ಪ್ರಧಾನಿ ಮೋದಿ ಭೇಟಿ, ಜನಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಸಿದ್ಧತೆ; ಪ್ರಮುಖರ ಸಭೆಯಲ್ಲಿ ತಯಾರಿ ವರದಿ ಒಪ್ಪಿಸಿದ ಸಚಿವರು..

CM mysore
ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಬುಧವಾರ ಆಯೋಜಿಸಿದ್ದ ಪ್ರಧಾನಿ ಮೋದಿಯವರ ಬೆಂಗಳೂರು ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಾಗಿ ಬಿಜೆಪಿ ಪ್ರಮುಖರ ಸಭೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನಾಮಬಲ, ವರ್ಚಸ್ಸು ಬಳಸಿಕೊಂಡು ಹಳೇ ಮೈಸೂರು ಭಾಗವನ್ನು ಭದ್ರಪಡಿಸಿಕೊಳ್ಳಲು ಆಡಳಿತ ಬಿಜೆಪಿ ಉತ್ಸುಕವಾಗಿದೆ. ಬಹುದಿನಗಳ ನಂತರ ಮೋದಿ ರಾಜ್ಯ ಪ್ರವಾಸ ನಿಗದಿಯಾಗಿದ್ದು, ಜೂ.20, 21ರಂದು ಬೆಂಗಳೂರು ಮತ್ತು ಮೈಸೂರಿಗೆ ಭೇಟಿ ನೀಡುತ್ತಿರುವ ಅವರು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಪೂರ್ಣಗೊಂಡಿರುವ ಯೋಜನೆಗಳ ಲೋಕಾರ್ಪಣೆ ಮಾಡಲಿದ್ದಾರೆ. ಸಂಭಾವ್ಯ ಬಿಬಿಎಂಪಿ, ತಾಲೂಕು, ಜಿಲ್ಲಾ ಪಂಚಾಯಿತಿ ಇದಾದ ನಂತರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳ ವರ್ಷದಲ್ಲಿ ಮೋದಿ ಆಗಮನ ಕಮಲಪಡೆಯಲ್ಲಿ ಹೊಸ ಹುರುಪು ತುಂಬಿದೆ. ಬೆಂಗಳೂರು ಮಹಾನಗರವನ್ನು ಕೇಸರಿಮಯಗೊಳಿಸಿ, ಅದ್ಧೂರಿಯಾಗಿ ಸಾರ್ವಜನಿಕ ಸಮಾರಂಭ ಸಂಘಟಿಸುವ ಮೂಲಕ ಸ್ಪಷ್ಟ ಸಂದೇಶ ರವಾನಿಸಲು ಸನ್ನದ್ಧವಾಗಿದೆ.

ವರದಿ ಒಪ್ಪಿಸಿದ ಸಚಿವರು: ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಬುಧವಾರ ಆಯೋಜಿಸಿದ್ದ ಪ್ರಮುಖರ ಸಭೆಯಲ್ಲಿ ಪೂರ್ವಭಾವಿ ಸಿದ್ಧತೆ ಕುರಿತು ಸಚಿವರು ವರದಿ ಒಪ್ಪಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ, ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್​ಕುಮಾರ್, ಇನ್ನಿತರ ಸಚಿವರು, ಪದಾಧಿಕಾರಿಗಳು ರೂಪರೇಷೆ ಬಗ್ಗೆ ರ್ಚಚಿಸಿ ಮಾಹಿತಿ ಹಂಚಿಕೊಂಡರು.

18ಕ್ಕೆ ಸಿದ್ಧತೆ ಪೂರ್ಣ: ಮೋದಿಯವರ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿ ಜೂ.18ರೊಳಗೆ ಎಲ್ಲ ಸಿದ್ಧತೆ ಪೂರ್ಣಗೊಳಿಸಬೇಕು ಎಂದು ಸಿಎಂ, ಪಕ್ಷದ ರಾಜ್ಯ ನಾಯಕರು ಸಲಹೆ ನೀಡಿದರು. ಸಚಿವರ ಜತೆ ಶಾಸಕರಿಗೂ ಜವಾಬ್ದಾರಿ ಹಂಚಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆಯಿಂದ ಹಿಡಿದು ಪ್ರತಿಹಂತದ ಪ್ರಚಾರ ವ್ಯವಸ್ಥೆಗೆ ಮೂರು ಹಂತದ ಸಮಿತಿಗಳನ್ನು ರಚಿಸಿ ನಿರ್ವಹಿಸಲು ಸೂಚಿಸಲಾಯಿತು. ಬೆಂಗಳೂರಿನ ಎಲ್ಲ ವಾರ್ಡ್​ಗಳು, ರಸ್ತೆಗಳು, ವೃತ್ತಗಳಿಗೆ ಅಲಂಕಾರ, ಬಂಟಿಂಗ್ಸ್ ಸೇರಿ ಎಲ್ಲಿ ನೋಡಿದರಲ್ಲಿ ಕಮಲ ಚಿಹ್ನೆ, ಬಾವುಟ ರಾರಾಜಿಸಬೇಕು. ಅಧಿಕೃತ ಸರ್ಕಾರಿ ಕಾರ್ಯಕ್ರಮಗಳು ನಡೆಯುವ ಸ್ಥಳ, ವೇದಿಕೆ ಹೊರತುಪಪಡಿಸಿ ಉಳಿದೆಲ್ಲೆಡೆ ಕೇಸರಿಮಯಗೊಳಿಸಬೇಕು. ಮೋದಿ ಬೆಂಗಳೂರಿಗೆ ಬಂದಿಳಿದು ವಾಪಸ್ ಮೈಸೂರಿಗೆ ಹೋಗುವ ತನಕ ಕಾರ್ಯಕ್ರಮಗಳಲ್ಲಿ ಅಚ್ಚುಕಟ್ಟು, ಹೆಚ್ಚಿನ ಜನರ ಜಮಾವಣೆ, ಶಿಸ್ತು ಹಾಗೂ ಉತ್ಸಾಹಭರಿತ ವಾತಾವರಣ ಸೃಷ್ಟಿಸಬೇಕು ಎಂದು ಹೇಳಿದರು.

ಕೊಡುಗೆ ಫೋಕಸ್: ಬೆಂಗಳೂರಿಗೆ ಬಹುದೊಡ್ಡ ಕೊಡುಗೆ ನೀಡಲೆಂದು ಮೋದಿ ಬರುತ್ತಿದ್ದಾರೆ. ಈ ಅಂಶಗಳಿಗೆ ಹೆಚ್ಚಿನ ಫೋಕಸ್ ನೀಡಬೇಕು. 15,000 ಕೋಟಿ ರೂ. ವೆಚ್ಚದ ಬೆಂಗಳೂರು ಸಬ್​ಅರ್ಬನ್ ರೈಲ್ವೆ ಮಾರ್ಗ ನಿರ್ವಣಕ್ಕೆ ಅಡಿಗಲ್ಲು ಸೇರಿ ವಿವಿಧ ಅಭಿವೃದ್ಧಿ ಕಾರ್ಯ ಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಯೋಜನೆಗಳು, ಅನುದಾನದ ಬಗ್ಗೆ ವ್ಯಾಪಕ ಪ್ರಚಾರದ ವೇಳೆ ಬಳಸಿಕೊಂಡು ಜನರಿಗೆ ಸರಿಯಾದ ಮಾಹಿತಿ ನೀಡಲು ಪ್ರಮುಖರ ಸಭೆ ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ಬೇರೆ ರಾಜ್ಯಗಳಿಗೆ ಹೋದಾಗ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಬಹಳ ದಿನಗಳ ನಂತರ ರಾಜ್ಯಕ್ಕೆ ಬರುತ್ತಿದ್ದು, ಚುನಾವಣಾ ವರ್ಷವಿದು. ಸಮಾರಂಭಕ್ಕೆ ಸರ್ಕಾರ ವ್ಯವಸ್ಥೆ ಮಾಡಲಿದ್ದು, ದೊಡ್ಡ ಪ್ರಮಾಣದಲ್ಲಿ ಜನರನ್ನು ಕರೆತರುವುದು ಎಲ್ಲರ ಜವಾಬ್ದಾರಿಯಾಗಿದೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಏನೆಲ್ಲ ಸಿದ್ಧತೆ?

  • ಯಲಹಂಕ ಏರ್​ಬೇಸ್​ನಿಂದ ಐಐಎಸ್ಸಿವರೆಗೆ 14 ಕಿ.ಮೀ., ಕೊಮ್ಮಘಟ್ಟದಿಂದ ಡಾ.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್​ವರೆಗೆ 12 ಕಿ.ಮೀ. ಉದ್ದದ ರೋಡ್ ಶೋ
  • ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಕನಿಷ್ಠ 5,000 ಜನರಂತೆ 22 ವಿಧಾನಸಭೆ ಕ್ಷೇತ್ರಗಳ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗಿ
  • ಕೊಮ್ಮಘಟ್ಟದ ಸಾರ್ವಜನಿಕ ಸಮಾರಂಭದಲ್ಲಿ 30,000 ಕುರ್ಚಿಗಳ ವ್ಯವಸ್ಥೆ, 60 ಸಾವಿರ ಜನರು ಸೇರುವ ನಿರೀಕ್ಷೆ
  • ಯಶವಂತಪುರ, ಆರ್​ಆರ್ ನಗರ ಸೇರಿ ಆರು ವಿಧಾನಸಭೆ ಕ್ಷೇತ್ರಗಳ ಜನರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿ
  • ಸಮಾರಂಭಕ್ಕೆ ಜನರನ್ನು ಕರೆತರಲು 656 ಬಸ್​ಗಳು ಹಾಗೂ ಖಾಸಗಿ ವಾಹನಗಳ ಏರ್ಪಾಡು
  • ಸಚಿವರ ನೇತೃತ್ವದಲ್ಲಿ ಪೂರ್ವಭಾವಿ ಸಿದ್ಧತೆ, ರೂಪುರೇಷೆ ಅನುಷ್ಠಾನಕ್ಕೆ ವಿಧಾನಸಭೆ, ಮಂಡಲ ಮತ್ತು ವಾರ್ಡ್​ವುಟ್ಟದಲ್ಲಿ ಸಮಿತಿಗಳ ರಚನೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net