

ಬೆಂಗಳೂರು: ರಾಜ್ಯದಲ್ಲಿ ಬಾಂಗ್ಲಾ ಇನ್ನಿತರ ದೇಶಗಳ ನಿವಾಸಿಗಳು ಅಕ್ರಮವಾಗಿ ನುಸುಳಿದ್ದಾರೆ. ಅಕ್ರಮವಾಗಿ ನೆಲೆಸಿದವರನ್ನು ಕೂಡಲೇ ಸ್ವದೇಶಕ್ಕೆ ಕಳುಹಿಸಲು ಕ್ರಮವಹಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಅತೃಪ್ತರ ಬಣ ಒತ್ತಾಯಿಸಿದೆ.
ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ನೇತೃತ್ವದ ತಂಡವು ಗುರುವಾರು ಭೇಟಿ ಮಾಡಿ, ಖುದ್ದು ಭೇಟಿ ಹಾಗೂ ಸಂಗ್ರಹಿಸಿದ ಮಾಹಿತಿ, ಛಾಯಾಚಿತ್ರಗಳ ಸಹಿತ ಮನವಿಪತ್ರವನ್ನು ಸಲ್ಲಿಸಿತು.
ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ, ಸಾಮಾಜಿಕ ಭದ್ರತೆ ದೃಷ್ಟಿಯಿಂದ ಅಕ್ರಮ ವಲಸಿಗರನ್ನು ಪತ್ತೆ ದೇಶದಿಂದ ಹೊರಗೆ ಕಳುಹಿಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅತೃಪ್ತರ ತಂಡ ಕೋರಿದೆ.
ರಾಜಭವನಕ್ಕೆ ತೆರಳುವ ಮುನ್ನ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎಂ. ಸಲೀಮ್ ಅವರಿಗೆ ಭೇಟಿಯಾಗಿ ಈ ಕುರಿತು ಮನವಿಪತ್ರ ಸಲ್ಲಿಸಿದೆ. ಬಾಂಗ್ಲಾ ಇನ್ನಿತರ ಪ್ರದೇಶಗಳಿಂದ ನುಸುಳಿದವರು ಅಕ್ರಮವಾಗಿ ನೆಲೆಯೂರಿದ್ದು, ಸ್ಥಳೀಯರೇ ಭಯಗ್ರಸ್ತರಾಗಿದ್ದಾರೆ.
ಅಸಂಘಟಿತ ವಲಯದ ಕಾರ್ಮಿಕರ ಉದ್ಯೋಗವನ್ನು ಕಸಿದುಕೊಂಡಿದ್ದಾರೆ. ಸಾಮಾಜಿಕ ಅಭದ್ರತೆ ಉಂಟಾಗಿದ್ದು, ಅಪರಾಧ ಪ್ರಕರಣಗಳು ಸಂಭವಿಸಿದರೂ ಹೊರಬರುತ್ತಿಲ್ಲ. ಅಕ್ರಮ ವಲಸಿಗರನ್ನು ಕೂಡಲೇ ದೇಶದಿಂದ ಹೊರ ದಬ್ಬಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯಪಾಲರಿಗೆ ಭೇಟಿಯಾದ ನಿಯೋಗದಲ್ಲಿ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಶ್ರೀಮಂತಪಾಟೀಲ್, ಮಹೇಶ್ ಕುಮಟಳ್ಳಿ ಇನ್ನಿತರರು ಇದ್ದರು.