ತಿರುಪತಿ ಲೋಕಸಭೆ ಉಪ ಚುನಾವಣೆ: ಕರ್ನಾಟಕದ ನಿವೃತ್ತ ಮುಖ್ಯ ಕಾರ್ಯದರ್ಶಿಗೆ ಬಿಜೆಪಿ ಟಿಕೆಟ್!

RATNA PRABHA
RATNA PRABHA
Published on

ನವದೆಹಲಿ: ಆಂಧ್ರ ಪ್ರದೇಶದ ತಿರುಪತಿ ಲೋಕಸಭೆ ಉಪ ಚುನಾವಣೆಗೆ ಸ್ಪರ್ಧಿಸಲು ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ ರತ್ನ ಪ್ರಭಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಇಂದು ಈ ವಿಷಯವನ್ನು ಪ್ರಕಟಿಸಿದ್ದಾರೆ.

ತಿರುಪತಿ ಎಸ್​ಸಿ ಮೀಸಲು ಕ್ಷೇತ್ರವಾಗಿದ್ದು ಸಂಸದರಾಗಿದ್ದ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರ ನಿಧನದಿಂದ ತೆರವಾಗಿತ್ತು. ರಾವ್ ಅವರು ಕರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದರು. ಅವರು ವೈಎಸ್​ಆರ್​ ಕಾಂಗ್ರೆಸ್​​ ಪ್ರತಿನಿಧಿಸಿದ್ದರು.

ಕರ್ನಾಟಕ ಕಲಬುರಗಿ ಮೂಲದ ಕೆ ರತ್ನಾ ಪ್ರಭಾ ಅವರು ಈ ಚುನಾವಣೆಯಲ್ಲಿ ವೈಎಸ್​ಆರ್​ ಕಾಂಗ್ರೆಸ್​ನ ಡಾ ಗುರುಮೂರ್ತಿ ಹಾಗೂ ಟಿಡಿಪಿಯ ಪಣಬಾಕಾ ಲಕ್ಷ್ಮಿ ಅವರನ್ನು ಎದುರಿಸಲಿದ್ದಾರೆ.

ತಿರುಪತಿ ಉಪ ಚುನಾವಣೆಗೆ ದಿವಂಗತ ದುರ್ಗಾ ಪ್ರಸಾದ್ ರಾವ್ ಅವರ ಮಗನಿಗೆ ಟಿಕೆಟ್ ನೀಡಬೇಕು ಎಂಬ ಒತ್ತಡ ಇತ್ತು. ಆದರೆ, ರಾವ್ ಅವರ ಮಗ ಬಲ್ಲಿ ಕಲ್ಯಾಣ ಚಕ್ರವರ್ತಿ ಅವರಿಗೆ ಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ನೀಡಿದ್ದಾರೆ. ಇನ್ನು ಗುರುಮೂರ್ತಿ ಅವರು ಖ್ಯಾತ ಪಿಜಿಯೋಥೆರಪಿಸ್ಟ್​ ಆಗಿದ್ದು, ಜಗನ್ಮೋಹನ್ ರೆಡ್ಡಿ ಅವರ ವೈದ್ಯಕೀಯ ಸಲಹೆಗಾರರೂ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net