ಮೀನುಗಾರರಿಗಿರುವ ಸಮಸ್ಯೆ ನಿವಾರಿಸಲು ಧ್ವನಿಯಾಗುವೆ

KotaPoojari
ಉಡುಪಿ ಮಲ್ಪೆಯಲ್ಲಿ ನಡೆದ ಮೀನುಗಾರರ ಸಭೆಯಲ್ಲಿ ಕೋಟ ಶ್ರೀನಿವಾಸ್​ ಪೂಜಾರಿ ಮಾತನಾಡಿದರು. ಶಾಸಕ ಯಶ್​ಪಾಲ್​ ಸುವರ್ಣ, ದಯಾನಂದ ಸುವರ್ಣ ಇದ್ದರು.
Published on

ಬಿಜೆಪಿ ಅಭ್ಯರ್ಥಿ ಕೋಟ ಪೂಜಾರಿ ಭರವಸೆ -- ಮಲ್ಪೆಯಲ್ಲಿ ಪ್ರಚಾರ ಸಭೆ

ಉಡುಪಿ: ಕರಾವಳಿ ಜಿಲ್ಲೆಗಳ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಮೀನುಗಾರಿಕೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಹಾಗೂ ಸಮಸ್ತ ಮೀನುಗಾರರ ಬೇಡಿಕೆ ಈಡೇರಿಸಲು ಹಾಗೂ ಸಮಸ್ಯೆ ನಿವಾರಿಸಲು ಧ್ವನಿಯಾಗುವೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

ಮಲ್ಪೆಯ ಮೀನುಗಾರರ ಸಂಘದ ಸಭಾಭವನದಲ್ಲಿ ಸೋಮವಾರ ಸಂಜೆ ಮಲ್ಪೆಯ ಮೀನುಗಾರ ಮುಖಂಡರು ಹಾಗೂ ಸಂಘದ ಪದಾಧಿಕಾರಿಗಳ ಸಭೆ ನಡೆಸಿ, ಗೆಲುವಿಗೆ ಸಹಕಾರ ಕೋರಿದರು.

ಬಿಜೆಪಿಗೆ ಮೀನುಗಾರರ ಬೆಂಬಲ

ಕರಾವಳಿ ಭಾಗದ ಮೀನುಗಾರರು ನಿರಂತರವಾಗಿ ರಾಷ್ಟ್ರೀಯತೆ, ಹಿಂದುತ್ವ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಯನ್ನೇ ಬೆಂಬಲಿಸುತ್ತಿದ್ದಾರೆ. ಈ ಬಾರಿ ನರೇಂದ್ರ ಮೋದಿಯವರನ್ನೇ ಸತತ 3ನೇ ಬಾರಿಗೆ ಪ್ರಧಾನಿಯಾಗಿಸುವ ಸಂಕಲ್ಪವನ್ನೂ ಅವರು ಮಾಡಿದ್ದಾರೆ. ಇದು ಪಕ್ಷದ ಅಭ್ಯರ್ಥಿಯಾಗಿ ನನಗೆ ಸಂತಸದ ವಿಚಾರ ಎಂದರು.

ಬಂದರು ಅಭಿವೃದ್ಧಿಗೆ ಆದ್ಯತೆ

ಈ ಹಿಂದೆ ನಾನು ಮೀನುಗಾರಿಕಾ ಸಚಿವನಾಗಿದ್ದ ಅವಧಿಯಲ್ಲಿ 60 ಕೋಟಿ ರೂ. ವೆಚ್ಚದಲ್ಲಿ 22 ಸಾವಿರ ಮಹಿಳಾ ಮೀನುಗಾರರ ಸಾಲಮನ್ನಾ, ಹಲವು ದಶಕಗಳ ಬೇಡಿಕೆಯಾಗಿದ್ದ ಹೆಜಮಾಡಿ ಮೀನುಗಾರಿಕಾ ಬಂದರು ಅಭಿವೃದ್ಧಿಗೆ 180 ಕೋಟಿ ರೂ. ಮಂಜೂರು ಹಾಗೂ ವಿವಿಧ ಮೀನುಗಾರಿಕಾ ಬಂದರುಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೆ ಎಂದರು.

ಸಭೆಯಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಹಾಗೂ ಮೀನುಗಾರ ಸಂಘಟನೆಗಳ ಪದಾಧಿಕಾರಿಗಳು, ಮೀನುಗಾರ ಮುಖಂಡರು ಉಪಸ್ಥಿತರಿದ್ದರು.

ಮೋದಿಗಿದೆ ಮೀನುಗಾರರ ಕಾಳಜಿ

ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಮತ್ಸ್ಯ ಸಂಪದಾ ಯೋಜನೆ ಮೂಲಕ ಮೀನುಗಾರಿಕಾ ಅಭಿವೃದ್ಧಿಗೆ 26 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಸಾಗರಮಾಲಾ ಯೋಜನೆಯ ಮೂಲಕ ಬಂದರುಗಳ ಅಭಿವೃದ್ಧಿ, ಕರಾವಳಿ ಜಿಲ್ಲೆಯ ಉತ್ಪನ್ನವಾಗಿ ಸಾಗರೋತ್ಪನ್ನ ಆಯ್ಕೆ, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿರುವುದು ಮೋದಿ ಅವರಿಗೆ ಮೀನುಗಾರರ ಕುರಿತು ಇರುವ ಕಾಳಜಿ ನಿರೂಪಿಸಿದೆ. ಹೀಗಾಗಿ ಪೂಜಾರಿ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ, ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬುವಂತೆ ಕರೆ ನೀಡಿದರು.

ಕರಾವಳಿ ಮೀನುಗಾರರಿಗೆ ಕಾಂಗ್ರೆಸ್​ನ ಮೇಲೆ ಯಾವುದೇ ಭರವಸೆ ಉಳಿದಿಲ್ಲ. 2018ರ ಸುವರ್ಣ ತ್ರಿಭುಜ ಬೋಟ್​ ದುರಂತಕ್ಕೆ ಕಾಂಗ್ರೆಸ್​ ಸರ್ಕಾರ ಪರಿಹಾರ ನೀಡಿರಲಿಲ್ಲ. ಬಳಿಕ ಯಡಿಯೂರಪ್ಪ ಸಿಎಂ ಆದ ಬಳಿಕ ವಿಶೇಷ ಪ್ರಕರಣದಡಿ ಸಂತ್ರಸ್ತ ಮೀನುಗಾರರ ಕುಟುಂಬಕ್ಕೆ ಪರಿಹಾರ ನೀಡಿದರು. ಕಳೆದ ವರ್ಷ ಉಚ್ಚಿಲದಲ್ಲಿ ರಾಹುಲ್​ ಗಾಂಧಿ ನಡೆಸಿದ ಮೀನುಗಾರರ ಸಂವಾದದಲ್ಲಿ ನೀಡಿದ ಯಾವುದೇ ಭರವಸೆಯನ್ನೂ ರಾಜ್ಯ ಕಾಂಗ್ರೆಸ್​ ಸರ್ಕಾರ ಈಡೇರಿಸದೆ ಮೀನುಗಾರರಿಗೆ ಚೊಂಬು ಹಿಡಿಸಿದೆ. ರವಿರಾಜ್​ ಸುವರ್ಣ.ಬಿಜೆಪಿ ಮೀನುಗಾರ ಪ್ರಕೋಷ್ಠದ ಜಿಲ್ಲಾ ಸಂಚಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net