ಶೋಷಿತರೆಡೆ ಬಿಜೆಪಿ ಕಾಳಜಿ : ಬಿ.ವೈ.ವಿಜಯೇಂದ್ರ | Cong govt apathy

BJP program
Published on

ಬೆಂಗಳೂರು: ಶೋಷಿತ ಸಮುದಾಯಗಳ ಏಳಿಗೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡಿರುವ ಕಾರ್ಯಕ್ರಮಗಳು, ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡ ನಿರ್ಧಾರಗಳು ಪಕ್ಷದ ಬದ್ಧತೆ ಸಾಬೀತುಪಡಿಸುತ್ತವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಪಾದಿಸಿದರು.

ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಅವರು ಮಾತನಾಡಿದರು.

ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಹತ್ತು-ಹಲವು ಯೋಜನೆಗಳನ್ನು ರೂಪಿಸಿದ ಪ್ರಧಾನಿ ಮೋದಿ ಅನುಷ್ಠಾನಕ್ಕೆ ತಂದಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಮಾಡಿದ್ದಾರೆ. ಅಲ್ಲಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿಯವರ ಹೆಸರು ಇಟ್ಟಿರುವುದು ಕರ್ನಾಟಕ ಮಾತ್ರವಲ್ಲದೇ, ಇಡೀ ದೇಶ ಹೆಮ್ಮೆಪಡುತ್ತಿದೆ ಎಂದರು.

ಐತಿಹಾಸಿಕ ತೀರ್ಮಾನ

ಕರ್ನಾಟಕದಲ್ಲೂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕೃತವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣ ಆಚರಣೆ, ಸರ್ಕಾರಿ ರಜೆ ಘೋಷಿಸಿ, ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪನೆ, ವಾಲ್ಮೀಕಿ ಸಮುದಾಯದ ಮಠದ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿತು.

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿಗೆ ಮೀಸಲು ಪ್ರಮಾಣ ಶೇಕಡ 15 ರಿಂದ 17, ಪರಿಶಿಷ್ಟ ಪಂಗಡಗಳಿಗೆ ಶೇ.3 ರಿಂದ ಏಳಕ್ಕೆ ಹೆಚ್ಚಿಸುವ ಐತಿಹಾಸಿಕ ತೀರ್ಮಾನ ತೆಗೆದುಕೊಂಡು, ಜಾರಿಗೆ ತಂದಿತು ಎಂದರು.

ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿ ವಿಷಯದಲ್ಲಿ ಕಾಂಗ್ರೆಸ್‌ನದು ಸದಾ ಮೊಸಳೆ ಕಣ್ಣೀರು ಸುರಿಸುವ ಧೋರಣೆಯಾಗಿದೆ. ಎಸ್‌ಟಿ ಅಭಿವೃದ್ಧಿ ನಿಗಮದ ಹಣ ಲೂಟಿ ಮಾಡಿ ತೆಲಂಗಾಣ ಚುನಾವಣೆಗೆ ಬಳಕೆ ಮಾಡಿಕೊಂಡ ಹಗರಣ ನಡೆಯಿತು.

ಸಿಎಂ ಸಿದ್ದರಾಮಯ್ಯ ಅಹಿಂದ ಹೆಸರು ಹೇಳಿಕೊಂಡು ಭಾಷಣ ಬಿಗಿಯುತ್ತಾರೆ. ತದ್ವಿರುದ್ಧವಾದ ಆಡಳಿತ ನೀಡುತ್ತಿದ್ದು, ಎಸ್‌ಸಿ, ಎಸ್‌ಟಿಗೆ ಶಾಸನಾತ್ಮಕವಾಗಿ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡರು ಎಂದು ದೂರಿದರು.

ಜಗತ್ತಿಗೆ ಪರಿಚಯ

ಭಾರತದ ಸಂಸ್ಕೃತಿ, ಪರಂಪರೆಯನ್ನು ಜಗತ್ತಿಗೇ ಪರಿಚಯಿಸಿಕೊಟ್ಟ ಶ್ರೇಷ್ಠ ಕವಿ ಮಹರ್ಷಿ ವಾಲ್ಮೀಕಿ. ರಾಮಾಯಣ ಮಹಾಕಾವ್ಯಕ್ಕೆ ಇಡೀ ವಿಶ್ವವೇ ತಲೆದೂಗಿದೆ. ಭಾರತ ಅಷ್ಟೇ ಅಲ್ಲ; ಜಗತ್ತಿಗೇ ಶ್ರೀರಾಮನ ಆದರ್ಶ ವ್ಯಕ್ತಿತ್ವವನ್ನು ಪರಿಚಯಿಸಿಕೊಡುವ ಮಹತ್ತರ ಕಾರ್ಯ ಮಹರ್ಷಿ ವಾಲ್ಮೀಕಿ ಅವರಿಂದಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕ ಸಿಮೆಂಟ್ ಮಂಜುನಾಥ್, ಪಕ್ಷದ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹಾಂತೇಶ ನಾಯಕ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net