

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಮುಖ ನಾಯಕರನ್ನು ಕಟ್ಟಿಹಾಕಲು ಕಾಂಗ್ರೆಸ್ ತಂತ್ರಗಾರಿಕೆ ಆರಂಭಿಸಿದೆ. ಕ್ಷೇತ್ರದ ಹೊರಗೂ ಸಾಮೂಹಿಕವಾಗಿ ಜನರನ್ನು ಸೆಳೆಯುವ ಸಾಮರ್ಥ್ಯವುಳ್ಳವರನ್ನು ಗುರುತಿಸಿ ಈಗಿನಿಂದಲೇ ಹಣಿಯಲು ಕೈ ನಾಯಕರು ಗಮನಕೊಟ್ಟಿದ್ದಾರೆ.
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶ್ರೀರಾಮುಲು, ಸುನೀಲ್ಕುಮಾರ್, ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ರಾಜೂಗೌಡ, ಬಸವರಾಜ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ, ಡಾ.ಕೆ.ಸುಧಾಕರ್, ಸಿ.ಎನ್.ಅಶ್ವತ್ಥನಾರಾಯಣ ಪಟ್ಟಿಯಲ್ಲಿರುವ ಪ್ರಮುಖರು. ಇವರೆಲ್ಲ ಒಂದಲ್ಲ ಒಂದು ಕಾರಣಗಳಿಂದ ತಮ್ಮದಲ್ಲದ ಕ್ಷೇತ್ರದಲ್ಲೂ ಹಿಡಿತ ಸಾಧಿಸಿದ್ದು, ಈ ಕ್ಷೇತ್ರಗಳಲ್ಲಿ ಪ್ರಭಾವಿ ಅಭ್ಯರ್ಥಿಯನ್ನು ಅಂತಿಮಗೊಳಿಸಿ ಚಟುವಟಿಕೆ ತೀವ್ರಗೊಳಿಸುವುದು ಒಂದುಕಾರ್ಯತಂತ್ರವಾದರೆ, ಬಿಜೆಪಿ ಅಭ್ಯರ್ಥಿಗೆ ವಿರುದ್ಧವಾಗಿ ಮತಗಳನ್ನು ಒಟ್ಟುಮಾಡುವ ನಿಟ್ಟಿನಲ್ಲಿ ಜಾತಿ ಸಮೀಕರಣ ರೂಪಿಸಲಾಗುತ್ತದೆ. ಸದ್ಯದ ಮಾಹಿತಿ ಪ್ರಕಾರ ಸಿ.ಟಿ.ರವಿ ವಿರುದ್ಧ ವೀರಶೈವ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು, ಕಾರ್ಕಳದಲ್ಲಿ ಸುನೀಲ್ ಕುಮಾರ್ ವಿರುದ್ಧ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಯುವ ಅಭ್ಯರ್ಥಿಯನ್ನು ಎದುರಾಳಿಯಾಗಿಸುವುದು, ವಿ.ಸೋಮಣ್ಣ ಎದುರಾಳಿಯಾಗಿ ಅವರು ಆರಿಸಿಕೊಳ್ಳುವ ಕ್ಷೇತ್ರದಲ್ಲಿನ ಪ್ರಬಲ ಸಮುದಾಯದವರನ್ನು ಕಣಕ್ಕಿಳಿಸಬೇಕೆಂಬ ಬಗ್ಗೆ ಚರ್ಚೆಯಾಗಿದೆ. ಪ್ರಮುಖವಾಗಿ ವಿಜಯೇಂದ್ರ ಓಡಾಟವನ್ನು ಕಾಂಗ್ರೆಸ್ ಎದುರು ನೋಡುತ್ತಿದೆ. ಅವರ ಪ್ರಚಾರದಲ್ಲಿ ತೊಡಗಿಕೊಂಡರೆ ಆಗುವ ಸಂಚಲನದ ಬಗ್ಗೆ ಮೇಲ್ನೋಟಕ್ಕೆ ಲೆಕ್ಕಹಾಕುತ್ತಿದೆ. ಅವರು ಶಿಕಾರಿಪುರದಿಂದಲೇ ಕಣಕ್ಕಿಳಿಯುವುದು ಎಂದು ಭಾವಿಸಿದ್ದು, ಹೀಗಾಗಿ ಶಿಕಾರಿಪುರದಲ್ಲಿ ಈಡಿಗ ಸಮುದಾಯದವರನ್ನು ಅಭ್ಯರ್ಥಿಯಾಗಿ ಗುರುತಿಸಿ ಆ ಮೂಲಕ ವಿಜಯೇಂದ್ರರ ರಾಜ್ಯ ಪ್ರವಾಸಕ್ಕೆ ಕಡಿವಾಣ ಹಾಕಬೇಕು, ಅವರು ಶಿಕಾರಿಪುರಕ್ಕೆ ಸೀಮಿತ ಮಾಡುವ ಉದ್ದೇಶ ಹೊಂದಿದೆ.
ಇನ್ನು ಸಂಘಟನಾತ್ಮಕವಾಗಿ ಪಳಗುತ್ತಿರುವ ಸಿ.ಟಿ.ರವಿ ಅವರನ್ನು ಚುನಾವಣೆ ವೇಳೆ ಚಿಕ್ಕಮಗಳೂರಿನಲ್ಲೇ ಉಳಿಯುವಂತೆ ಮಾಡುವ ಗುರಿ ಕೈನಾಯಕರದ್ದು. ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಕೆ.ಆರ್.ಪೇಟೆ ನಾರಾಯಣ ಗೌಡ, ಗೋಪಾಲಯ್ಯ ಕಾಂಗ್ರೆಸ್ಗೆ ಸೆಳೆದುಕೊಳ್ಳಬೇಕೆಂದುಕೊಂಡವರ ಪಟ್ಟಿಯಲ್ಲಿರುವ ಪ್ರಮುಖ ಹೆಸರುಗಳು. ಈ ಪಟ್ಟಿಯಲ್ಲಿ ಸುರಪುರ ಶಾಸಕ ರಾಜೂಗೌಡ, ಶಿವನಗೌಡ ನಾಯಕ್ ಹೆಸರೂ ಸೇರಿ ಕೆಲವು ಹೆಸರುಗಳಿವೆ. ಇವರ ಪೈಕಿ ರಾಜೂಗೌಡ ರಾಜ್ಯದ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ನೆಟ್ವರ್ಕ್ ಹೊಂದಿದವರು. ಅವರನ್ನೂ ಸಹ ಕ್ಷೇತ್ರದಲ್ಲಿ ಕಟ್ಟಿಹಾಕುವ ತಂತ್ರಗಾರಿಕೆ ನಡೆಸಲಾಗುತ್ತಿದೆ.
ಕಳೆದ ಚುನಾವಣೆಯಲ್ಲಿ ನಿರೀಕ್ಷೆಯಷ್ಟು ಫಲಿತಾಂಶ ತಂದುಕೊಡದ ಶ್ರೀರಾಮುಲು ಅವರ ಮೇಲೆ ಬಿಜೆಪಿ ನಿರೀಕ್ಷೆ ಕಳೆದುಕೊಂಡಿಲ್ಲ. ಇದನ್ನು ಗಮನಿಸಿರುವ ಕಾಂಗ್ರೆಸ್, ಅವರು ಸ್ಪರ್ಧಿಸಲು ಬಯಸಲು ಕ್ಷೇತ್ರದ ಬಗ್ಗೆ ತಡಕಾಡುತ್ತಿದೆ. ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದ ಬದಲು ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂಬ ಅಂದಾಜಿನ ಮೇಲೆ ಕಾಂಗ್ರೆಸ್ ಅವರ ನಡೆಯನ್ನು ಗಮನಿಸುತ್ತಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿಯವರು ಪ್ರತಿ ವಿಧಾನಸಭಾ ಕ್ಷೇತ್ರದ ಚಿತ್ರಣ ಪಡೆದುಕೊಳ್ಳುತ್ತಿದ್ದು, ಖುದ್ದು ಅವರೇ ಒಂದು ನೀಲಿನಕ್ಷೆ ರೂಪಿಸುತ್ತಿದ್ದಾರೆಂಬ ಮಾಹಿತಿ ಇದೆ. ಬಳಿಕ ರಾಜ್ಯದ ಪ್ರಮುಖ ನಾಯಕರ ಜತೆ ವಿಚಾರ ವಿನಿಮ ನಡೆಸುತ್ತಿದ್ದು, ಈ ವೇಳೆ ಆ ಕ್ಷೇತ್ರಗಳ ಜಾತಿ ಲೆಕ್ಕಾಚಾರ ಮತ್ತು ಜಾತಿಗಳ ಮೇಲೆ ಪರಿಣಾಮ ಬೀರುವ ವಿಚಾರ ಅಥವಾ ವ್ಯಕ್ತಿಗಳನ್ನು ಗುರುತಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.