

ನವದೆಹಲಿ: ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಪ್ರಮಾಣದ ಅಂತರದೊಂದಿಗೆ ಜಯಭೇರಿ ಭಾರಿಸಿರುವ ಎಎಪಿಯ ಅರವಿಂದ್ ಕೇಜ್ರಿವಾಲ್ಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ವರ್ಗೀಯಾ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ. ದೆಹಲಿಯ ಪ್ರತಿ ಶಾಲೆ ಮದ್ರಸಾಗಳಲ್ಲಿ ಹನುಮಾನ್ ಚಾಲೀಸ ಪಠಿಸುವುದು ಕಡ್ಡಾಯ ಮಾಡಬೇಕೆಂದು ನೂತನ ಮುಖ್ಯಮಂತ್ರಿಯಲ್ಲಿ ಕೇಳಿಕೊಂಡಿದ್ದಾರೆ.
ನೂತನ ಸಿಎಂಗೆ ಟ್ವಿಟ್ಟರ್ನಲ್ಲಿ ಶುಭ ಹಾರೈಸಿರುವ ಕೈಲಾಶ್ ಜಯ್ವರ್ಗೀಯಾ, "ಹನುಮಾನ್ ಜೀಯಲ್ಲಿ ನಂಬಿಕೆ ಇಡುವವರಿಗೆ ದೇವರು ಖಂಡಿತವಾಗಿಯೂ ಹರಸುತ್ತಾನೆ. ದೆಹಲಿಯ ಎಲ್ಲ ಶಾಲಾ ಕಾಲೇಜು, ಮದ್ರಾಸ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಹನುಮಾನ್ ಚಾಲೀಸ ಪಠಣವನ್ನು ಕಡ್ಡಾಯ ಮಾಡುವ ಸಮಯ ಬಂದಿದೆ. ದೆಹಲಿಯ ಮಕ್ಕಳು ಭಜರಂಗಿಯ ಕೃಪೆಯಿಂದ ಏಕೆ ವಂಚಿತರಾಗಬೇಕು?" ಎಂದು ಟ್ವೀಟ್ ಮಾಡಿದ್ದಾರೆ.
ಇಂದು ಬೆಳಗ್ಗೆ ಕೈಲಾಶ್ ಜಯ್ವರ್ಗೀಯಾವರು ಈ ಟ್ವೀಟ್ ಮಾಡಿದ್ದು ಜನ ಸಾಮಾನ್ಯರು ಟ್ವೀಟ್ನ ಕುರಿತಾಗಿ ಅಸಮಾಧಾನವನ್ನು ಹೊರ ಹಾಕಲಾರಂಭಿಸಿದ್ದಾರೆ. ಜಮ್ಮುವಿನಿಂದ ನಮ್ಮನ್ನು ಓಡಿಸಿದಿರಿ, ಆಮೇಲೆ ಬಂಗಾಳದಿಂದಲೂ ಓಡಿಸಿದಿರಿ ಈಗ ದೆಹಲಿಯಿಂದಲೂ ಓಡಿಸುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ತಮ್ಮ ಆಕ್ರೋಷವನ್ನು ವ್ಯಕ್ತ ಪಡಿಸುತ್ತಿದ್ದಾರೆ. (ಏಜೆನ್ಸೀಸ್)