

ಸೊರಬ: ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದಲ್ಲಿ ಮತದಾರರು ಜಾತಿ ಆಧಾರದ ಮೇಲೆ ಬೆಂಬಲಿಸದೆ ದೇಶದ ಐಕ್ಯತೆ ಹಾಗೂ ಸಮಗ್ರತೆಗೆ ಮತ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇವಲ ಬಿಜೆಪಿ ನಾಯಕರಲ್ಲ. ದೇಶದ ಬಲಿಷ್ಠ ನಾಯಕ. ಜಾಗತಿಕವಾಗಿ ಭಾರತದ ಬಲಾಢ್ಯತೆ ಎತ್ತಿಹಿಡಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಮತದಾರರು ಜಾತಿ, ಪಕ್ಷ ನೋಡದೆ ಬೆಂಬಲ ನೀಡಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರಲ್ಲಿ ಸಂಘಟನಾತ್ಮಕ ಶಕ್ತಿ ಇದೆ. ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ಬಿ.ವೈ.ರಾಘವೇಂದ್ರ ಅವರು ಗೆಲ್ಲಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇದೆ. ಪಕ್ಷ ಮುನ್ನಡೆಸಲು ಸೂಕ್ತ ನಾಯಕನನ್ನು ಆಯ್ಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಚುನಾವಣೆ ಎದುರಿಸಲಿ ಎಂದರು. ಮೇ 4ರಂದು ಸೊರಬದಲ್ಲಿ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಬಿ.ಎಸ್.ಯಡಿಯೂರಪ್ಪ ಹಾಗೂ ಅಭ್ಯರ್ಥಿ ರಾಘವೇಂದ್ರ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮುಖಂಡರಾದ ಬಸವರಾಜ್, ಮೋಹನ್, ಮಲ್ಲಿಕಾರ್ಜುನ, ಜೈಶೀಲಗೌಡ, ಮಹಾಬಲೇಶ್ವರ, ಕೃಷ್ಣಮೂರ್ತಿ, ಚನ್ನಬಸವ, ಷಡಕ್ಷರಿ, ಅಶೋಕ ಶೇಟ್, ಸಂಜಯಗೌಡ, ಹರೀಶ್, ಶಶಿ ಇದ್ದರು.