

ಬೆಂಗಳೂರು: ಇತ್ತೀಚಿನ ಚುನಾವಣೆಗಳಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೆ ಇರುವುದರಿಂದ ಆತಂಕಕ್ಕೆ ಒಳಗಾಗಿರುವ ಬಿಜೆಪಿ, ಮತ್ತೆ ವಿಸ್ತಾರಕರ ಮೊರೆ ಹೋಗಲು ನಿರ್ಧರಿಸಿದ್ದು, ಹೈಕಮಾಂಡ್ ರಾಜ್ಯ ಘಟಕಕ್ಕೆ ಕೆಲವೊಂದು ಟಾಸ್ಕ್ ನೀಡಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ವಿಸ್ತಾರಕ ಯೋಜನೆ ಬಿಜೆಪಿಗೆ ಸಾಕಷ್ಟು ಅನುಕೂಲ ಮಾಡಿತ್ತು. ಆದರೆ ಆನಂತರ ಮತದಾರರ ಜತೆ ಸತತ ಸಂಪರ್ಕ ಇರಲಿಲ್ಲ. ಅದು ಬೇರೆ ಬೇರೆ ಚುನಾವಣೆಗಳಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಆದ್ದರಿಂದಲೇ ಪಕ್ಷ ಮತ್ತೆ ವಿಸ್ತಾರಕರನ್ನೇ ಅವಲಂಬಿಸಲು ನಿರ್ಧರಿಸಿದೆ. ರಾಜ್ಯ ವಿಧಾನಸಭೆಗೆ 2023ರ ಏಪ್ರಿಲ್ನಲ್ಲಿ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ಸೆಮಿಫೈನಲ್ ರೀತಿಯಲ್ಲಿ ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆಗಳು ನಡೆಯಲಿವೆ. ಪಕ್ಷದ ಬಗ್ಗೆ ಮತದಾರರಿಗೆ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಬೇಕಾಗಿರುವುದರಿಂದ ಫೆಬ್ರವರಿಯಿಂದಲೇ ವಿಸ್ತಾರಕ ಯೋಜನೆ ಜಾರಿಗೆ ತರಲಾಗುತ್ತದೆ. ರಾಜ್ಯದಲ್ಲಿ 58 ಸಾವಿರಕ್ಕೂ ಅಧಿಕ ಮತಗಟ್ಟೆಗಳಿವೆ. ಪಕ್ಷದಲ್ಲಿ ಎಲ್ಲ ಹಂತಗಳಿಂದ ಒಂದು ಲಕ್ಷಕ್ಕೂ ಅಧಿಕ ಪದಾಧಿಕಾರಿಗಳಿದ್ದಾರೆ. ಅವರೆಲ್ಲರೂ ಈಗ ವಿಸ್ತಾರಕರ ಕೆಲಸ ಮಾಡಲಿದ್ದಾರೆ.
ಬೂತ್ಗೆ ಭೇಟಿ: ಮುಖ್ಯಮಂತ್ರಿಯಿಂದ ಹಿಡಿದು ತಳಹಂತದ ಪದಾಧಿಕಾರಿ ತನಕ ಪ್ರತಿಯೊಬ್ಬರೂ ಬೂತ್ಗಳಿಗೆ ಭೇಟಿ ನೀಡಿ ಮನೆ ಮನೆಗೆ ತೆರಳಿ ಮತದಾರರ ಮನವೊಲಿಸುವ ಕೆಲಸ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಮತದಾರರ ಮುಂದಿಡಬೇಕು. ಒಂದು ಬಾರಿ ಮಾತ್ರ ಭೇಟಿ ನೀಡುವುದಲ್ಲ. ಮುಂದಿನ ಚುನಾವಣೆ ತನಕ ನಿರಂತರವಾಗಿ ಈ ಕೆಲಸ ಆಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಹೈಕಮಾಂಡ್ ಸೂಚನೆ: ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಪ್ರಯಾಸದ ಗೆಲುವು, ಹಾನಗಲ್- ಮಸ್ಕಿ ಸೋಲು, ಮೇಲ್ಮನೆ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಗೆಲ್ಲದಿರುವುದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದು ಎರಡನೇ ಸ್ಥಾನದಲ್ಲಿರುವುದು ವರಿಷ್ಠರ ಕೆಂಗಣ್ಣಿಗೆ ರಾಜ್ಯ ಘಟಕ ತುತ್ತಾಗಿದೆ. ಆದ್ದರಿಂದಲೇ ಹೈಕಮಾಂಡ್ನಿಂದ ಮುಂದಿನ ಚುನಾವಣೆಗೆ ಸಜ್ಜಾಗಲು ಏನೇನು ಮಾಡಬೇಕೆಂಬ ಬಗ್ಗೆ ಕೆಲವೊಂದು ಸಲಹೆ ಸೂಚನೆ ಬಂದಿವೆ ಎಂದು ಮೂಲಗಳು ತಿಳಿಸಿವೆ. ಪ್ರತಿ ಮತಗಟ್ಟೆಗೆ ಶಕ್ತಿ ಕೇಂದ್ರದ ಪ್ರಮುಖರು ಭೇಟಿ ನೀಡಬೇಕು. ವಾರಕ್ಕೆರಡು ದಿನ ಈ ಭೇಟಿ ಇರಬೇಕು. ಆ ಸಂದರ್ಭದಲ್ಲಿ ಮತದಾರರನ್ನು ಭೇಟಿಯಾಗಬೇಕು. ಮಂಡಲ ಮಟ್ಟದಲ್ಲಿ ನಿರಂತರವಾಗಿ ವಿಸõತ ಸಭೆ ನಡೆಸಬೇಕು. ಪ್ರತಿ ಮತಗಟ್ಟೆಯಲ್ಲಿ ಪಕ್ಷ ಸಶಕ್ತಿಕರಣವಾಗಬೇಕು. ಪರಿಶಿಷ್ಟ ಜಾತಿ- ಪಂಗಡ, ಹಿಂದುಳಿದ ಮತದಾರನ್ನು ಸೆಳೆಯಲು ತಳಹಂತದಲ್ಲಿ ಕಾರ್ಯಕ್ರಮ ರೂಪಿಸಬೇಕು. ಸಹಕಾರ ಸಂಘಗಳ ಪದಾಧಿಕಾರಿಗಳು, ಸ್ವಸಹಾಯ ಗುಂಪುಗಳ ಸದಸ್ಯರು, ಸ್ತ್ರೀಶಕ್ತಿ ಸಂಘಗಳ ಮುಖಂಡರನ್ನು ಬಿಜೆಪಿಗೆ ಸೇರಿಸಬೇಕು. ಬೇರೆ ಪಕ್ಷದವನ್ನು ಅದರಲ್ಲೂ ಸೋತವರನ್ನು ಸೆಳೆಯಲು ಯತ್ನಿಸಬೇಕು. ಪ್ರತಿ ಮತಗಟ್ಟೆಯಲ್ಲಿ ಬಿಜೆಪಿ ಸಾಧನೆಗಳ ಪರಿಚಯದ ಗೋಡೆ ಬರಹ, ಭಿತ್ತಿಪತ್ರ ಹಾಕಬೇಕು. ಪೆೇಜ್ ಪ್ರಮುಖರ ನೇಮಕ, ಕಾಂಗ್ರೆಸ್ ವಿರುದ್ಧ ಚಾರ್ಜ್ಶೀಟ್ ಸಿದ್ದಪಡಿಸಿ ಮನೆಮನೆಗೆ ಹಂಚಬೇಕೆಂಬ ಸೂಚನೆಗಳಿವೆ. ಈ ಬಗ್ಗೆ ಪಕ್ಷದಲ್ಲಿಯೂ ಚರ್ಚೆಯಾಗಿದೆ. ಫೆಬ್ರವರಿಯಿಂದ ಹಂತಹಂತವಾಗಿ ಜಾರಿಯಾಗುತ್ತವೆ ಎಂದು ಮೂಲಗಳು ಖಚಿತಪಡಿಸಿವೆ.
ರಾಜ್ಯದ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಕಳಪೆ ಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ 3 ದಿನ ರಾಜ್ಯ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ದಿನವೇ ವರದಿ ಷಾ ಕೈಸೇರಿದೆ. ಈ ವರದಿ ಮೇಲೆ ಕಣ್ಣಾಡಿಸಿದ ಷಾ, ‘ಯೇ ಕ್ಯಾ ಹೈ, ಅಚ್ಛಾ ನಹಿ’ (ಏನಿದು, ಒಳ್ಳೆಯ ಬೆಳವಣಿಗೆಯಲ್ಲ) ಎಂದು ಅಸಹನೆ ವ್ಯಕ್ತಪಡಿಸಿದ್ದು, ಪೂರ್ವಾಪರ ಮಾಹಿತಿ ಯಿಲ್ಲದ ಅರುಣ್ ಸಿಂಗ್ ಪ್ರತ್ಯುತ್ತರಿ ಸಲು ತಡವರಿಸಿದರು ಎಂದು ಮೂಲಗಳು ತಿಳಿಸಿವೆ. ಕೇಂದ್ರ-ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದ್ದರೂ ಚುನಾವಣೆಯಲ್ಲಿ ಒಂದೊಂದರ ಮೇಲೊಂದು ಹಿನ್ನಡೆ ಅನುಭವಿಸುತ್ತಿರುವುದು ವರಿಷ್ಠರನ್ನು ಚಿಂತೆಗೀಡು ಮಾಡಿದ್ದು, ಅದುಮಿಟ್ಟ ಅತೃಪ್ತಿಯನ್ನು ಅಮಿತ್ ಷಾ ಪಕ್ಷದ ರಾಜ್ಯ ಉಸ್ತುವಾರಿ ಎದುರು ಬಹಿರಂಗಪಡಿಸಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ನ 25 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಸಮಬಲದ ಸಾಧನೆ ಜೀರ್ಣಿಸಿಕೊಳ್ಳಲು ಕಮಲಪಡೆ ಪರಿತಪಿಸುತ್ತಿದೆ. ಈ ಮಧ್ಯೆ, ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಥಾನಗಳು ಮತ್ತು ಮತಗಳ ಗಳಿಕೆಯಲ್ಲೂ ಗಣನೀಯ ಕುಸಿತ ರಾಜ್ಯ ಮತ್ತು ದೆಹಲಿ ನಾಯಕರನ್ನು ಕಂಗೆಡಿಸಿದೆ ಎಂದು ಮೂಲಗಳು ಹೇಳಿವೆ.
ವಿವರಣೆ ಕೇಳಿದ ಅಮಿತ್ ಷಾ: ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಹಿನ್ನಡೆಗೆ ಸಮಜಾಯಿಷಿ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಸೂಚಿಸಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಪಕ್ಷದ ರಾಜ್ಯಾಧ್ಯಕ್ಷ, ಚುನಾವಣಾ ಉಸ್ತುವಾರಿಗಳು, ಸಚಿವರು, ಆಯಾ ಕ್ಷೇತ್ರದ ಶಾಸಕರು ಹಾಗೂ ಮುಖಂಡರಿಗೆ ಕಾರಣ ಸಹಿತ ವಿವರಣೆ ನೀಡುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಂದಲೂ ಷಾ ಮಾಹಿತಿ ಬಯಸಿದ್ದಾರೆ ಎಂದು ತಿಳಿದುಬಂದಿದೆ.