

ಬೆಂಗಳೂರು: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ವರ್ಷ ಬಾಕಿ ಇರುವಂತೆ ಮತಕಹಳೆ ಮೊಳಗಿಸಿರುವ ಬಿಜೆಪಿ, ಕಾಂಗ್ರೆಸ್ ವರಿಷ್ಠರು ತಮ್ಮ ಪಕ್ಷಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಒಂದೇ ಸಮಯದಲ್ಲಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಕರ್ನಾಟಕದ ಕದನಕಣ ಗುರುವಾರ ಅಧಿಕೃತವಾಗಿ ಚುನಾವಣೆಗೆ ತೆರೆದುಕೊಳ್ಳಲಿದೆ. ಬಿಜೆಪಿಯ ಬಿ.ವೈ.ವಿಜಯೇಂದ್ರ ಶ್ರೀ ಸಿದ್ಧಗಂಗಾ ಸ್ವಾಮೀಜಿಯವರ ಜಯಂತಿಯ ನೇತೃತ್ವ ವಹಿಸಿರುವುದು ಗಮನ ಸೆಳೆದಿದೆ. ಇದೇ ಸಂದರ್ಭ ದಲ್ಲಿ ಗೃಹ ಸಚಿವ ಅಮಿತ್ ಷಾ ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಧ್ಯಾಹ್ನ ಬಂದಿಳಿಯುತ್ತಿರುವುದು ವಿಶೇಷ. ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ, ಸರ್ಕಾರದಿಂದ ಆಗಬೇಕಾದ ತೀರ್ವನಗಳನ್ನು ಷಾ ಮುಂದಿಡಲು ರಾಜ್ಯ ನಾಯಕರು ಸಿದ್ಧತೆ ನಡೆಸಿದ್ದಾರೆ.
ಕೋರ್ಕಮಿಟಿ ಸಭೆಗೆ ನಿರ್ದಿಷ್ಟ ವಿಷಯಗಳನ್ನು ಇಟ್ಟುಕೊಂಡಿಲ್ಲ. ಅಮಿತ್ ಷಾ ಅಣತಿಯಂತೆ ಸಭೆ ನಡೆಯುವುದು. ಸಭೆಯಲ್ಲಿ ಚುನಾವಣೆ ವಾತಾವರಣ, ಚುನಾವಣೆ ಮೇಲೆ ಪರಿಣಾಮ ಬೀರುವ ಅಂಶಗಳ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸದ್ಯಕ್ಕೆ ಬಿ.ಎಸ್.ಯಡಿಯೂರಪ್ಪ ಜತೆಗೆ ಅಮಿತ್ ಷಾ ಮುಖಾಮುಖಿ ಸಭೆ ನಡೆಸುವರೆಂದು ಹೇಳಲಾಗುತ್ತಿದೆ, ಇದನ್ನು ಹೊರತುಪಡಿಸಿ ಅನೌಪಚಾರಿಕ ಸಭೆ ಬಗ್ಗೆ ಸ್ಪಷ್ಟತೆಗಳಿಲ್ಲ.
ಕಾಂಗ್ರೆಸ್ ತಯಾರಿ: ಬಿಜೆಪಿ, ಸರ್ಕಾರದ ವಿರುದ್ಧ ಮೇಕೆದಾಟು ಪಾದಯಾತ್ರೆ ಸೇರಿ ಇತ್ತೀಚಿನ ಹೋರಾಟದ ವರದಿಯನ್ನು ಕೆಪಿಸಿಸಿ ಸಿದ್ಧಪಡಿಸಿಕೊಂಡಿದ್ದು ರಾಹುಲ್ ಮುಂದಿಡಲಾಗುತ್ತದೆ. ಇದನ್ನು ಹೊರತು ಪಡಿಸಿ ಸದಸ್ಯತ್ವ ಅಭಿಯಾನದ ವರದಿ, ಮುಂಬರುವ ಚುನಾವಣೆಯ ಪೂರ್ವ ತಯಾರಿ, ಪಕ್ಷಾಂತರ ಮಾಡುವವರ ಬಗ್ಗೆ, ಮುಂದೆ ಕೈಗೊಳ್ಳಲಾಗುವ ಹೋರಾಟದ ಬಗ್ಗೆ ಯೋಜನೆಯನ್ನು ರಾಹುಲ್ ಗಮನಕ್ಕೆ ತರಲಾಗುತ್ತದೆ.