ರಾಜ್ಯ ಗೆಲ್ಲಲು ಬಿಜೆಪಿ-ಕಾಂಗ್ರೆಸ್ ನೀಲಿನಕ್ಷೆ

BJP Congress
Published on
ಯುಗಾದಿ ಹಬ್ಬಕ್ಕೂ ಮುನ್ನದಿನ ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಷಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಂಡು, ತೆರಳಿದ್ದಾರೆ. ಇಬ್ಬರು ನಾಯಕರ ರಾಜ್ಯ ಸಂಚಾರ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ಮೂಡಿಸಿದೆ. ಮುಖಂಡರ ಈ ಉತ್ಸಾಹ- ಉಲ್ಲಾಸವನ್ನು ಇನ್ನೂ ಒಂದು ವರ್ಷ ಉಳಿಸಿಕೊಳ್ಳುವುದೇ ಸವಾಲು. ಆ ನಿಟ್ಟಿನಲ್ಲಿ ಉಭಯ ಪಕ್ಷಗಳು ಹಲವು ಕಾರ್ಯಯೋಜನೆ ಹಾಗೂ ನೀಲಿನಕ್ಷೆ ಸಿದ್ಧಪಡಿಸಿವೆ. ಇದು ಮುಂದಿನ ಚುನಾವಣೆ ಗೆಲ್ಲುವ ಕಾರ್ಯತಂತ್ರವೆಂದೇ ಬಣ್ಣಿಸಲಾಗುತ್ತಿದೆ.

ಒಂದು ವರ್ಷದ ಕಮಲ ಯೋಜನೆ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಸ್ವಂತ ಶಕ್ತಿಯ ಮೇಲೆ ರಾಜ್ಯದಲ್ಲಿ ಅಧಿಕಾರ ಸೂತ್ರ ಹಿಡಿಯುವ ಶಪಥ ಮಾಡಿರುವ ಬಿಜೆಪಿ ಅದಕ್ಕಾಗಿ ಒಂದು ವರ್ಷದ ಕಾರ್ಯಯೋಜನೆಯ ನೀಲಿ ನಕ್ಷೆ ಸಿದ್ಧಪಡಿಸಿದ್ದು, ಏಪ್ರಿಲ್ ಮೂರನೇ ವಾರದಿಂದ ಎಲ್ಲ ಚಟುವಟಿಕೆಗಳಿಗೆ ಇನ್ನಷ್ಟು ವೇಗ ನೀಡಲಿದೆ. ರಾಜ್ಯದಲ್ಲಿ ಎರಡು ಬಾರಿ ಸರ್ಕಾರ ರಚನೆ ಮಾಡಿದ್ದರೂ ಬಹುಮತ ಸಿಕ್ಕಿರಲಿಲ್ಲ. ಆಪರೇಷನ್ ಕಮಲ ಮೂಲಕವೇ ಅಧಿಕಾರ ಹಿಡಿಯಲಾಗಿತ್ತು. ಆದರೀಗ, ಬಹುಮತ ಪಡೆಯಲೇಬೇಕೆಂದು ಯೋಜನೆ ರೂಪಿಸಿದೆ. ಒಂದು ವರ್ಷದ ಅವಧಿಯಲ್ಲಿ ಏನೇನು ಮಾಡಬೇಕೆಂದು ಯೋಜನೆ ರೂಪಿಸಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಹೊಸಪೇಟೆ ಯಲ್ಲಿ ಏ.16 ಮತ್ತು 17ರಂದು ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ನಂತರ ಪಕ್ಷದ ಚಟುವಟಿಕೆಗಳು ಇನ್ನಷ್ಟು ಬಿರುಸು ಪಡೆದುಕೊಳ್ಳಲಿವೆ. ಒಂದು ವರ್ಷಗಳ ಕಾಲ ಏನೇನು ಮಾಡಬೇಕೆಂಬ ಬಗ್ಗೆ ನಡ್ಡಾ ಮಾರ್ಗದರ್ಶನ ಮಾಡಲಿದ್ದಾರೆ. ಕಾರ್ಯಕಾರಿಣಿಗೂ ಮುನ್ನ ಮೂರು ತಂಡದಲ್ಲಿ ಪ್ರವಾಸ ಮಾಡಲಿದ್ದು, ಒಂದು ಹಂತದ ವೇದಿಕೆ ಸಜ್ಜುಗೊಳಿಸಲಾಗುತ್ತದೆ. ರಾಜ್ಯ ವಿಧಾನಸಭೆಗೆ 2023ರ ಏಪ್ರಿಲ್​ನಲ್ಲಿ ಚುನಾವಣೆ ನಡೆಯಲಿದೆ. ಅಂದರೆ ಇನ್ನು ಒಂದು ವರ್ಷವಿದ್ದು, ಪಕ್ಷ ಈಗ ಸಂಪೂರ್ಣ ಚುನಾವಣಾ ಮೂಡ್​ಗೆ ಜಾರಿದೆ. ಅದಕ್ಕಾಗಿಯೇ ವರ್ಷದ ಕಾರ್ಯಯೋಜನೆ ಸಿದ್ಧಪಡಿಸಿದೆ.

ವಿಸ್ತಾರಕ ಪುನಾರಂಭ: ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ, ಕ್ಷೇತ್ರವಾರು ಚುನಾವಣಾ ಕಾರ್ಯಸೂಚಿ ನಿಗದಿ ಮಾಡುವ ನಿಟ್ಟಿನಲ್ಲಿ ಬಿಜೆಪಿ ಜಾರಿಗೆ ತಂದಿರುವ ವಿಸ್ತಾರಕ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಕಾರ್ಯಕರ್ತರ ತಂಡ ಕ್ಷೇತ್ರವಾರು ಒಂದು ವಾರ ಪ್ರವಾಸ ಮಾಡಿ ಚುನಾವಣೆ ಎದುರಿಸುವ ಬಗ್ಗೆ ಮಾರ್ಗದರ್ಶನ ಮಾಡಲಿದೆ. ಪ್ರತಿ ಕ್ಷೇತ್ರಕ್ಕೆ ಒಬ್ಬರಂತೆ ವಿಸ್ತಾರಕರನ್ನು ನಿಯೋಜಿಸುವ ಕಾರ್ಯ ಏಪ್ರಿಲ್ ಮೂರನೇ ವಾರದಲ್ಲಿ ನಡೆಯಲಿದೆ. ದೊಡ್ಡ ಕ್ಷೇತ್ರಗಳಿಗೆ ಇಬ್ಬರು ಇರುತ್ತಾರೆ. ಒಟ್ಟಾರೆ 300 ಜನ ವಿಸ್ತಾರಕರನ್ನು ನೇಮಕ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ಪ್ರತಿ ಬೂತನ್ನು ತಲುಪುವ ಕೆಲಸ ಮಾಡಲಿದ್ದಾರೆ. ಬೂತ್ ಪ್ರಮುಖ್, ಪೇಜ್ ಪ್ರಮುಖರ ಜತೆ ಬಿಜೆಪಿಯ ತತ್ವ ಸಿದ್ಧಾಂತ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ, ಹಿಂದುತ್ವದ ವಿಚಾರಗಳು, ಕಾಂಗ್ರೆಸ್ ಹೇಗೆ ಹಿಂದು ವಿರೋಧಿ ಎಂಬುದನ್ನು ಮನೆ ಮನೆಗೆ ತಲುಪಿಸುವ ಕೆಲಸದ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ.

ಪ್ರತಿ ಬೂತ್​ನಲ್ಲಿ ನೇಮಕವಾಗಿರುವ ಪೇಜ್ ಪ್ರಮುಖರು ಮನೆಮನೆಗೆ ಬಿಜೆಪಿ ಎಂಬ ಯೋಜನೆಯನ್ನು ಹಾಕಿಕೊಂಡು ಕೆಲಸ ಮಾಡಬೇಕು. ಪ್ರತಿ ಮನೆಗೂ ವಾರಕ್ಕೆ ಕನಿಷ್ಠ ಒಮ್ಮೆ ಭೇಟಿ ನೀಡಬೇಕು. ಪಕ್ಷ ವಿರೋಧಿಗಳನ್ನು ಸಹ ಬಿಜೆಪಿ ಕಡೆ ಸೆಳೆಯುವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬ ಕಾರ್ಯವನ್ನು ಅರಂಭಿಸಲಾಗುತ್ತದೆ.

ವಾರ್ ರೂಂಗಳು ಆರಂಭ: ದಿನನಿತ್ಯದ ಚಟುವಟಿಕೆಗಳಿಗೆ ವಾರ್ ರೂಂ ಅತ್ಯಂತ ಪರಿಣಾಮಕಾರಿ. ರಾಜ್ಯ ಮಟ್ಟದಲ್ಲಿ ಒಂದು ವಾರ್ ರೂಂ ಇದ್ದರೆ, ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ವಾರ್ ರೂಂಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಇವುಗಳು ಸಹ ಏಪ್ರಿಲ್ ಕೊನೆಯ ವೇಳೆಗೆ ಆರಂಭವಾಗಲಿವೆ. ಪ್ರತಿ ನಿತ್ಯ ಆಗುಹೋಗುಗಳನ್ನು ವಾರ್ ರೂಂಗಳ ಮೂಲಕ ನಿಯಂತ್ರಿಸಲಾಗುತ್ತದೆ.

ಸಚಿವರ ಪ್ರವಾಸ: ಜಿಲ್ಲಾ ಉಸ್ತುವಾರಿ ಸಚಿವರು ಇನ್ನುಮುಂದೆ ನಿರಂತರವಾಗಿ ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಬೇಕು. ಸಂಘಟನೆಯಲ್ಲಿ ಲೋಪಗಳಿದ್ದರೆ ಕೂಡಲೇ ಸರಿಪಡಿಸಬೇಕು. ಕಾರ್ಯಕರ್ತರು, ಮುಖಂಡರು, ಶಾಸಕರು, ಕಳೆದ ಬಾರಿ ಸೋತು ಮತ್ತೆ ಅಭ್ಯರ್ಥಿಗಳಾಗುವವರ ನಡುವೆ ಸೇತುವೆ ರೀತಿಯಲ್ಲಿ ಕೆಲಸ ಮಾಡಬೇಕು. ಮುಖ್ಯಮಂತ್ರಿ ಅವರಿಗೂ ಪ್ರವಾಸ ಮಾಡುವಂತೆ ಸೂಚನೆ ನೀಡಲಾಗಿದೆ. ಸಚಿವರು, ಶಾಸಕರು ಬೆಂಗಳೂರಿಗೆ ಬರುವುದಕ್ಕಿಂತ ಜಿಲ್ಲೆಯಲ್ಲಿಯೇ ಹೆಚ್ಚು ಇರುವಂತೆ ಕಾರ್ಯಕ್ರಮ ರೂಪಿಸಲಾಗಿದೆ.

ಮೋರ್ಚಾಗಳ ಜವಾಬ್ದಾರಿ: ಆಯಾ ವರ್ಗದ ಮತದಾರರನ್ನು ಸೆಳೆಯುವ ಮೂಲಕ ಸೋಷಿಯಲ್ ಇಂಜಿನಿಯರಿಂಗ್​ನ ಕೆಲಸವನ್ನು ಈ ಮೋರ್ಚಾಗಳು ಮಾಡಲಿವೆ. ಪ್ರತಿ ಮೋರ್ಚಾಗಳು ಜಿಲ್ಲಾ ಮಟ್ಟದಲ್ಲಿ ಸಣ್ಣ ಸಣ್ಣ ಸಮಾವೇಶಗಳನ್ನು ನಡೆಸುವಂತೆ ಕಾರ್ಯಯೋಜನೆ ಸಿದ್ಧವಾಗಿದೆ. ರಾಜ್ಯ ಮಟ್ಟದ ಮೋರ್ಚಾಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ಸಮಾವೇಶಗಳನ್ನು ಸಂಘಟನೆ ಮಾಡಲಿವೆ. ಆ ಸಮಾವೇಶಗಳಿಗೆ ರಾಷ್ಟ್ರೀಯ ನಾಯಕರನ್ನು ಕರೆಸಲಾಗುತ್ತದೆ. ಆದರೆ ಜಿಲ್ಲಾ ಮಟ್ಟದಲ್ಲಿ ನಡೆಯುವ ಸಣ್ಣ ಸಣ್ಣ ಸಮಾವೇಶಗಳಿಗೆ ರಾಜ್ಯ ಮುಖಂಡರು ಭೇಟಿ ಮಾಡುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿ ನಿತ್ಯ ಪ್ರತಿ ಜಿಲ್ಲೆಯಲ್ಲಿಯೂ ಪಕ್ಷದ ಚಟುವಟಿಕೆಗಳು ನಡೆಯಬೇಕು ಹಾಗೂ ಜನರಿಗೆ ತಲುಪಬೇಕು ಎಂಬುದು ಪಕ್ಷ ರೂಪಿಸಿರುವ ಯೋಜನೆಯಾಗಿದೆ.

ಯುವಕರು, ಮಹಿಳೆಯರು ಟಾರ್ಗೆಟ್: ಯುವಕರು ಹಾಗೂ ಮಹಿಳೆಯರನ್ನು ಹೆಚ್ಚಿನ ಪ್ರಮಾಣದಲ್ಲಿ ಪಕ್ಷದ ಕಡೆ ಸೆಳೆಯುವಂತೆ ಕಾರ್ಯಕ್ರಮಗಳನ್ನು ರೂಪಿಸುವಂತೆ ಎರಡು ಮೋರ್ಚಾಗಳಿಗೆ ಬಿಜೆಪಿ ಟಾರ್ಗೆಟ್ ನಿಗದಿ ಮಾಡಲಾಗಿದೆ. ಇದರ ಜತೆಗೆ ಪಕ್ಷದಿಂದ ದೂರ ಇರುವ ಸಮುದಾಯ ಸೆಳೆಯುವುದು ಕುರಿತು ಮುಖಂಡರಿಗೆ ಜವಾಬ್ದಾರಿ ನೀಡಲಾಗುತ್ತದೆ.

ಆರು ತಿಂಗಳ ಮೊದಲೇ ಕೈ ಅಭ್ಯರ್ಥಿ ಅಂತಿಮ; ತಿಂಗಳಲ್ಲಿ 15 ದಿನ ಉಸ್ತುವಾರಿ ಕ್ಷೇತ್ರ ಪ್ರವಾಸ

ಬೆಂಗಳೂರು: ಸಾರ್ವತ್ರಿಕ ಚುನಾವಣೆ 2023ರ ಮಾರ್ಚ್​ನಲ್ಲಾದರೂ ನಡೆಯಲಿ, ಅವಧಿ ಪೂರ್ವದಲ್ಲಾದರೂ ಬರಲಿ, ನಾವಂತೂ ಸಿದ್ಧವಿರೋಣ, ಈಗಿನಿಂದಲೇ ಗಮನಕೊಟ್ಟರೆ ಕೊನೇ ಕ್ಷಣದ ಅವಘಡ ತಪ್ಪಿಸಿಕೊಳ್ಳ ಬಹುದೆಂದು ನಿರ್ಣಯಿಸಿರುವ ಕಾಂಗ್ರೆಸ್, ಮೊದಲ ಹಂತದಲ್ಲಿ ನೀಲಿನಕ್ಷೆ ಸಿದ್ಧಪಡಿಸಿಕೊಂಡಿದೆ. 150 ಸ್ಥಾನಗಳನ್ನು ಗೆಲ್ಲಬೇಕೆಂಬ ಟಾರ್ಗೆಟ್ ನಿಗದಿ ಮಾಡಿಕೊಂಡಿದ್ದು, ಇದಕ್ಕೆ ಪೂರಕವಾಗಿ ದೆಹಲಿ ನಾಯಕ ರಾಹುಲ್ ಗಾಂಧಿ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ರಾಜ್ಯ ನಾಯಕರು ಒಟ್ಟಾಗಿ ಕುಳಿತು ಯೋಜನೆ ಸಿದ್ಧಪಡಿಸಿ ದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜತೆ ವಿಚಾರ ವಿನಿಮಯ ನಡೆಸಿರುವ ರಾಹುಲ್, ಕೆಲವು ಸೂಚನೆ ನೀಡಿದ್ದಾರೆ. ಇದೇ ವೇಳೆ ಪಕ್ಷದ ಕಡೆಯಿಂದ ರೋಡ್​ವ್ಯಾಪ್ ಏನೆಂಬುದನ್ನು ಪ್ರಸ್ತುತಪಡಿಸಿದ್ದು, ಅದಕ್ಕೆ ರಾಹುಲ್ ಒಪ್ಪಿಗೆ ನೀಡಿದ್ದಾರೆ.

ಮುಂಬರುವ ಚುನಾವಣೆಯನ್ನು ಅಲ್ಪ ಅಂತರದಿಂದ ಗೆಲ್ಲಬಾರದು, ಕನಿಷ್ಠ ಪಕ್ಷ 150 ಸ್ಥಾನವನ್ನು ಗೆಲ್ಲುವ ಗುರಿ ಇಟ್ಟುಕೊಂಡು ಸಾಗಬೇಕು. ಒಟ್ಟಾಗಿ, ಸರಿಯಾದ ವಿಚಾರ ಇಟ್ಟುಕೊಂಡು ಹೋರಾಟ ಮಾಡಿದರೆ ಇದು ಕಷ್ಟವಲ್ಲ. | ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ (ಪಕ್ಷದ ಮುಖಂಡರಿಗೆ ಹೇಳಿದ್ದು)

ಕಾಂಗ್ರೆಸ್ ಯೋಜನೆಗಳೇನು?
  • ಚುನಾವಣೆಗೆ ಆರು ತಿಂಗಳು ಮೊದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಅವರು ತಮ್ಮೆಲ್ಲ ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಂಡು ಪರಿಣಾಮಕಾರಿಯಾಗಿ ಚುನಾವಣೆ ಎದುರಿಸಲು ಸಾಧ್ಯವಾಗುತ್ತೆ ಎಂಬ ಸಿದ್ದರಾಮಯ್ಯ ಮನವಿಗೆ ರಾಹುಲ್ ಒಪ್ಪಿಗೆ ಸೂಚಿಸಿದ್ದಾರೆ.
  • ಎಐಸಿಸಿ ಪ್ರಧಾನ ಕಾರ್ಯದರ್ಶಿ ತಿಂಗಳಲ್ಲಿ 15 ದಿನ ರಾಜ್ಯಕ್ಕೆ ಮೀಸಲಿಡಲಿದ್ದು, ಪ್ರತೀ ಕ್ಷೇತ್ರವನ್ನೂ ಪರಿಶೀಲನೆ ಮಾಡಲಿದ್ದಾರೆ. ಸ್ಥಳೀಯ ಮಟ್ಟದ ಗೊಂದಲಗಳನ್ನು ಖುದ್ದು ಪರಿಹಾರ ಮಾಡಿ ನಕಾರಾತ್ಮಕ ಸಂಗತಿ ಚಿವುಟಿ ಹಾಕಲಿದ್ದಾರೆ.
  • ಆ ವ್ಯಕ್ತಿ, ಈ ವ್ಯಕ್ತಿ ಎಂದು ವೈಯಕ್ತಿಕ ಚಿಂತನೆ ಮಾಡದೆ ಎಲ್ಲರೂ ಒಟ್ಟಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹೋರಾಟ ಮಾಡಲು ನಿರ್ಣಯ. ಪ್ರತಿ ಜಿಲ್ಲೆಯಲ್ಲಿ ಸಲಹೆ ಸೂಚನೆ ಪಡೆದು, ಅದನ್ನು ಗಂಭೀರವಾಗಿ ಪರಿಗಣಿಸಿ ಅಸಮಾಧಾನ ಬಾರದಂತೆ ನೋಡಿಕೊಳ್ಳುವುದು.
  • ಬಾಬು ಜಗಜೀವನರಾಮ್ ಹಾಗೂ ಅಂಬೇಡ್ಕರ್ ಜಯಂತಿಯಿಂದಲೇ ಚಿಂತನ-ಮಂಥನ ಕಾರ್ಯಕ್ರಮ ಮಾಡುವ ಮೂಲಕ ಅಧಿಕೃತವಾಗಿ ಸಮೀಕರಣ ಲೆಕ್ಕಾಚಾರ ಆರಂಭಿಸುವುದು.
  • ಸದಸ್ಯತ್ವ ಅಭಿಯಾನದ ಬಳಿಕ ಪ್ರತಿ ಬೂತ್​ನಲ್ಲಿ ಡಿಜಿಟಲ್ ಯೂತ್ ಇರುವಂತೆ ಮಾಡುವುದು, ಎಲ್ಲ 58 ಸಾವಿರ ಬೂತ್​ನಲ್ಲಿ ಪಕ್ಷದ ಸಂದೇಶ ರವಾನಿಸಲು ವಾಟ್ಸ್​ಆಪ್ ಗ್ರೂಪ್​ಗಳಿರಬೇಕು.
  • ಯುವ ಕಾಂಗ್ರೆಸ್​ನಿಂದ ಪ್ರತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ನಿರುದ್ಯೋಗಿಗಳಿದ್ದಾರೆ ಎಂದು ಸಮೀಕ್ಷೆ ಮಾಡಿ, ಬಳಿಕ ಅವರನ್ನು ಜಿಲ್ಲಾ ಮಟ್ಟದಲ್ಲಿ ಸೇರಿಸಿ ಹೋರಾಟ ನಡೆಸುವುದು, ನಿರುದ್ಯೋಗಿಗಳ ಅಂಕಪಟ್ಟಿಯನ್ನು ಪ್ರಧಾನಿಗೆ ರವಾನಿಸಿ ಬಿಸಿ ಮುಟ್ಟಿಸುವುದು.
  • ಮಹಿಳೆಯರನ್ನೇ ಕೇಂದ್ರೀಕರಿಸಿ ಪ್ರತಿ ಕ್ಷೇತದಲ್ಲಿ ಕಾರ್ಯಕ್ರಮ ಮಾಡುವುದು, ಯಾವುದೇ ಪುರುಷ ನಾಯಕರು ಇರದ ಪೂರ್ಣ ಮಹಿಳೆಯರಿಂದಲೇ ರೂಪುಗೊಂಡು ನಡೆಯುವ ಸಮಾವೇಶ ಆಯೋಜಿಸುವುದು.
  • ಪಕ್ಷದ ಸೇವೆ ಗಮನಿಸಿಯೇ ಟಿಕೆಟ್ ನೀಡಲಾಗುತ್ತದೆ. ಪಕ್ಷಕ್ಕೆ ಪ್ರಾಮಾಣಿಕರಾಗಿದ್ದು, ಪಕ್ಷದ ಪ್ರತಿನಿಧಿಯಾಗಿದ್ದರೆ ಮತ್ತು ಪ್ರಸ್ತುತ ಪಕ್ಷಕ್ಕೆ ಅವರ ಕೊಡುಗೆ ಏನೆಂಬುದನ್ನು ಪ್ರಧಾನವಾಗಿ ಪರಿಗಣಿಸಲಾಗುತ್ತದೆ.
  • ಯುವಕರು, ಮಹಿಳೆಯರ ಬಗ್ಗೆ ವಿಶೇಷ ಗಮನ. ಪಕ್ಷದಲ್ಲೂ ಹೆಚ್ಚು ಅವಕಾಶ ನೀಡುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net