

ಬೆಂಗಳೂರು: ಬಿಜೆಪಿಯವರು ಮೆಟ್ರೋ ದರ ಏರಿಕೆ ವಿರುದ್ಧ ಪ್ರತಿಭಟನೆ ನಾಟಕ ಮಾಡುವ ಬದಲು ಕರ್ನಾಟಕದ ಪಾಲಿನ ತೆರಿಗೆ ಹಣ ಕೊಡಿಸಲಿ. ಒಳ್ಳೆಯ ಕೆಲಸ ಮಾಡದೇ ಇದ್ದರೂ ಕೆಟ್ಟ ಕೆಲಸ ಮಾಡುವುದರಲ್ಲಿ ಬಿಜೆಪಿಯವರು ಎತ್ತಿದ ಕೈ. ಕರ್ನಾಟಕದ ಅಭಿವೃದ್ದಿಗೆ ಕೇಂದ್ರ ಸರ್ಕಾರವೇ ಅಡ್ಡಿ ಎಂದು ಮಾಜಿ ಸಂಸದ DK ಸುರೇಶ್ ಕಿಡಿಕಾರಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದರು. ರಾಜ್ಯಗಳು ಹೆಚ್ಚಿನ ತೆರಿಗೆ ಪಾಲು ಕೇಳುವುದು ಸಣ್ಣತನ ಎನ್ನುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ರಾಜ್ಯಗಳ ಸಣ್ಣತನ ಎನ್ನುವುದಕ್ಕಿಂತ ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿದೆ.
ಇತರೇ ರಾಜ್ಯಗಳಲ್ಲಿ ನಮ್ಮ ತೆರಿಗೆ ಹಣವನ್ನು ಕೇಂದ್ರ ಬಿಜೆಪಿ ಸರ್ಕಾರ ವೃಥಾ ವ್ಯಯ ಮಾಡುತ್ತಿದೆ. ದಕ್ಷಿಣ ಭಾರತದಲ್ಲಿ ಎಲ್ಲವೂ ಬಿಜೆಪಿಯೇತರ ಸರ್ಕಾರಗಳೇ ಇವೆ. ದಕ್ಷಿಣ ಭಾರತಕ್ಕೆ ಸದಾ ಅನ್ಯಾಯ ಮಾಡಲಾಗುತ್ತಿದೆ. ಜನ ಎಚ್ಚೆತ್ತುಕೊಳ್ಳಬೇಕಾಗಿದೆ. ಅಭಿವೃದ್ದಿಗೆ ಹಣ ನೀಡದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವ ಬೆಂಗಳೂರಿಗೆ ಕೆಟ್ಟ ಹೆಸರು ತರಬೇಕು ಎನ್ನುವುದು ಬಿಜೆಪಿಯ ಹುನ್ನಾರ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 10: 10 ಅನುಪಾತದಲ್ಲಿ ಅನುದಾನ ನೀಡಿವೆ. ಶೇ 80 ರಷ್ಟು ಅನುದಾನವನ್ನು ಕೇಂದ್ರ ಸರ್ಕಾರದ ಭದ್ರತೆ ಮೇಲೆ ಸಾಲ ನೀಡಲಾಗಿದೆ. ಇದರ ಭಾರವನ್ನು ರಾಜ್ಯ ಸರ್ಕಾರವೇ ಹೊರಬೇಕು. ಆದರೆ ಮೆಟ್ರೋ ನಿರ್ವಹಣೆ ಕೇಂದ್ರ ಸರ್ಕಾರ ಮಾಡುತ್ತದೆ ಎಂದರು.
ಶಾಸಕ ಮುನಿರತ್ನ ಅವರು ಬೆಂಗಳೂರು ಅಭಿವೃದ್ಧಿಯಾಗುತ್ತಿಲ್ಲ. ಸುಮಾರು 20 ವರ್ಷಗಳ ಹಿಂದಕ್ಕೆ ಹೋಗಿದೆ. ಶೇ.35 ರಷ್ಟು ಲಂಚ ಕೇಳುತ್ತಿದ್ದಾರೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, ಲೋಕಸಭಾ ಸದಸ್ಯರಾದ ತಜ್ಞ ವೈದ್ಯರೊಬ್ಬರು ಮುನಿರತ್ನ ಅವರ ತಲೆಗೆ ಮೊಟ್ಟೆ ಏಟು ಬಿದ್ದು, ಆಸಿಡ್ ದಾಳಿಯಾಗಿ ಪೆಟ್ಟು ಬಿದ್ದಿದೆ. ತಲೆಗೆ ಏಟಾಗಿ ಒಂದೆರಡು ಇಂಚು ಒಳಗೆ ಹೋಗಿದೆ, ಹೀಗಾಗಿ ತಲೆಕೆಟ್ಟು ಹೋಗಿದೆ ಎಂದು ಹೇಳಿದ್ದರು. ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.