ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಸೆಡ್ಡು ಹೊಡೆದು ಬೀದಿಗಿಳಿಯಲು ನಿರ್ಧಾರ

BJP
Published on

ಬೆಂಗಳೂರು: ರಾಜ್ಯ ಸರ್ಕಾರದ ಭ್ರಷ್ಟಾಚಾರ, ಕಲಾವಿದರ ಬಳಿ ಕಮಿಷನ್‌ಗೆ ಕೈಚಾಚಿದ್ದು ಖಂಡಿಸಿ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಸೋಮವಾರ ಮತ್ತು ಮಂಗಳವಾರ ಪ್ರತಿಭಟನೆ ನಡೆಸಲು ಪ್ರತಿಪಕ್ಷ ಬಿಜೆಪಿ ತೀರ್ಮಾನಿಸಿದೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಆಯ್ದ ಪದಾಧಿಕಾರಿಗಳೊಂದಿಗೆ ಪಕ್ಷದ ರಾಜ್ಯಾಧ್ಯಕ್ಷ ಭಾನುವಾರ ಸಭೆ ನಡೆಸಿ, ಕಾಂಗ್ರೆಸ್‌ನ ಕಮಿಷನ್ ಅಸವನ್ನು ತಿರುಗುಬಾಣವಾಗಿಸಲು ಎರಡು ದಿನಗಳ ಹೋರಾಟಕ್ಕೆ ನಿರ್ಧರಿಸಿದೆ.

ರಾಜ್ಯಾದ್ಯಂತ ಎಲ್ಲ ಜಿಲ್ಲೆ, ಮಂಡಲಮಟ್ಟದಲ್ಲಿ ಸೋಮವಾರ ಚಳವಳಿ ನಡೆಸಿ, ಕಾಂಗ್ರೆಸ್ ಸರ್ಕಾರದ ವರ್ಗಾವಣೆ ಮತ್ತು ಕಮಿಷನ್ ದಂಧೆಯತ್ತ ಜನರ ಗಮನಸೆಳೆಯಲು ಮುಂದಾಗಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರ ಬೃಹತ್ ಹೋರಾಟ ನಡೆಸಲಿದೆ.

ಪ್ರವಾಸದ ಚಿಂತನೆ

ಕಾವೇರಿ ಜಲ ವಿವಾದ ಹಾಗೂ ಬರ ನಿರ್ವಹಣೆ ನಿರ್ಲಕ್ಷ್ಯದ ವಿಷಯಗಳನ್ನು ಮುಂದಿಟ್ಟುಕೊಂಡು ಜನ ಜಾಗೃತಿ ಮೂಡಿಸಲು ಉದ್ದೇಶಿತ ಪ್ರವಾಸ ಆದಷ್ಟು ಬೇಗ ಶುರು ಮಾಡುವ ಬಗ್ಗೆ ಸಭೆ ಚಿಂತನೆ ನಡೆಸಿತು.

ನವರಾತ್ರಿ ಉತ್ಸವ, ದಸರಾ ಹಬ್ಬ, ಪಂಚರಾಜ್ಯಗಳ ಚುನಾವಣೆ ಉಸ್ತುವಾರಿಗೆ ರಾಜ್ಯದ ಹಲವು ನಾಯಕರು, ಶಾಸಕರ ನಿಯೋಜನೆ ವಿಷಯ ಪ್ರಸ್ತಾಪವಾಯಿತು. ಹಬ್ಬ ಹಾಗೂ ಚುನಾವಣೆ ನಂತರ ರಾಜ್ಯ ನಾಯಕರ ಪ್ರವಾಸದ ದಿನಾಂಕ ಅಂತಿಮಗೊಳಿಸುವುದು ಸೂಕ್ತವೆಂಬ ನಿಲುವು ಸಭೆ ತಳೆಯಿತು ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಗಳಿಗೆ ರೇಟ್ ಫಿಕ್ಸ್

ಸಭೆಯ ನಂತರ ಸುದ್ದಿಗಾರರೊಂದಿಗೆ ಪಕ್ಷದ ರಾಜ್ಯಾಧ್ಯಕ್ಷ ಮಾತನಾಡಿ ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್, ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಜತೆಗೆ ಸಭೆ ಸೇರಿ ಎರಡು ದಿನಗಳ ಹೋರಾಟಕ್ಕೆ ತೀರ್ಮಾನಿಸಿದ್ದೇವೆ.

ಸಿಎಂ, ಡಿಸಿಎಂ ರಾಜೀನಾಮೆಗೆ ಒತ್ತಾಯಿಸಿ ಎಲ್ಲ ಜಿಲ್ಲೆ, ಮಂಡಲ ಕೇಂದ್ರಗಳಲ್ಲಿ ಸೋಮವಾರ ಮತ್ತು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ನಿರ್ದಿಷ್ಟ ಹುದ್ದೆಗಳಿಗೆ ವರ್ಗಾವಣೆ ಮಾಡಲು ಅಧಿಕಾರಿಗಳಿಗೆ ರೇಟ್ ಫಿಕ್ಸ್ ಮಾಡಿದ ಸರ್ಕಾರವಿದು. ಅಧಿಕಾರಿಗಳಿಂದ ಭ್ರಷ್ಟಾಚಾರ ಆರಂಭಿಸಿದ ಸರ್ಕಾರ ಕಲಾವಿದರನ್ನೂ ಬಿಟ್ಟಿಲ್ಲ ಎಂದು ವಾಗ್ದಾಳಿ ಮಾಡಿದರು.

ಲಂಚ ಕೇಳಿದ್ದಾಗಿ ಮೈಸೂರು ದಸರಾದಲ್ಲಿ ಭಾಗವಹಿಸಬೇಕಾದ ಕಲಾವಿದರೇ ಆರೋಪ ಮಾಡಿದ್ದಾರೆ. ಹಿಂದೆ ಎಟಿಎಂ ಸರ್ಕಾರ ಬರಲಿದೆ ಎಂದಾಗ ಸಾಕ್ಷಿ ಕೊಡಿ ಎಂದಿದ್ದರು. ಇವತ್ತು ಸಾಕ್ಷಿ, ಆಧಾರಗಳನ್ನು ಸಿದ್ರಾಮಣ್ಣ, ಡಿ.ಕೆ.ಶಿವಕುಮಾರ್ ಇಟ್ಟಿದ್ದಾರೆ ಎಂದರು.

ಐಟಿ ದಾಳಿಯಾದಾಗ ಗುತ್ತಿಗೆದಾರ, ಬಿಲ್ಡರ್‌ಗಳ ಮನೆಯಲ್ಲಿ 40 ರಿಂದ 50 ಕೋಟಿ ರೂ. ಸಿಗುತ್ತದೆ. 600 ಕೋಟಿ ರೂ. ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಎರಡೇ ದಿನಗಳಲ್ಲಿ ಗುತ್ತಿಗೆದಾರನ ಮನೆಯಲ್ಲಿ 42 ಕೋಟಿ ರೂ. ಪತ್ತೆಯಾಗಿದ್ದು, ಇದಕ್ಕೂ ಕಾಂಗ್ರೆಸ್ಸಿಗೂ ಸಂಬಂಧವಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಜನರ ಹಣವನ್ನು ಲೂಟಿ ಮಾಡಿ ಪಂಚರಾಜ್ಯಗಳ ಚುನಾವಣೆ ಕಳುಹಿಸುತ್ತಿರುವ ಲೂಟಿ ಸರ್ಕಾರವಿದು. ಸಿಎಂ, ಡಿಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net