ದೇಶದ ಬಗ್ಗೆ ಬಿಜೆಪಿಗೆ ಮುಂದಾಲೋಚನೆಯಿಲ್ಲ; ಎಐಸಿಸಿ ವಕ್ತಾರ ರಾಜೀವ್ ಗೌಡ ಟೀಕೆ

rajeev nataraj
Published on
ಬೆಂಗಳೂರು: ಕೇಂದ್ರ ಸರ್ಕಾರ ಪ್ರತಿ ಬಾರಿಯೂ ತನ್ನ ಬಜೆಟ್‌ನಲ್ಲಿ ಯಾವುದೋ ಒಂದು ವಿಚಾರ ತೆಗೆದುಕೊಂಡು ಅದನ್ನು ವಿಜೃಂಭಿಸುತ್ತದೆ. ಈ ವರ್ಷ ಮಧ್ಯಮ ವರ್ಗದ ಆದಾಯ ತೆರಿಗೆ ಕಡಿಮೆ ಮಾಡಲಾಗಿದೆ ಎನ್ನುವ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ. ಇದರ ಮೂಲಕ ಇತರೇ ವಿಚಾರಗಳ ಹಾದಿ ತಪ್ಪಿಸಲಾಗುತ್ತಿದೆ ಎಂದು ಎಐಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷ, ರಾಷ್ಟೀಯ ವಕ್ತಾರ ರಾಜೀವ್ ಗೌಡ ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಮನಮೋಹನ್ ಸಿಂಗ್ ಅವರ ಆಡಳಿತ ಕಾಲದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಸುಮಾರು ಶೇ.8 ರಷ್ಟು ಇರುತ್ತಿತ್ತು. ಅದನ್ನು ಬಿಜೆಪಿಯವರು 7.6 ಎಂದು ಹೇಳುತ್ತಾರೆ. ಮೋದಿಯವರ 11 ವರ್ಷಗಳ ಆಡಳಿತ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಇರುವುದು ಕೇವಲ ಶೇ.11ರಷ್ಟು ಮಾತ್ರ. ಇದರಿಂದ ದೇಶದ ಬೆಳವಣಿಗೆ ಶೇ.2 ರಷ್ಟು ಕಡಿಮೆಯಾಗಿದೆ. ಸರಳವಾಗಿ ಹೇಳುವುದಾದರೆ ನೀವು ಬ್ಯಾಂಕ್ ಅಲ್ಲಿ ಇಟ್ಟ ಹಣದ ಬಡ್ಡಿ ದರ 2 ರಷ್ಟು ಕಡಿಮೆಯಾದರೆ ಹಣ ಇಟ್ಟವನ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದರು. ಆದಾಯ ತೆರಿಗೆ ಕಡಿಮೆ ಮಾಡುವುದರಿಂದ ಅನುಭೋಗ ಹೆಚ್ಚಾಗುತ್ತದೆ ಎಂದು ವಿತ್ತ ಸಚಿವರು, ಪ್ರಧಾನಿಗಳು ಹೇಳುತ್ತಿದ್ದಾರೆ. ಈ ಆದಾಯ ತೆರಿಗೆ ಕಡಿತ ಮಧ್ಯಮ ವರ್ಗಕ್ಕೆ ಬಹಳ ವರ್ಷಗಳ ಹಿಂದೆಯೇ ಆಗಬೇಕಾಗಿತ್ತು. ಆದರೆ ಇದು ಉಪಯೋಗವಾಗುವುದು ಕೇವಲ 3 ಕೋಟಿ ಜನರಿಗೆ ಮಾತ್ರ. ದೇಶದ ಜನಸಂಖ್ಯೆ 143 ಕೋಟಿ ಎಂದುಕೊಂಡರೂ 140 ಕೋಟಿ ಜನರಿಗೆ ಇದರಿಂದ ಏನು ಉಪಯೋಗವಾಯಿತು? ಪ್ರಮುಖ ವಿಚಾರ ಎಂದರೆ ದೇಶದ ಜನರ ಉಳಿತಾಯ ಪ್ರಮಾಣ ಬಿದ್ದು ಹೋಗಿದೆ. ಆದಾಯ ಕಡಿತ ಎನ್ನುವುದರಿಂದ ರಾವಣಾಸುರನಿಗೆ ಅರೆಕಾಸಿನ ಮಜ್ಜಿಗೆಯಂತೆ ಆಗಿದೆ ಹೊರತು ಉಪಯೋಗ ಕಡಿಮೆ ಎಂದರು. ಇಂಧನ ಬೆಲೆ ಇಳಿಕೆ ಮಾಡಿದ್ದರೆ ಇಡೀ ದೇಶದ ಜನರಿಗೆ, ಕೂಲಿ ಕಾರ್ಮಿಕರಿಗೆ, ಮನೆ ಕೆಲಸದವರಿಗೆ, ಬಡವರಿಗೆ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಉಪಯೋಗವಾಗುತ್ತಿತ್ತು. ಜಿಎಸ್‌ಟಿ ಕಡಿಮೆ ಮಾಡಿದ್ದರೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತಿತ್ತು. ಖಾಸಗಿ ವಲಯದ ಹೂಡಿಕೆ ಗಮನಿಸಿದರೆ 2019 ರಿಂದಲೂ ಖಾಸಗಿಯವರು ಹೂಡಿಕೆ ಮಾಡುವುದು ನಿಲ್ಲಿಸಿದ್ದಾರೆ. ಕಳೆದ ವರ್ಷ ಶೇ.30 ರಿಂದ 22ಕ್ಕೆ ಕಾರ್ಪೋರೇಟ್ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡಲಾಯಿತು. ಇಷ್ಟು ಅನುಕೂಲ ತೆಗೆದುಕೊಂಡರೂ ಹೂಡಿಕೆದಾರರಿಗೆ ಹಣ ಹೂಡಿಕೆ ಮಾಡಲು ಇಷ್ಟವಿಲ್ಲ. ಏಕೆಂದರೆ ಮೋದಿ ಸರ್ಕಾರ ಕ್ರೋನಿ ಬಂಡವಾಳಶಾಹಿಗಳ ಪರ. ಅವರಿಗೆ ಬೇಕಾದ ಅದಾನಿ, ಅಂಬಾನಿ ಅವರ ಪರವಾಗಿ ಮಾತ್ರ ನಿಲ್ಲುತ್ತಾರೆ ಎಂದು ಟೀಕಿಸಿದರು. ಕರ್ನಾಟಕಕ್ಕೆ ಹೆಚ್ಚು ಅನ್ಯಾಯವಾಗಿದೆ. ಏಮ್ಸ್, ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಟ್ಟಿಲ್ಲ. ಕೇವಲ 40 ತಿಂಗಳಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲ್ವೇ ಮಾಡುವುದಾಗಿ ಹೇಳಿದ್ದರು. ಅದಕ್ಕೂ ಅನುದಾನ ಸರಿಯಾಗಿ ನೀಡದೆ ಮೋಸ ಮಾಡಲಾಗಿದೆ ಎಂದ ಅವರು ದೇಶದ ಬಗ್ಗೆ ಬಿಜೆಪಿಗೆ ಮುಂದಾಲೋಚನೆಯಿಲ್ಲ. ಏಕೆಂದರೆ ಪ್ರತಿ ಬಾರಿಯೂ 2 ಗಂಟೆಗೂ ಹೆಚ್ಚು ಕಾಲ ಒಣ ಭಾಷಣ ಮಾಡುತ್ತಿದ್ದ ಅವರು ಈ ಬಾರಿ ಕೇವಲ ಒಂದೂವರೆಗಂಟೆಗೆ ಮುಗಿಸಿದ್ದಾರೆ ಎಂದು ಹೇಳಿದರು. ಕೆಪಿಸಿಸಿ ಪಧವೀದರರ ವಿಭಾಗದ ಅಧ್ಯಕ್ಷ ನಟರಾಜ ಗೌಡ, ರಘು ದೊಡ್ಡೇರಿ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net