ಬಿಜೆಪಿ ಅಭ್ಯರ್ಥಿಗಳು ಫಿಕ್ಸ್: ಹಾನಗಲ್​ಗೆ ರೇವತಿ, ಸಿಂದಗಿಗೆ ಭೂಸನೂರು?

Front 2
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ.
Published on

ಬೆಂಗಳೂರು: ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಪಾಲಿಗೆ ಪ್ರತಿಷ್ಠೆಯಾಗಿರುವ ವಿಧಾನಸಭೆ ಉಪ ಚುನಾವಣೆಗೆ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿ ಸಲಾಗಿದ್ದು, ಹಾನಗಲ್​ನಲ್ಲಿ ರೇವತಿ ಉದಾಸಿ ಮತ್ತು ಸಿಂದಗಿಯಲ್ಲಿ ರಮೇಶ ಭೂಸನೂರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಆಕಾಂಕ್ಷಿಗಳ ಪೈಪೋಟಿ ಹೆಚ್ಚಿರುವ ಕಾರಣಕ್ಕೆ ಬಂಡಾಯ ಶಮನದ ತಂತ್ರವಾಗಿ ಆದ್ಯತೆ ಆಧಾರದಲ್ಲಿ ತಲಾ ನಾಲ್ಕು ಹೆಸರುಗಳನ್ನು ಶಿಫಾರಸು ಮಾಡಲು ನಿರ್ಧರಿಸಲಾಗಿದ್ದು, ಅಧಿಕೃತ ಅಭ್ಯರ್ಥಿಗಳ ಹೆಸರು ಸೋಮವಾರವೇ ಪ್ರಕಟವಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕೋರ್ ಕಮಿಟಿ ಸಭೆಯಲ್ಲಿ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಹಾಗೂ ಆಯಾ ಕ್ಷೇತ್ರಗಳಿಂದ ತರಿಸಿಕೊಂಡ ಆಂತರಿಕ ವರದಿ ಆಧರಿಸಿ ವಿಸõತವಾಗಿ ಚರ್ಚೆ ನಡೆದಿದೆ. ಸಭೆ ಬಳಿಕ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಎರಡೂ ಕ್ಷೇತ್ರಗಳಿಗೆ ಹಲವು ಹೆಸರುಗಳು ಚರ್ಚೆಯಾಗಿವೆ ಎಂದರು.

ತಲಾ ಮೂರ್ನಾಲ್ಕು ಹೆಸರುಗಳನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಕಳುಹಿಸಿಕೊಡುವ ಅಧಿಕಾರವನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ ನೀಡಲಾಗಿದೆ ಎಂದರು. ಉಭಯ ಕ್ಷೇತ್ರಗಳ ಆಂತರಿಕ ಮತ್ತು ಬಾಹ್ಯ ವರದಿ ಪ್ರಕಾರ ಬಿಜೆಪಿ ಹೆಚ್ಚಿನ ಮತ ಪಡೆದು ಗೆಲ್ಲುವ ವಾತಾವರಣವಿದ್ದು, ಸಭೆಯಲ್ಲೂ ಈ ವಿಚಾರ ಚರ್ಚೆಯಾಗಿದೆ. ನಮ್ಮ ಸರ್ಕಾರದ ಸಾಧನೆ, ಅಭಿವೃದ್ಧಿ ಕಾರ್ಯ, ತತ್ವ-ಸಿದ್ಧಾಂತಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದು, ನಮ್ಮದು ಪಾಸಿಟಿವ್ ಪಾಲಿಟಿಕ್ಸ್ ಎಂದರು.

ಜೆಡಿಎಸ್ ಮುಸ್ಲಿಮರಿಗೆ ಟಿಕೆಟ್ ಕೊಟ್ಟ ವಿಚಾರದಲ್ಲಿ ಬಿಜೆಪಿ ಜತೆ ಒಳ ಒಪ್ಪಂದವಾಗಿದೆಯೆ? ಎಂಬ ಕಾಂಗ್ರೆಸ್ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಪಕ್ಷದವರು ಯಾರಿಗೆ ಟಿಕೆಟ್ ಕೊಡಬೇಕೆಂದು ನಾವ್ಹೇಗೆ ಹೇಳಲು ಸಾಧ್ಯ? ಕಾಂಗ್ರೆಸ್​ನವರು ಆರ್​ಎಸ್​ಎಸ್​ನ ಎಷ್ಟು ಜನರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಕೇಳಬೇಕಾಗುತ್ತದೆ ಎಂದು ಕುಟುಕಿದರು.

ಸಿದ್ದುಗೆ ಟೀಕೆ: ಜೆಡಿಎಸ್​ನ ಅಡುಗೆ ಮನೆಗೆ ಇಣುಕಿ ನೋಡುವ, ಇನ್ನೊಬ್ಬರ ಅಡುಗೆ ಮನೆ, ಬೆಡ್​ರೂಂ ಇಣುಕಿ ನೋಡುವ ಕೆಟ್ಟ ಕಾಯಿಲೆ ಸಿದ್ದರಾಮಯ್ಯನವರಿಗೆ ಯಾಕೆ ಬಂತು. ಇದು ಒಳ್ಳೆಯ ಲಕ್ಷಣವಲ್ಲ ಎಂದು ಪರೋಕ್ಷವಾಗಿ ಟೀಕಿಸಿದರು.

ಚಿಂತನ ಶಿಬಿರ: ಮುಂಬರುವ ವಿಧಾನ ಪರಿಷತ್ ಚುನಾವಣೆ, ಸಂಘಟನೆ ಬಲಪಡಿಸಲು ದೀಪಾವಳಿ ನಂತರ ಚಿಂತನೆ ಶಿಬಿರ ನಡೆಸಲು ತೀರ್ವನಿಸಲಾಗಿದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಪೂರ್ವ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ಗೆ ಅಭ್ಯರ್ಥಿ ಆಯ್ಕೆ ಹಾಗೂ ಚುನಾವಣೆ ಸಂದರ್ಭದಲ್ಲಿ ನಿಗದಿ ರೀತಿಯಲ್ಲಿ ನಾಯಕರ ಪ್ರವಾಸ ನಡೆಯಲಿದೆ ಎಂದು ಸಿ.ಟಿ.ರವಿ ಹೇಳಿದರು.

ಚುನಾವಣಾ ಉಸ್ತುವಾರಿಗಳು

ಸಿಂದಗಿ: ಸಚಿವರಾದ ಗೋವಿಂದ ಕಾರಜೋಳ, ವಿ. ಸೋಮಣ್ಣ, ಸಿ.ಸಿ. ಪಾಟೀಲ್, ಶಶಿಕಲಾ ಜೊಲ್ಲೆ, ಸಂಸದ ರಮೇಶ್ ಜಿಗಜಿಣಗಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಲಕ್ಷ್ಮಣ ಸವದಿ, ಎ.ಎಸ್. ಪಾಟೀಲ್ ನಡಹಳ್ಳಿ, ಪಿ. ರಾಜೀವ್, ಸೋಮನಗೌಡ ಪಾಟೀಲ್ ಮಾಜಿ ಸಚಿವ ಬಾಬುರಾವ್ ಚಿಂಚನಸೂರು, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ.

ಹಾನಗಲ್: ಸಚಿವರಾದ ಮುರುಗೇಶ್ ನಿರಾಣಿ, ಜೆ.ಸಿ.ಮಾಧುಸ್ವಾಮಿ, ಬಿ.ಸಿ. ಪಾಟೀಲ್, ಶಿವರಾಮ್ ಹೆಬ್ಬಾರ್, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಎನ್. ರವಿಕುಮಾರ್, ರಾಜುಗೌಡ, ನೆಹರು ಓಲೇಕಾರ್, ಎಂ. ಚಂದ್ರಪ್ಪ,ವಿರೂಪಾಕ್ಷಪ್ಪ ಬಳ್ಳಾರಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಮುಖಂಡರಾದ ಅರುಣ್ ಕುಮಾರ್ ಗುತ್ತೂರು.

ಕಾಂಗ್ರೆಸ್​ನ ಸಂಭಾವ್ಯರು

  • ಹಾನಗಲ್: ಶ್ರೀನಿವಾಸ ಮಾನೆ/
  • ಮನೋಹರ ತಹಶೀಲ್ದಾರ್
  • ಸಿಂದಗಿ: ಅಶೋಕ್ ಮನಗೂಳಿ

ಜೆಡಿಎಸ್ ಅಭ್ಯರ್ಥಿಗಳು?

  • ಹಾನಗಲ್: ನಿಯಾಜ್ ಶೇಖ್
  • ಸಿಂದಗಿ: ನಾಜಿಯಾ ಶಕೀಲ್ ಅಂಗಡಿ

ಕಾಂಗ್ರೆಸ್​ನವರು ಏನ್ ಮಾಡ್ತಾರೆ, ಜೆಡಿಎಸ್​ನವರು ಏನ್ ಮಾಡ್ತಾರೆ. ಅವರು ಏನು ಮಸಾಲೆ ಅರಿತಾರೆ ಎಂಬುದರ ಆಧಾರದಲ್ಲಿ ಅಡುಗೆ ತಯಾರಾಗೋಲ್ಲ. ನಮ್ಮಲ್ಲಿರುವ ಮಸಾಲೆ ಆಧರಿಸಿ ಅಡುಗೆ ತಯಾರಾಗುತ್ತದೆ. ಅದನ್ನು ಜನರಿಗೆ ಉಣಬಡಿಸುತ್ತೇವೆ. | ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net