ಕಾಂಗ್ರೆಸ್ ನ ಸೊಕ್ಕು ಅಡಗಿಸಲು ಬಿಜೆಪಿ ಶಕ್ತ: ಬಿ.ವೈ.ವಿಜಯೇಂದ್ರ |Govt utterly flap

B.Y.Vijayendra
Published on

ಬೆಂಗಳೂರು: ರಾಜ್ಯದಲ್ಲಿ ಅಧಿಕಾರದ ಮದದಿಂದ ಗೂಂಡಾಗಿರಿ ವರ್ತನೆ ತೋರುತ್ತಿರುವ ಕಾಂಗ್ರೆಸ್ ಸರ್ಕಾರದ ಸೊಕ್ಕು ಅಡಗಿಸಲು ಬಿಜೆಪಿ ಶಕ್ತವಾಗಿದೆ. ಅಂತಹ ಶಕ್ತಿ ಪಕ್ಷದ ಕಾರ್ಯಕರ್ತರಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.

ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನಯಾಪೈಸೆ ಇಲ್ಲದೆ ಎಲ್ಲವೂ ನಿಂತು ಹೋಗಿವೆ. ಈ ವೈಫಲ್ಯಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಹಾಳಾಗುವುದಕ್ಮೆ ಸರ್ಕಾರವೇ ಕಾರಣವೆಂದು ಆರೋಪಿಸಿದರು.

ಅಭಿವೃದ್ಧಿ, ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲಿ ಸರ್ಕಾರಕ್ಕೆ ಸಲಹೆ ಕೊಡುವಷ್ಟು ದೊಡ್ಡ ಮನುಷ್ಯ ನಾನಲ್ಲ. ಪ್ರತಿಪಕ್ಷವಾಗಿ ವಾಗ್ದಾಳಿಗೆ ಸೀಮಿತವಾಗಿಲ್ಲ. ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಪಕ್ಷದ ಕಾರ್ಯಕರ್ತರು ಸಿದ್ಧರಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ತಿರಂಗಾ ಯಾತ್ರೆ ನಿಲ್ಲದು

ಕಾನೂನು-ಸುವ್ಯವಸ್ಥೆ ನೆಪ ಹೇಳಿ ತಿರಂಗಾ ಯಾತ್ರೆಗೆ ಅಡ್ಡಿಪಡಿಸುವುದು ಸರಿಯಲ್ಲ. ಆಪರೇಷನ್ ಸಿಂಧೂರ ಯಶಸ್ವಿಗೊಳಿಸಿ, ಪರಾಕ್ರಮ ಮೆರೆದ ದೇಶದ ವೀರ ಯೋಧರಿಗೆ ಅಭಿನಂದನೆ ಜತೆಗೆ ಧನ್ಯವಾದ ಸಲ್ಲಿಸಲು ಪಕ್ಷಾತೀತವಾಗಿ ಹಮ್ಮಿಕೊಳ್ಳಲಾಗಿದೆ. ಯಾರೇ ಅಡೆತಡೆ ಉಂಟು ಮಾಡಿದರೂ ತಿರಂಗಾ ಯಾತ್ರೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು‌.

ಖ್ಯಾತ ನಟ ಕಮಲ್ ಹಾಸನ್ ಗೆ ತಮ್ಮ ತಮಿಳು ಭಾಷೆ ಪ್ರೀತಿ, ಅಭಿಮಾನ ಹೊಂದಿರಲಿ, ಅದಕ್ಕೆ ಯಾರದೇ ಅಭ್ಯಂತರವಿಲ್ಲ. ಆದರೆ ಕನ್ನಡ ಭಾಷೆಗೆ ಕ್ಷಮೆ ಕೇಳಲೇ ಬೇಕು. ಮೊಂಡಾಟದಿಂದ ತಮ್ಮ ಘನತೆ-ಗೌರವಕ್ಕೆ ಚ್ಯುತಿ ತಂದುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ನಿಲುವಿಗೆ ಅಂಟಿಕೊಂಡಿದೆ ಎಂದು ಬಿ.ವೈ.ವಿಜಯೇಂದ್ರ ಟೀಕಿಸಿದರು‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net