

ಬೆಂಗಳೂರು: ಮೂರು ಕ್ಷೇತ್ರಗಳ ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಪ್ರಚಾರ ಉಸ್ತುವಾರಿಗಳ ನೇಮಕ ಮಾಡಿದೆ. ಅಲ್ಲದೇ, ಪ್ರಚಾರದ ಮೇಲೆ ಕಣ್ಗಾವಲು ವ್ಯವಸ್ಥೆಯನ್ನೂ ಮಾಡಿದೆ. ಅದೇ ರೀತಿ 40 ತಾರಾ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಪರ ಅಲೆ ಎಬ್ಬಿಸಲು ತಂತ್ರ ಹೆಣೆದಿದೆ.
ಕೈ ಜವಾಬ್ದಾರಿ ಹಂಚಿಕೆ: ಶಿಗ್ಗಾಂವಿಗೆ ಸಚಿವರಾದ ಈಶ್ವರ ಖಂಡ್ರೆ, ಎಚ್.ಕೆ. ಪಾಟೀಲ್, ಜಮೀರ್, ಹೆಬ್ಬಾಳ್ಕರ್, ಆರ್.ಬಿ.ತಿಮ್ಮಾಪುರ, ಎಸ್.ಎಸ್.ಮಲ್ಲಿಕಾರ್ಜುನ, ಬೈರತಿ ಸುರೇಶ್, ಶಿವರಾಜ್ ತಂಗಡಗಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಈ ಸಚಿವರೊಂದಿಗೆ 29 ಪ್ರಮುಖ ಸದಸ್ಯರ ತಂಡ ರಚನೆ ಮಾಡಲಾಗಿದೆ.
ಸಂಡೂರು ಕ್ಷೇತ್ರಕ್ಕೆ ಸಚಿವರಾದ ಕೆ.ಎಚ್.ಮುನಿಯಪ್ಪ, ಕೆ.ಜೆ. ಜಾರ್ಜ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಸೇರಿ ಶಾಸಕರ ತಂಡ ರಚನೆ ಮಾಡಿದ್ದು, 19 ಪ್ರಮುಖ ಸದಸ್ಯರು ತಂಡದಲ್ಲಿದ್ದಾರೆ. ಚನ್ನಪಟ್ಟಣ ಕ್ಷೇತ್ರಕ್ಕೆ ಸಚಿವರಾದ ರಾಮಲಿಂಗಾರೆಡ್ಡಿ, ಚಲುವರಾಯಸ್ವಾಮಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಒಟ್ಟಾರೆ ರಾಜ್ಯದ 224 ವಿಧಾನ ಸಭಾಕ್ಷೇತ್ರದ ಪ್ರಮುಖ ನಾಯಕರಿಗೂ ಹೊಣೆ ನಿಗದಿ ಮಾಡಲಾಗಿದೆ.
ಯಾರಿಗೆಲ್ಲ ಜವಾಬ್ದಾರಿ ನೀಡಲಾಗಿದೆಯೋ ಅವರೆಲ್ಲರೂ ಕೂಡಲೇ ನಿಯೋಜಿತ ಕ್ಷೇತ್ರ ಅಥವಾ ಸ್ಥಳಕ್ಕೆ ಭೇಟಿ ಕೊಡಬೇಕು. ಸ್ಥಳೀಯ ಮುಖಂಡರನ್ನು ಸಂರ್ಪಸಿ ವ್ಯವಸ್ಥಿತ ರೀತಿ ಪ್ರಚಾರಕ್ಕೆ ಅಣಿಮಾಡಬೇಕು. ಪ್ರಚಾರ ಅಂತ್ಯಗೊಳ್ಳುವ ದಿನದವರೆಗೂ ಆ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸ್ತವ್ಯ ಮಾಡಬೇಕೆಂದು ಡಿಸಿಎಂ ನಿರ್ದೇಶನ ನೀಡಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳುವ ಪ್ರಚಾರಕ್ಕೆ ಸಂಬಂಧಪಟ್ಟ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯಲು ಕೆಪಿಸಿಸಿಯಿಂದ ಕ್ಯಾಂಪ್ ಆಫೀಸ್ ಸ್ಥಾಪಿಸಲಾಗಿರುತ್ತದೆ. ಈ ಕಚೇರಿಯಲ್ಲಿ ಕೆಪಿಸಿಸಿ ಉಸ್ತುವಾರಿ ಪದಾಧಿಕಾರಿಗಳೊಂದಿಗೆ ವಾರ್ ರೂಂ ಸದಸ್ಯರು, ಕಂಟ್ರೋಲ್ ರೂಂ ಸದಸ್ಯರು, ಕಾನೂನು ಘಟಕದ ಸದಸ್ಯರು, ಸಾಮಾಜಿಕ ಜಾಲತಾಣದ ತಂಡ ಕಾರ್ಯನಿರ್ವಹಿಸಲಿದೆ. ಅದೇ ರೀತಿ ಚುನಾವಣೆ ಜವಾಬ್ದಾರಿ ಹೊತ್ತವರು ಪ್ರಚಾರ ಕಾರ್ಯಗಳ ವಿವರಗಳನ್ನು ಪ್ರತಿ ನಿತ್ಯ ಕ್ಯಾಂಪ್ ಹಾಗೂ ಬೆಂಗಳೂರು ಕಚೇರಿಗೆ ವರದಿ ನೀಡಬೇಕಾಗುತ್ತದೆ ಎಂದಿದ್ದಾರೆ.
ಅಳೆದು-ತೂಗಿ ಪ್ರಚಾರಕರ ಪಟ್ಟಿ ತಯಾರಿ: ಮೂರೂ ಕ್ಷೇತ್ರಗಳಿಗೆ ಚುನಾವಣಾ ಕಾರ್ಯತಂತ್ರವನ್ನು ಬಿಜೆಪಿ-ಜೆಡಿಎಸ್ ಒಂದಾಗಿ ಹೆಣೆದಿರುವ ಮಧ್ಯೆ ಪ್ರಚಾರದ ರೂಪರೇಷೆಯನ್ನು ಕಮಲ ಪಡೆ ಅಂತಿಮಗೊಳಿಸಿವೆ. ಪೂರಕವಾಗಿ ಮೂರೂ ಕ್ಷೇತ್ರಗಳಿಗೆ 40 ತಾರಾ ಪ್ರಚಾರಕರ ಪಟ್ಟಿಯನ್ನು ರಾಷ್ಟ್ರೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಆಯೋಗಕ್ಕೆ ಸಲ್ಲಿಸಿರುವ 40 ತಾರಾ ಪ್ರಚಾರಕರ ಪಟ್ಟಿಯಲ್ಲಿ ‘ಅತೃಪ್ತರ ಗುಂಪು’ ಎಂದು ಗುರುತಿಸಿಕೊಂಡ ಎಲ್ಲ ನಾಯಕರೂ ಅವಕಾಶ ವಂಚಿತರಾಗಿರುವುದು ಗಮನಾರ್ಹ. ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಪ್ರತಾಪ್ ಸಿಂಹ, ಕುಮಾರ ಬಂಗಾರಪ್ಪ ಅವರಿಗೆ ಸ್ಥಾನ ನೀಡದೆ ವರಿಷ್ಠ ಮಂಡಳಿ ಚುರುಕು ಮುಟ್ಟಿಸಿದೆ ಎಂದು ಮೂಲಗಳು ವಿಶ್ಲೇಷಿಸಿವೆ. ಶಾಸಕ ಜಿ. ಜನಾರ್ದನರೆಡ್ಡಿ ಮತ್ತವರ ಸೋದರ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ, ಇವರಿಬ್ಬರ ಮಿತ್ರ ಮಾಜಿ ಸಚಿವ ಬಿ.ಶ್ರೀರಾಮುಲು ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಮೂರು ಕ್ಷೇತ್ರಗಳಲ್ಲಿ ನಿರ್ಣಾಯಕ ಸಮುದಾಯ ಗಳು, ಪ್ರಭಾವ ಇನ್ನಿತರ ಅಂಶಗಳನ್ನು ಅವಲೋಕಿಸಿ ಪಟ್ಟಿ ತಯಾರಿಸಿದಂತಿದ್ದು, 40 ಜನ ಪ್ರಚಾರಕರ ಪಟ್ಟಿಯಿಂದ ಗೊತ್ತಾಗುತ್ತದೆ.
ಯಾವ ಕ್ಷೇತ್ರಕ್ಕೆ ಎಷ್ಟು?: ಶಿಗ್ಗಾಂವಿ ಕ್ಷೇತ್ರದಲ್ಲಿ ಸಚಿವ, ಸಂಸದ, ರಾಜ್ಯಸಭಾ ಸದಸ್ಯರು, ಶಾಸಕ, ಪರಿಷತ್ ಸದಸ್ಯ, ಮಾಜಿ ಶಾಸಕರು, ಕೆಪಿಸಿಸಿ ಪದಾಧಿಕಾರಿಗಳನ್ನು ಒಳಗೊಂಡ 182 ತಂಡಕ್ಕೆ ಜವಾಬ್ದಾರಿ ನೀಡಲಾಗಿದೆ. ಸಂಡೂರಿ ನಲ್ಲಿ 148, ಚನ್ನಪಟ್ಟಣಕ್ಕೆ 316 ಮಂದಿಯನ್ನು ಬಳಸಿಕೊಳ್ಳಲಾಗುತ್ತದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಉಸ್ತು ವಾರಿ ಕಾರ್ಯತಂತ್ರದಲ್ಲಿ ವಿಶೇಷ ನಿಗಾ ವಹಿಸಿರುವುದು ಕಂಡುಬರುತ್ತದೆ. ಪ್ರತಿ ಗ್ರಾಪಂ ಮಟ್ಟಕ್ಕೂ ನಿರ್ದಿಷ್ಟವಾಗಿ 2-3 ಮಂದಿಗೆ ಹೊಣೆ ನೀಡಲಾಗಿದೆ.
ಯಾರೆಲ್ಲ ತಾರಾ ಪ್ರಚಾರಕರು?: ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಪಕ್ಷದ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಉಸ್ತುವಾರಿ ಡಾ.ರಾಧಮೋಹನ್ದಾಸ್ ಅಗರ್ವಾಲ್, ಸಹ ಉಸ್ತುವಾರಿ ಸುಧಾಕರ್ರೆಡ್ಡಿ, ಕೇಂದ್ರದ ಮೂವರು ಸಚಿವರು, ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಡಾ.ಸಿಎನ್.ಮಂಜುನಾಥ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದರು, ಹಾಲಿ-ಮಾಜಿ ಶಾಸಕರು, ರಾಜ್ಯಸಭಾ ಅಧ್ಯಕ್ಷ, ನಟ ಜಗ್ಗೇಶ್, ನಟಿಯರಾದ ತಾರಾ ಅನುರಾಧ, ಶ್ರುತಿ, ಪಕ್ಷದ ರಾಜ್ಯ ಪದಾಧಿಕಾರಿಗಳು ಉಪ ಚುನಾವಣೆಗೆ ತಾರಾ ಪ್ರಚಾರಕರಾಗಿದ್ದಾರೆ.
ಶುದ್ಧೀಕರಣ ಆರಂಭ: ಬಿಜೆಪಿಯಲ್ಲಿ ಅಡ್ಜಸ್ಟ್ಮೆಂಟ್ ರಾಜ ಕಾರಣ ಮಾಡುತ್ತಿದ್ದಾರೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿ, ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡಿಕೊಂಡು ಬರುತ್ತಿದ್ದವರನ್ನು ಒಬ್ಬೊಬ್ಬರಾಗಿ ಪಕ್ಷದಿಂದ ಹೊರಹಾಕಲಾಗುತ್ತಿದೆ. ಪಕ್ಷವನ್ನು ಶುದ್ಧೀಕರಣ ಮಾಡಲಾಗುತ್ತಿದೆ. ಇದು ಹಿರಿಯರ ಆಸೆಯೂ ಆಗಿತ್ತು. ಅವರ ಆಶಯದಂತೆ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಪದೇಪದೆ ವಾಗ್ದಾಳಿ ನಡೆಸುತ್ತಿರುವ ಬಗ್ಗೆ ಉತ್ತರಿಸಿ, ಅಸಮಾಧಾನವನ್ನು ಹೊರಹಾಕಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಬೇಕು. ಆ ನಿಟ್ಟಿನಲ್ಲಿ ಯೋಚಿಸುತ್ತಿದ್ದೇವೆ. ನಾನು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಮಾಡಲು ಸಾಕಷ್ಟು ಕೆಲಸ ಗಳಿವೆ. ಆ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇನೆ ಎಂದರು.
ರಾಜ್ಯದ ಇತರ 2 ಕ್ಷೇತ್ರಗಳ ಉಪ ಚುನಾವಣೆಗಳಿಗಿಂತ ಚನ್ನಪಟ್ಟಣ ಕ್ಷೇತ್ರವು ರಾಜ್ಯದ ಗಮನವನ್ನು ಸೆಳೆದಿದೆ. ಕಾಂಗ್ರೆಸ್ ನಾಯಕರು ನಮ್ಮ ಸಮುದಾಯದ ಬಗ್ಗೆ ಚರ್ಚೆ ಮಾಡಿದ್ದಾರೆ. ಅವರ ಎಲ್ಲ ಟೀಕೆ- ಟಿಪ್ಪಣಿಗಳನ್ನು ನೋಟ್ ಮಾಡಿಟ್ಟುಕೊಂಡಿದ್ದೇನೆ. ನ.13ರಂದು ಚುನಾವಣೆ ಮುಗಿದ ಬಳಿಕ ಹಾಗೂ ನ.23ರಂದು ಫಲಿತಾಂಶ ಪ್ರಕಟವಾದ ಬಳಿಕ ಎಲ್ಲದಕ್ಕೂ ಸಮಜಾಯಿಸಿ ಕೊಡುತ್ತೇನೆ.
| ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ