ಬಿಜೆಪಿ ಅಭಿಯಾನದ ಕಿಚ್ಚು; ಕೈ ಸರ್ಕಾರದ ವಿರುದ್ಧ ಕೆಚ್ಚು

IMG-20240105-WA0009
Published on

ಬೆಂಗಳೂರು: 'ನಾನು 1992ರ ಕರಸೇವಕ ನನ್ನನ್ನು ಬಂಧಿಸಿ' ಎಂಬ ಬಿಜೆಪಿ ಅಭಿಯಾನದ ಕಿಚ್ಚು ರಾಜ್ಯಾದ್ಯಂತ ಮುಂದುವರಿದಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಸರಿ ಪಡೆ ಕೆಚ್ಚು ಪ್ರದರ್ಶಿಸುತ್ತಿದೆ. ಹಿರಿಯ ನಾಯಕರು, ಮಾಜಿ ಸಚಿವರು ಅಭಿಯಾನಕ್ಕೆ ಧುಮುಕುವ ಮೂಲಕ ಪಕ್ಷದ ಕಾರ್ಯಕರ್ತರ ಹುರುಪು ಹೆಚ್ಚಿಸುತ್ತಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರ ಪೊಲೀಸ್ ಠಾಣೆ ಮುಂದೆ ಮಾಜಿ ಸಚಿವರಾದ ರಾಮಚಂದ್ರಗೌಡ ಹಾಗೂ ಎಸ್.ಸುರೇಶ್ ಕುಮಾರ್ ಶುಕ್ರವಾರ ಧರಣಿ ಹೂಡಿ, ನಾನು ಕರಸೇವಕ ನನ್ನನ್ನು ಬಂಧಿಸಿ ಎಂದು ಭಿತ್ತಿಪ್ರದರ್ಶಿಸಿದರು. ಹುಬ್ಬಳ್ಳಿಯ ರಾಮಭಕ್ತ ಶ್ರೀಕಾಂತ ಪೂಜಾರಿ ಬಂಧನವನ್ನು ಖಂಡಿಸಿದರು. ಸ್ಥಳದಲ್ಲಿದ್ದ ಕಾರ್ಯಕರ್ತರು ಇದೇವೇಳೆ ಜೈ ಶ್ರೀರಾಮ್, ಜೈಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು.

ಇದೇ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಅಯೋಧ್ಯೆ ಅಭಿಯಾನದ ಘಟನಾವಳಿಗಳಿಗೆ ನಾನು ಕೂಡ ಸಾಕ್ಷಿಯಾಗಿದ್ದೆ. ಇದೀಗ ಸರಕಾರವು ಕರಸೇವಕರನ್ನು ಬಂಧಿಸುತ್ತಿದೆ. ಇದನ್ನು ವಿರೋಧಿಸಿ ನಾನು ಪ್ರತಿಭಟನೆಗೆ ಬಂದಿದ್ದೇನೆ ಎಂದರು.

ಕಾಂಗ್ರೆಸ್ ಗೆ ಅಸಹನೆ

ಮಂದಿರ ವಹೀ ಬನಾಯೇಂಗೇ ಎಂಬುದು ನಮ್ಮ ಘೋಷವಾಕ್ಯವಾಗಿತ್ತು. ಇವತ್ತು ಮಂದಿರವಲ್ಲೇ ಕಟ್ಟಿದೆವು ಎಂಬ ಕಾಲಕ್ಕೆ ಬಂದಿದ್ದೇವೆ. ಜನವರಿ 22ರಂದು ಮಂದಿರದ ಉದ್ಘಾಟನೆ ಹಾಗೂ ಶ್ರೀರಾಮಲಲಾನ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಸಹಜವಾಗಿ ಇಲ್ಲಿನ ಕಾಂಗ್ರೆಸ್ ಸರಕಾರಕ್ಕೆ ಇದನ್ನು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಟೀಕಿಸಿದರು.

30 ವರ್ಷಗಳ ಹಿಂದಿನ ಕೇಸನ್ನು ರೀ ಓಪನ್ ಮಾಡಿ ಕರಸೇವಕರನ್ನು ಸರಕಾರ ಬಂಧಿಸುತ್ತಿದೆ. ಈಗ ಬಂಧಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು. ಈಗಿನದು ಬಿಜೆಪಿ ಶ್ರೀರಾಮ ಎಂದು ಕಾಂಗ್ರೆಸ್‍ನವರು ಹೇಳುತ್ತಾರೆ. ಹಾಗಿದ್ದರೆ ಡಿಸೆಂಬರ್ 6ಕ್ಕೆ ಮೊದಲು ಇದ್ದುದು ಕಾಂಗ್ರೆಸ್ ಮಸೀದಿಯೇ ಎಂದು ಕೇಳಿದರು.

ಹರಿಪ್ರಸಾದ್ ಅವರ ಹೇಳಿಕೆಯು ಅವರ ಕೆಳಮಟ್ಟದ ಮನಸ್ಥಿತಿಯನ್ನು ತೋರಿಸುತ್ತದೆ. ಹಿಂದೆ ನರೇಂದ್ರ ಮೋದಿಯವರಿಗೆ ಬೈದದ್ದು ಗೊತ್ತಿದೆ. ಇವತ್ತು ಯಾರನ್ನಾದರೂ ಕ್ರಿಮಿನಲ್ ಎನ್ನಲು ಕಾಂಗ್ರೆಸ್ಸಿಗರು ಸಿದ್ಧರಾಗಿದ್ದಾರೆ. 30 ವರ್ಷಗಳಷ್ಟು ಹಿಂದಿನ ಪ್ರಕರಣಕ್ಕೆ ಇವತ್ತು ಯಾಕೆ ಜೀವ ಕೊಟ್ಟಿದ್ದೀರಿ? ಅವರು ಕರಸೇವಕ ಎಂಬ ಕಾರಣಕ್ಕೇ ರೀಓಪನ್ ಮಾಡಿದ್ದಾಗಿ ನಮ್ಮ ಬಲವಾದ ನಂಬಿಕೆ ಎಂದು ಎಸ್.ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net