ಚುನಾವಣೆ ಸರ್ವೇಕಾಲ: ಜನಮತ ಅರಿಯಲು ಬಿಜೆಪಿ, ಕಾಂಗ್ರೆಸ್ ಪ್ರತ್ಯೇಕ ರಣತಂತ್ರ

Front
Published on
ಮುಂದಿನ ವಿಧಾನಸಭಾ ಚುನಾವಣೆ ಕಹಳೆ ಮೊಳಗಿಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಜನಾಭಿಪ್ರಾಯ ಪಡೆಯಲು ಪ್ರತ್ಯೇಕವಾಗಿ ಸರ್ವೆ ಆರಂಭಿಸಿದ್ದಾರೆ. ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಬಿಜೆಪಿಯು ಪಕ್ಷದ ರಾಜ್ಯ ಮುಖಂಡರಿಂದಲೂ ಅಭಿಪ್ರಾಯ ಪಡೆಯುತ್ತಿದೆ. ಕಮಲ ಪಕ್ಷದ ವರಿಷ್ಠರ ಈ ನಡೆ ಸರ್ಕಾರ ಹಾಗೂ ಪಕ್ಷದಲ್ಲಿ ನಡೆಯಬಹುದಾದ ಮುಂದಿನ ಬೆಳವಣಿಗೆಯ ಮುನ್ಸೂಚನೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲೇಬೇಕೆಂದು ತಂತ್ರ ಆರಂಭಿಸಿರುವ ಬಿಜೆಪಿ ಚುನಾವಣಾ ಸಿದ್ಧತೆಗೆ ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ಮಾಡಬೇಕಾಗಿರುವ ಬದಲಾವಣೆಗಳ ಬಗ್ಗೆ ರಾಜ್ಯ ಮುಖಂಡರಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.

ಇತ್ತೀಚಿಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೋರ್ ಕಮಿಟಿ ಸದಸ್ಯರಿಂದ ವೈಯಕ್ತಿಕವಾಗಿ ಮಾಹಿತಿ ಕೋರಿದ್ದರು. ಸಭೆಯಲ್ಲಿ ಮುಕ್ತವಾಗಿ ಮಾತನಾಡಲು ಸಾಧ್ಯವಿಲ್ಲದವರು ದೆಹಲಿಗೂ ಬಂದು ಚರ್ಚೆ ಮಾಡಬಹುದೆಂದು ಆಹ್ವಾನ ನೀಡಿದ್ದರು. ಆದರೆ ಈ ರೀತಿ ಆಹ್ವಾನ ನೀಡುವುದಕ್ಕೆ ಮುನ್ನವೇ ಅವರು ಆಯ್ದ ಮುಖಂಡರನ್ನು ದೆಹಲಿಗೆ ಕರೆಸಿಕೊಂಡು ವಿವರ ಸಂಗ್ರಹ ಮಾಡುತ್ತಿದ್ದರು. ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರಿಗೂ ಆಹ್ವಾನ ನೀಡಿದ್ದರು.

ಅಭಿಪ್ರಾಯ ಏಕೆ?: ಅಮಿತ್ ಷಾ ಯಾವತ್ತೂ ರಾಜ್ಯ ನಾಯಕರಿಗಿಂತ ತಮ್ಮದೇ ಮೂಲಗಳ ಮಾಹಿತಿ ಇಟ್ಟುಕೊಂಡಿರುತ್ತಾರೆ. ಲಭ್ಯ ಮಾಹಿತಿ ಪ್ರಕಾರ ರಾಜ್ಯದಿಂದ ಪ್ರತಿ ನಿತ್ಯ ಐದಕ್ಕೂ ಹೆಚ್ಚು ಜನರಿಂದ ವಿವರ ಸಂಗ್ರಹಿಸುತ್ತಿರುತ್ತಾರೆ. ಆಗಾಗ ಇಲ್ಲಿನ ಹತ್ತಕ್ಕೂ ಹೆಚ್ಚು ಜನರ ಜತೆ ದೂರವಾಣಿ ಮೂಲಕ ರ್ಚಚಿಸಿ ಸರ್ಕಾರ ಹಾಗೂ ಪಕ್ಷದ ಪ್ರತಿಯೊಂದು ಬೆಳವಣಿಗೆಯನ್ನೂ ಗಮನಿಸುತ್ತಿರುತ್ತಾರೆ. ಆದರೂ ಆಯ್ದ ಮುಖಂಡರಿಂದ ಇನ್ನಷ್ಟು ವಿಸõತ ಮಾಹಿತಿ ಸಂಗ್ರಹಕ್ಕೆ ಅವರು ಮುಂದಾಗಿರುವುದು ಪಕ್ಷದಲ್ಲಿ ನಾನಾ ಚರ್ಚೆಗೆ ವೇದಿಕೆ ಕಲ್ಪಿಸಿದೆ.

ಇನ್ನೊಂದು ವರ್ಷಕ್ಕೆ ಚುನಾವಣೆಗೆ ಹೋಗಬೇಕಾಗಿದೆ. ಈ ವರ್ಷ ಅತ್ಯಂತ ಮುಖ್ಯವಾಗಿದೆ. ಪಕ್ಷ ಹಾಗೂ ಸರ್ಕಾರ ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕಾಗಿದೆ. ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಷಾ ಅವರೇ ಸೂಕ್ಷ್ಮವಾಗಿ ಹೇಳಿರುವಂತೆ ಅವರಿಗೆ ಸರ್ಕಾರ ಹಾಗೂ ಪಕ್ಷದ ಕಾರ್ಯವೈಖರಿ ಸಮಾಧಾನ ತಂದಿಲ್ಲ. ಇನ್ನಷ್ಟು ಚುರುಕು ಮೂಡಿಸುವ ಕಾರ್ಯ ಮಾಡಬೇಕಾಗಿದೆ. ಆದ್ದರಿಂದಲೇ ಅವರು ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಹೊಸಪೇಟೆಯಲ್ಲಿ ನಡೆಯಲಿರುವ ರಾಜ್ಯ ಕಾರ್ಯಕಾರಿಣಿಯ ನಂತರ ಕೆಲವೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಅದರ ಭಾಗವಾಗಿ ಅಭಿಪ್ರಾಯ ಸಂಗ್ರಹ ನಡೆದಿದೆ ಎಂದು ತಿಳಿದು ಬಂದಿದೆ.

ಏನೆಲ್ಲ ಮಾಹಿತಿ ಸಂಗ್ರಹ?

*ಸರ್ಕಾರದ ಕಾರ್ಯವೈಖರಿ ಹೇಗಿದೆ

*ಶಾಸಕರು, ಕಾರ್ಯಕರ್ತರಿಗೆ ಸಿಎಂ ಮತ್ತು ಸಚಿವರ ಸ್ಪಂದನೆ

*ಅಭಿವೃದ್ಧಿ ಕಾರ್ಯಗಳು ಹೇಗೆ ನಡೆದಿವೆ

*ಸಿಎಂ ಹಾಗೂ ಸಚಿವರ ಜಿಲ್ಲಾ ಪ್ರವಾಸ ಹೇಗಿದೆ

*ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಕೆಳಹಂತಕ್ಕೆ ತಲುಪಿಸುವ ಕಾರ್ಯ

*ಪಕ್ಷದ ಸಂಘಟನೆ ಏನಾಗುತ್ತಿದೆ?

*ರಾಜ್ಯಾಧ್ಯಕ್ಷರು ಹೇಗೆ ಪ್ರವಾಸ ಮಾಡುತ್ತಿದ್ದಾರೆ?

*ಚುನಾವಣೆಗೆ ಸಿದ್ಧತೆ ಏನೇನು ಆಗಿವೆ?

*ಅಭ್ಯರ್ಥಿಗಳನ್ನು ಗುರುತಿಸುವ ಕಾರ್ಯ ಹೇಗಿದೆ?

*ಹಾಲಿ ಶಾಸಕರು ಕ್ಷೇತ್ರದೊಂದಿಗೆ ಹೇಗೆ ಸಂಬಂಧ ಹೊಂದಿದ್ದಾರೆ?

* ಚುನಾವಣೆ ನಾಯಕತ್ವ ಯಾರದ್ದಿರಬೇಕು?

* ಬೇರೆ ಪಕ್ಷದಿಂದ ಬರುವವರ ಸಂಖ್ಯೆ ಎಷ್ಟಿದೆ? ಅಗತ್ಯ ಏನಿದೆ?

* ಕಾಂಗ್ರೆಸ್ ಎಲ್ಲಿ ಬಲವಾಗಿದೆ? ಅದನ್ನು ತಗ್ಗಿಸಲು ಏನೇನು ಮಾಡಬೇಕು?

* ಹಳೆ ಮೈಸೂರು ಭಾಗದಲ್ಲಿ ಪಕ್ಷ ಪ್ರಬಲ ಮಾಡಲು ಯಾವ ತಂತ್ರ ರೂಪಿಸಬೇಕು

ಉದ್ದೇಶ ಅಸ್ಪಷ್ಟ: ಬಿಜೆಪಿ ಹೈಕಮಾಂಡ್ ರಾಜ್ಯದ ಆಯ್ದ ಮುಖಂಡರನ್ನು ಆಹ್ವಾನಿಸಿ ಅಭಿಪ್ರಾಯ ಸಂಗ್ರಹಿಸುತ್ತಿರುವುದರ ಹಿಂದಿನ ಉದ್ದೇಶವೇನು ಎಂಬುದು ರಾಜ್ಯ ಮುಖಂಡರಿಗೆ ಸ್ಪಷ್ಟವಾಗುತ್ತಿಲ್ಲ. ಸಿಎಂಗೆ ಸಿಗದ ಅಮಿತ್ ಷಾ ಭೇಟಿ ಮಾಜಿ ಸಿಎಂ ಜಗದೀಶ ಶೆಟ್ಟರ್​ಗೆ ಸುಲಭವಾಗಿ ಸಿಕ್ಕಿದೆ. ಶಾಸಕ ಅರವಿಂದ ಬೆಲ್ಲದ ಸಹ ಭೇಟಿ ಮಾಡಿದ್ದಾರೆ. ಹೀಗಾಗಿ ಏನು ನಡೆಯುತ್ತಿದೆಯೆಂಬ ಬಗ್ಗೆ ಸರ್ಕಾರದಲ್ಲಿರುವವರು ಹಾಗೂ ಶಾಸಕರು ತಲೆ ಕೆಡಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳುತ್ತವೆ.

ಲಭ್ಯ ಮಾಹಿತಿ ಏನೇನು?

  • ಶಾಸಕರು, ಕಾರ್ಯಕರ್ತರಿಗೆ ಸ್ಪಂದನೆ ಸಿಗುತ್ತಿಲ್ಲ
  • ಸರ್ಕಾರದಲ್ಲಿ ಶಾಸಕರನ್ನು, ಪಕ್ಷದಲ್ಲಿ ಕಾರ್ಯಕರ್ತರನ್ನು ಕೇಳುವವರಿಲ್ಲ
  • ಅಧ್ಯಕ್ಷರು ಮಂಗಳೂರಿಗೆ ಸೀಮಿತರಾಗಿದ್ದಾರೆ
  • ಸಿಎಂ ಕೆಲವರ ಹಿಡಿತದಲ್ಲಿದ್ದಾರೆ
  • ಕಡತ ವಿಲೇವಾರಿ, ಅನುದಾನ ವಿಳಂಬ

9 ಜನರ ಮಾಹಿತಿ: ಬಿಜೆಪಿ ಉನ್ನತ ಮೂಲಗಳ ಪ್ರಕಾರ ಈವರೆಗೆ 9 ಜನರನ್ನು ದೆಹಲಿಗೆ ಕರೆಸಿಕೊಂಡು ಮಾಹಿತಿ ಸಂಗ್ರಹಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಮಾಜಿ ಸಿಎಂ ಜಗದೀಶ ಶೆಟ್ಟರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಉಪಾಧ್ಯಕ್ಷ ನಿರ್ಮಲ್​ಕುಮಾರ್ ಸುರಾನ ಹಾಗೂ ಇತರರು ಇದ್ದಾರೆ. ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ದೆಹಲಿ ತಂತ್ರಜ್ಞರಿಂದ ಸಮೀಕ್ಷೆ: ಮುಂದಿನ ಚುನಾವಣೆಯಲ್ಲಿ ಅಧಿಕಾರ ಹಿಡಿಯಲೇಬೇಕೆಂದು ಕಾಂಗ್ರೆಸ್, ಬಿಜೆಪಿ ಹೈಕಮಾಂಡ್​ಗಳೆರಡೂ ಖಾಸಗಿ ಸಂಸ್ಥೆಗಳ ಮೂಲಕ ಸಮೀಕ್ಷೆ ಆರಂಭಿಸಿವೆ. ಬಿಜೆಪಿ ಗುಜರಾತ್ ಮೂಲದ ದೆಹಲಿಯಲ್ಲಿ ಕಚೇರಿ ಹೊಂದಿರುವ 2 ಸಂಸ್ಥೆಗಳಿಂದ ಪ್ರತ್ಯೇಕ ಸಮೀಕ್ಷೆ ನಡೆಸಿದೆ. ಕಾಂಗ್ರೆಸ್ ದೆಹಲಿ ಮೂಲಕ ಚುನಾವಣೆ ತಂತ್ರಗಳಲ್ಲಿ ಹೆಸರು ಮಾಡಿರುವ ವ್ಯಕ್ತಿಗಳಿರುವ ಸಂಸ್ಥೆಯೊಂದರ ಮೂಲಕ ಸಮೀಕ್ಷೆ ಆರಂಭಿಸಿದೆ. ಎರಡೂ ಪಕ್ಷದ ಪರ ಸಮೀಕ್ಷೆ ನಡೆಸಿರುವ ಸಂಸ್ಥೆಗಳು ರಾಜ್ಯದ ಯಾವುದೇ ಮುಖಂಡರ ಸಂಪರ್ಕದಲ್ಲಿಲ್ಲ. ರಾಜ್ಯ ಮುಖಂಡರಿಗೆ ಮಾಹಿತಿಯೂ ಇಲ್ಲ. ತಮ್ಮದೇ ಮೂಲಗಳಿಂದ ಸಮೀಕ್ಷೆಗೆ ಚಾಲನೆ ನೀಡಿವೆ. ಕಾಂಗ್ರೆಸ್ ಪರವಾಗಿ ಸಮೀಕ್ಷೆ ನಡೆಸಿರುವ ಸಂಸ್ಥೆ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಕಚೇರಿ ಬಾಡಿಗೆಗೆ ಪಡೆದಿದೆ ಎಂಬ ಮಾಹಿತಿ ಇದೆ.

ರಾಜ್ಯಾದ್ಯಂತ ಸಮಿಕ್ಷೆಗಾಗಿ 300 ಜನರ ತಂಡ ನೇಮಕ ಮಾಡಿಕೊಂಡಿದೆ. ಸಮೀಕ್ಷೆ ನಡೆಸುವವರು ಬೆಂಗಳೂರಿಗೆ ಬರಬೇಕಾಗಿಲ್ಲ. ಪ್ರತಿನಿತ್ಯ ಅಲ್ಲಿಂದಲೇ ಇಮೇಲ್ ಮೂಲಕ ಮಾಹಿತಿ ರವಾನಿಸುವ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರವಾರು ಬರುವ ಮಾಹಿತಿಯನ್ನು ಬೆಂಗಳೂರಿನಲ್ಲಿರುವ ತಜ್ಞರು ವಿಶ್ಲೇಷಣೆಗೆ ಒಳಪಡಿಸಲಿದ್ದಾರೆ.

ಪ್ರಮುಖ ಅಂಶಗಳು

  • ಕ್ಷೇತ್ರದಲ್ಲಿ ಪಕ್ಷಕ್ಕೆ ಇರುವ ಪ್ಲಸ್ ಮತ್ತು ಮೈನಸ್ ಅಂಶಗಳೇನು
  • ಹಾಲಿ ಶಾಸಕರ ಬಗ್ಗೆ ಅಭಿಪ್ರಾಯ ಏನಿದೆ?
  • ಪಕ್ಷ ಸೋತಿರುವ ಕಡೆ ಅಭ್ಯರ್ಥಿ ಯಾರಾಗಬೇಕು?
  • ಪಕ್ಷಾಂತರ ಆಗುವ ಮುಖಂಡರು ಯಾರು?
  • ಸ್ಥಳೀಯವಾಗಿ ಕ್ಷೇತ್ರದ ಸಮಸ್ಯೆಗಳೇನು? ಅಭಿವೃದ್ಧಿ ಹೇಗೆ ಆಗುತ್ತಿದೆ?
  • ತಮ್ಮ ಸರ್ಕಾರದ ಸಾಧನೆಗಳು ಜನರಿಗೆ ತಲುಪಿವೆಯೇ?
  • ಜನರನ್ನು ಪಕ್ಷದತ್ತ ಸೆಳೆಯಲು ಏನೇನು ಮಾಡಬೇಕು?
  • ಯಾವ ನಾಯಕರ ಬಗ್ಗೆ ಕ್ಷೇತ್ರದ ಜನರಿಗೆ ವಿಶ್ವಾಸವಿದೆ?ಬೆಲೆ ಏರಿಕೆ ಪರಿಣಾಮ ಬೀರುತ್ತದೆಯೇ?
  • ರೈತರ ವಿಚಾರಗಳು ಎಷ್ಟರ ಮಟ್ಟಿಗೆ ಚರ್ಚೆಯಲ್ಲಿವೆ?
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net