಸಿ ಜನರ ಮನಸಿನಲ್ಲಿ ಪಕ್ಷದ ಬಗ್ಗೆ ಭರವಸೆ ಮೂಡಿಸಲು ಹೊರಟಿದೆ.
ಪ್ರತೀ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಭರವಸೆ ನಂತರ ಇದೀಗ ಗೃಹಲಕ್ಷ್ಮೀ ಯೋಜನೆಯಡಿ ಪ್ರತೀ ಮನೆ ಯಜಮಾನಿಗೆ ಮಾಸಿಕ 2000 ರೂ., ನೀಡುವುದಾಗಿ ಕಾಂಗ್ರೆಸ್ ಘೋಷಿಸಿರುವುದು ಚುನಾವಣಾ ಸಮರದ ಆರಂಭದಲ್ಲೇ ಬಿಜೆಪಿಗೆ ‘ದೊಡ್ಡ ಶಾಕ್’ ಹೊಡೆದಂತಾಗಿದೆ. ಕಾರ್ಯಕರ್ತ ಆಧಾರಿತ ಪಕ್ಷದಲ್ಲೀಗ ತಳಮಳ ಶುರುವಾಗಿದ್ದು ಕಾರ್ಯಕರ್ತರಲ್ಲಿ ಚೈತನ್ಯ ತುಂಬಲು, ಜನರಲ್ಲಿ ಭರವಸೆ ಮೂಡಿಸ ಬಿಜೆಪಿ ವಿಜಯ ಸಂಕಲ್ಪ ಅಭಿಯಾನವನ್ನು ರಾಷ್ಟ್ರಾದ್ಯಂತ ಏಕಕಾಲಕ್ಕೆ ಹಮ್ಮಿಕೊಂಡಿದೆ.
ವಿಜಯಪುರದಲ್ಲಿ ನಡ್ಡಾ, ತುಮಕೂರಲ್ಲಿ ಬೊಮ್ಮಾಯಿ: ಜ.21ರಂದು ಮಧ್ಯಾಹ್ನ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ವಿಜಯಪುರದ ಸಿಂಧಗಿಯ ಮತಗಟ್ಟೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ತುಮಕೂರಿನ ಜಯನಗರದ ಮತಗಟ್ಟೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಬೊಮ್ಮಾಯಿ ಜತೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ ಇರಲಿದ್ದಾರೆ. 2 ಕೋಟಿ ಮತದಾರರನ್ನು ತಲುಪುವುದು ಅಭಿಯಾನದ ಧ್ಯೇಯವಾಗಿದೆ.
1681 ಬೂತ್‌ಗಳಲ್ಲಿ ವಿಜಯಸಂಕಲ್ಪ: ತುಮಕೂರು ಸಂಘಟನಾತ್ಮಕ ಜಿಲ್ಲೆಯ 1681 ಬೂತ್‌ಗಳಲ್ಲಿ ವಿಜಯ ಸಂಕಲ್ಪ ಅಭಿಯಾನ ನಡೆಸಲಾಗುವುದು. ಈ ಬೂತ್ ವ್ಯಾಪ್ತಿಯಲ್ಲಿ 10 ಗೋಡೆ ಬರಹಗಳು ಹಾಗೂ 1 ಡಿಜಿಟಲ್ ಗೋಡೆ ಬರಹದ ಮೂಲಕ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಉದ್ದೇಶ ಹೊಂದಲಾಗಿದೆ. ಇದರ ಜತೆಗೆ ಮಿಸ್ಡ್‌ಕಾಲ್ ಕೊಡುವ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಗ್ರಾಮಾಂತರದಲ್ಲಿ ವಿಜಯೇಂದ್ರ: ತುಮಕೂರು ಗ್ರಾಮಾಂತರದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ಮಾಧುಸ್ವಾಮಿ, ತಿಪಟೂರಲ್ಲಿ ಬಿ.ಸಿ.ನಾಗೇಶ್, ಕುಣಿಗಲ್‌ನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್, ತುರುವೇಕೆರೆಯಲ್ಲಿ ಮಸಾಲ ಜಯರಾಂ ಚಾಲನೆ ಕೊಡಲಿದ್ದಾರೆ.
ಮೋದಿ ಮನ್‌ಕೀ ಬಾತ್: ಅಭಿಯಾನದ ಕೊನೆಯ ದಿನವಾದ ಜ.29ರಂದು ಪ್ರಧಾನಿ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ಪ್ರತೀ ಮತಗಟ್ಟೆಯಲ್ಲಿ ಪ್ರಸರಣ ವ್ಯವಸ್ಥೆ ಮಾಡಲಾಗಿದೆ. ಮನ್ ಕೀ ಬಾತ್ ನಲ್ಲಿ ಹಂಚಿಕೊಳ್ಳುವ ಮನದಾಳದ ಮಾತುಗಳನ್ನು ಪಕ್ಷದ ಕಾರ್ಯಕರ್ತರು, ಪ್ರಮುಖರು ಆಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಾಳೆಯಿಂದ ಮಹಿಳಾ ಮೋಚಾ ರಾಷ್ಟ್ರೀಯ ಕಾರ್ಯಕಾರಿಣಿ: ರಾಜ್ಯ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಸಂಘಟನೆಗೆ ಒತ್ತುಕೊಟ್ಟಿರುವ ಬಿಜೆಪಿ ಈ ಬಾರಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ರಾಜ್ಯದಲ್ಲೇ ಆಯೋಜಿಸಿದೆ. ಜ.20,21 ರಂದು ನಡೆಯಲಿರುವ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಆತಿಥ್ಯ ವಹಿಸಿರುವುದು ಕಲ್ಪತರು ನಾಡು ಎನ್ನುವುದು ವಿಶೇಷ. ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವಾನತಿ ಶ್ರೀನಿವಾಸನ್ ನೇತೃತ್ವದಲ್ಲಿ 2 ದಿನ ಕಾರ್ಯಕಾರಿಣಿ ನಡೆಯಲಿದೆ. 20 ರಂದು ಬೆಳಗ್ಗೆ ಮಹಿಳಾ ಕಾರ್ಯಕರ್ತೆಯರು, ಪದಾಧಿಕಾರಿಗಳು ನಗರದ ಟೌನ್ ಹಾಲ್ ವೃತ್ತದಿಂದ ಸಿದ್ಧಗಂಗಾ ಮಠದ ವರೆಗೆ ಬೈಕ್ ರ‌್ಯಾಲಿಯಲ್ಲಿ ತೆರಳಿ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಕಾರ್ಯಕಾರಿಣಿ ನಡೆಯುವ ಶೆಟ್ಟಿಹಳ್ಳಿ ಬಳಿಯ ಖಾಸಗಿ ಕಲ್ಯಾಣ ಮಂಟಪಕ್ಕೆ ಬರಲಿದ್ದಾರೆ.
ಅಭಿಯಾನಕ್ಕೆ ರಾಜ್ಯದಲ್ಲಿ ಏಕಕಾಲಕ್ಕೆ ಚಾಲನೆ ನೀಡಲಾಗುತ್ತಿದೆ. ಜಿಲ್ಲೆಯ 1681 ಮತಗಟ್ಟೆಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು ಇದೊಂದು ಸರ್ವಸ್ಪರ್ಶಿ ಕಾರ್ಯಕ್ರಮವಾಗಿದ್ದು ರಾಜ್ಯ, ಕೇಂದ್ರ ಸರ್ಕಾರಗಳ ಸಾಧನೆಗಳನ್ನು ಪ್ರತಿಮನೆಗೆ ಮುಟ್ಟಿಸುವ ಕೆಲಸ ಮಾಡಲಾಗುವುದು. | ಎಚ್.ಎಸ್.ರವಿಶಂಕರ್ ಬಿಜೆಪಿ ಜಿಲ್ಲಾಧ್ಯಕ್ಷ