ಮತಗಳ್ಳತನದಿಂದ ಬಿಜೆಪಿಗೆ ಅಧಿಕಾರ

sgr congress
ಸಾಗರದಲ್ಲಿ ಆಯೋಜಿಸಿದ್ದ ನಗರ ಕಾಂಗ್ರೆಸ್ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತಿತರರು ಸಂವಿಧಾನದ ಪೀಠಿಕೆ ಓದಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕಲಸೆ ಚಂದ್ರಪ್ಪ, ಮಧುಮಾಲತಿ, ಗಣಪತಿ ಮಂಡಗಳಲೆ, ಉಷಾ ಇದ್ದರು.
Published on

ಸಾಗರ: ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತಗಳ್ಳತನದ ಮೂಲಕ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ ಎಂಬ ಸಂಗತಿ ಬಯಲಾಗಿದೆ. ಕಾಂಗ್ರೆಸ್ ಗೆಲುವಿನ ಓಟಕ್ಕೆ ಅಡ್ಡಿಯಾಗಿದ್ದು ಮತಗಳ್ಳತನ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಪ್ರಮುಖರ ಸಮಾಲೋಚನಾ ಸಭೆಯನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮತಗಳ್ಳತನವನ್ನು ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಪತ್ತೆಹಚ್ಚಿದ್ದಾರೆ. ಈ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಮತಗಳ್ಳತನ ಸಂವಿಧಾನದ ಆಶಯಕ್ಕೆ ವಿರುದ್ಧವಾದುದು. ಅಧಿಕಾರ ಹಿಡಿಯಲು ಬಿಜೆಪಿ ಅನುಸರಿಸುತ್ತಿರುವ ವಾಮಮಾರ್ಗಗಳಲ್ಲಿ ಇದೂ ಒಂದು ಎಂದರು.

ದೇಶವಾಸಿಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು, ಅನಧಿಕೃತ ಮತದಾರರನ್ನು ಪಟ್ಟಿಯಿಂದ ವಜಾ ಮಾಡಲು ಕ್ರಮ ಕೈಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 25 ಸಾವಿರ ಸಹಿ ಸಂಗ್ರಹ ಮಾಡುವ ಉದ್ದೇಶವಿದೆ. ಪಕ್ಷದ ಪ್ರಮುಖರು, ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಸಹಿ ಸಂಗ್ರಹಿಸುವ ಜತೆಗೆ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಲು ಈಗಿನಿಂದಲೇ ವೇದಿಕೆ ಸಜ್ಜುಗೊಳಿಸಿ ಎಂದು ತಿಳಿಸಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರವೇ ಅನುಮತಿ ನೀಡಿದೆ. ಭವಿಷ್ಯದ ದೃಷ್ಟಿಯಿಂದ ದೇಶಕ್ಕೆ ಜಲವಿದ್ಯುತ್ ಅಗತ್ಯ. ಯೋಜನೆ ಬಗ್ಗೆ ಕೆಲವು ಪರಿಸರವಾದಿಗಳ ಅನಗತ್ಯ ಗೊಂದಲ ಮೂಡಿಸುತ್ತಿದ್ದಾರೆ. ಪಕ್ಷದ ಯುವ ಘಟಕ ಯೋಜನೆ ಪರವಾಗಿ ಹೋರಾಟ ರೂಪಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಯೋಜನೆ ಉಪಯೋಗ ಕುರಿತು ಜನರಿಗೆ ಮಾಹಿತಿ ನೀಡಿ ಎಂದರು.

ನಗರ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಬಾಬು ಮಾತನಾಡಿ, ನಗರಸಭೆ ಕಳೆದ ಚುನಾವಣೆಯಲ್ಲಿ ನನ್ನ ವಾರ್ಡ್‌ನಲ್ಲೇ ಮತಗಳ್ಳತನ ನಡೆದಿದೆ. ಬಿಜೆಪಿ ನಗರ ಘಟಕದ ಅಧ್ಯಕ್ಷ ಗಣೇಶ್ ಪ್ರಸಾದ್ ತಮ್ಮ ಕುಟುಂಬದವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದರು. ಜತೆಗೆ 50ಕ್ಕೂ ಹೆಚ್ಚು ಬೇರೆ ಬೇರೆ ವಾರ್ಡ್ ಮತದಾರರನ್ನು ಪಟ್ಟಿಯಲ್ಲಿ ಸೇರಿಸಿದ್ದನ್ನು ನಾವು ಪತ್ತೆಹಚ್ಚಿದ್ದೇವೆ. ಇಂತಹ ಪ್ರಕರಣಗಳು ಗೆಲುವಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮತಗಳ್ಳತನ ವಿರುದ್ಧ ಜಾಗೃತಿ ಅಗತ್ಯ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಮುಖರಾದ ಮಧುಮಾಲತಿ, ಗಣಪತಿ ಮಂಡಗಳಲೆ, ಉಷಾ, ಲಲಿತಮ್ಮ, ಸರಸ್ವತಿ ನಾಗರಾಜ್, ಕೆ.ಹೊಳೆಯಪ್ಪ, ಸದ್ದಾಂ, ಡಿ.ದಿನೇಶ್, ಮೈಕೆಲ್, ಸೈಯದ್ ಜಾಕೀರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net