ಮೃತ ಆರ್ಥಿಕತೆ ಬಿಜೆಪಿ ತಿರುಗೇಟು

GDP Growth
Published on

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಆರ್ಥಿಕತೆ ಸತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯು ಅಮೆರಿಕ ಮೂಲದ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬಿಡುಗಡೆ ಮಾಡಿರುವ ಭಾರತದ ಬಲವಾದ ಆರ್ಥಿಕ ಬೆಳವಣಿಗೆಯ ಅಂಕಿ-ಅಂಶಗಳನ್ನು ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದೆ.

ಐಎಂಎಫ್ ಬಿಡುಗಡೆ ಮಾಡಿರುವ ವಿಶ್ವ ಆರ್ಥಿಕ ಮುನ್ನೋಟದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆಯಲ್ಲಿ ಚೀನಾ ನಂತರದ ಸ್ಥಾನವನ್ನು ಭಾರತ ಪಡೆದಿದೆ. ಭಾರತ 2025ರಲ್ಲಿ ಶೇ. 6.7 ಮತ್ತು 2026 ರಲ್ಲಿ ಶೇ. 6.4 ಬೆಳವಣಿಗೆ ದರ ಸಾಧಿಸಲಿದೆ ಎಂದಿದೆ. ಈ ಅಂಕಿ-ಅಂಶವನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರತ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿದಿದೆ. ಇದು ಐಎಂಎಫ್ 2025ರ ಜುಲೈನಲ್ಲಿ ಹಂಚಿಕೊಂಡಿರುವ ವಿಶ್ವ ಆರ್ಥಿಕ ಮುನ್ನೋಟದಿಂದ ದೃಢಪಟ್ಟಿದೆ. ಸತ್ತಿರುವುದು ರಾಹುಲ್ ಗಾಂಧಿ ಅವರ ಸ್ವಾಭಿಮಾನ ಹಾಗೂ ಮೆದುಳು (ಅದು ಅಸ್ತಿತ್ವದಲ್ಲಿದ್ದರೆ) ಎಂದು ತಿಳಿಸುವ ಮೂಲಕ ಟ್ರಂಪ್ ಮತ್ತು ರಾಹುಲ್ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಭಾರತದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಶೇ. 25 ಸುಂಕ ವಿಧಿಸಿದ್ದ ಟ್ರಂಪ್ ಭಾರತದ ಆರ್ಥಿಕತೆ ಸತ್ತಿದೆ ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರಾಹುಲ್ ಗಾಂಧಿ, ಹೌದು ಅವರು ಹೇಳಿದ್ದು ಸರಿ. ಟ್ರಂಪ್ ಸತ್ಯ ಹೇಳಿದ್ದು ನನಗೆ ಸಂತೋಷ ತಂದಿದೆ ಎಂದು ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net