

ಬೆಂಗಳೂರು: ಆರ್ಥಿಕವಾಗಿ ಕಾರ್ಯಸಾಧುವಲ್ಲದ ಬ್ರ್ಯಾಂಡ್ ಬೆಂಗಳೂರು ಯೋಜನೆ ರೂಪಿಸುವ ಕಾಂಗ್ರೆಸ್ ಸರ್ಕಾರ, ಕಸದಿಂದ ರಸ ತೆಗೆಯಲು ಯೋಚಿಸಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ಕಸದ ಮೇಲೆ ವಿಧಿಸುತ್ತಿರುವ ತೆರಿಗೆ ರೀತಿ ಬದಲಾವಣೆ, ಹೆಚ್ಚಳ ಪರಿಷ್ಕರಿಸಲು ಒತ್ತಾಯಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಡಳಿತಾಧಿಕಾರಿ ತುಷಾರ್ ಗಿರಿನಾಥ್‌ರಿಗೆ ಬುಧವಾರ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ದೇಶದಲ್ಲಿ ಕಸ ವಿಲೇವಾರಿಗೆ ಗರಿಷ್ಠ ತೆರಿಗೆ ಹಾಕಿದ ಪುಣ್ಯಾತ್ಮರು ಈ ಕಾಂಗ್ರೆಸ್ಸಿಗರು. ಹಾಲಿನಿಂದ ಆಲ್ಕೋಹಾಲ್ ವರೆಗೆ ದುಬಾರಿ ದರ ಏರಿಸಲಾಗಿದೆ. ಗ್ಯಾರಂಟಿ ಸರ್ಕಾರಕ್ಕೆ ಜನರು ಶಾಪ ಹಾಕುವಂತಾಗಿದೆ ಎಂದು ಟೀಕಿಸಿದರು.
ಕಸದ ಸೆಸ್ 240 ಕೋಟಿ ರೂ ಸಂಗ್ರಹವಾಗುತ್ತದೆ. ಕಸದ ನಿರ್ವಹಣೆಗೆ 145 ಕೋಟಿಗೆ ಟೆಂಡರ್ ಆಗಿದೆ. ಬಳಕೆದಾರರ ಶುಲ್ಕ ಸಂಗ್ರಹಿಸಿದರೆ 500ರಿಂದ 600 ಕೋಟಿ ಲಭಿಸಲಿದೆ ಎಂದರು.
ಇತರ ರಾಜ್ಯಗಳಲ್ಲಿ ಒಂದೋ ಸೆಸ್ ಇಲ್ಲವೇ ಬಳಕೆದಾರರ ಶುಲ್ಕ ಸಂಗ್ರಹಿಸುತ್ತಾರೆ. ಇಲ್ಲಿ ಎರಡನ್ನೂ ಸಂಗ್ರಹಿಸುತ್ತಾರೆ. ಇದರಿಂದ ಬಾಡಿಗೆ ಹೆಚ್ಚಾಗುತ್ತದೆ. ಬಾಡಿಗೆದಾರರಿಗೂ ಮನೆ ಮಾಲೀಕರಿಗೂ ಜಗಳ ಶುರುವಾಗುತ್ತದೆ ಎಂದು ವಿವರಿಸಿದರು.
ಹಿಂದೆ ನಮ್ಮ ಸರ್ಕಾರ ಇದ್ದಾಗ ಸಂಗ್ರಹಿಸಿದ ಕಸಕ್ಕೆ ಕೆಜಿ ಲೆಕ್ಕದಲ್ಲಿ ಸೆಸ್ ಸಂಗ್ರಹಿಸುತ್ತಿದ್ದೆವು. ಈಗ ನಿವೇಶನದ ಚದರಡಿ ಲೆಕ್ಕದಲ್ಲಿ ಶುಲ್ಕ ಪಡೆಯುತ್ತಾರೆ. ಗ್ಯಾರಂಟಿಗೆ ಹಣ ಹೊಂದಿಸಲು ಹೀಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬೆಂಗಳೂರಿನ ಶಾಸಕರ ಸಭೆ ಕರೆದು ತೆರಿಗೆ ದರ ಹೆಚ್ಚಳಕ್ಕೆ ಕಾರಣ ಏನು? ಎಷ್ಟು ದರ ಏರಿಸಿದ್ದೀರಿ ಎಂಬ ಕುರಿತು ವಿವರವನ್ನು ಕೊಟ್ಟ ಬಳಿಕಅನುಷ್ಠಾನಕ್ಕೆ ತರಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು.
ನಿಯೋಗದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಶಾಸಕರಾದ ಕೆ. ಗೋಪಾಲಯ್ಯ, ಎಸ್.ರಘು, ಎಸ್. ಮುನಿರಾಜು, ಎಲ್.ಎ. ರವಿಸುಬ್ರಮಣ್ಯ, ಪದಾಧಿಕಾರಿಗಳು ಇದ್ದರು.