ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ‘ಕಮಿಷನ್’ ಬಾಣ

BJP Former Minister C T Ravi press conference at state party office
Published on

ಬೆಂಗಳೂರು: ಅಧಿಕಾರಿಗಳ ವರ್ಗಾವಣೆ, ಯೋಜನೆಗಳಿಗೆ ಮಾತ್ರವಲ್ಲ, ಕಲಾವಿದರ ಗೌರವ ಸಂಭಾವನೆವರೆಗೂ ಕಾಂಗ್ರೆಸ್‌ನ ಸರ್ಕಾರದ ಕಮಿಷನ್ ದಂಧೆ ಚಾಚಿಕೊಂಡಿದೆ. ಕರ್ನಾಟಕ ಪ್ರದೇಶ ಕಮಿಷನ್ ಕಾಂಗ್ರೆಸ್ ಆಗಿ ಪರಿವರ್ತನೆಯಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾವಿದರ ಕಮಿಷನ್‌ಗೆ ಕೈಚಾಚಿರುವುದು ನಾಚಿಕೆಗೇಡು. ಸಿಎಂ ಸಿದ್ದರಾಮಯ್ಯ ಯಾವ ಮುಖ ಇಟ್ಟುಕೊಂಡು ನಾಡಹಬ್ಬ ಉದ್ಘಾಟನೆ ಹೋದರು ?, ಸಾಂಸ್ಕೃತಿಕ ಅಧಃಪತನದತ್ತ ರಾಜ್ಯವನ್ನು ಕೊಂಡೊಯ್ಯುತ್ತಿದ್ದಾರೆ ಎಂದು ಹರಿಹಾಯ್ದರು.

ಲಭ್ಯ ಮಾಹಿತಿ ಪ್ರಕಾರ ಪಂಚರಾಜ್ಯಗಳ ಚುನಾವಣೆಗೆ ಒಬ್ಬರು ಎರಡು ಸಾವಿರ ಕೋಟಿ ರೂ., ಮತ್ತೊಬ್ಬರು ಒಂದು ಸಾವಿರ ಕೋಟಿ ರೂ. ಕಳುಹಿಸುವುದಾಗಿ ಪಕ್ಷದ ಹೈಕಮಾಂಡ್ ಮುಂದೆ ಒಪ್ಪಿಕೊಂಡು ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ನಂಬರ್ ಒನ್ ಹಾಗೂ ಟು ಅವರು ಎಲ್ಲ ಜಿಲ್ಲೆಗಳಲ್ಲಿ ನೂರಾರು ಬೇನಾಮಿಗಳನ್ನು ನೇಮಿಸಿದ್ದು, ಸದ್ಯಕ್ಕೆ ಇಬ್ಬರು ಬೇನಾಮಿಗಳು ಐಟಿ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಸಿ.ಟಿ.ರವಿ ದೂರಿದರು.

ಸಿಬಿಐ ತನಿಖೆಗೆ ಒಪ್ಪಿಸಲಿ

ಕಮಿಷನ್, ಭ್ರಷ್ಟಾಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ದೊಡ್ಡ ಧ್ವನಿಯಲ್ಲಿ ಗುಡುಗುತ್ತಾರೆ. ಇದೀಗ ಗುತ್ತಿಗೆದಾರ, ಬಿಲ್ಡರ್ ಬಳಿ ಅಕ್ರಮ ಹಣ ಪತ್ತೆಯಾಗಿರುವುದು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ಸವಾಲೆಸೆದರು.

ಐಟಿ ದಾಳಿ ಹಿಂದೆ ರಾಜಕೀಯ ಇರುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರೆ, ಎಲ್ಲ ಖಾತೆ ತಮ್ಮ ಕೈಯಲ್ಲಿ ಇರುವಂತೆ ವರ್ತಿಸುವ ಪ್ರಿಯಾಂಕ್ ಖರ್ಗೆ ಈ ದಾಳಿ ವಿರುದ್ಧ ಅಣಿಮುತ್ತು ಉದುರಿಸುತ್ತಾರೆ ಎಂದು ಛೇಡಿಸಿದರು.

ಒಕ್ಕಲಿಗ ಎನ್ನುವುದು ಒಂದು ಸಂಸ್ಕೃತಿ, ಕಾಯಕವಾಗಿದೆ. ಕ್ರಮೇಣ ಜಾತಿಸೂಚಕವಾಗಿದೆ. ಕುವೆಂಪು ಸಾಹಿತ್ಯವನ್ನು ಸಮಗ್ರವಾಗಿ ನೋಡದೆ ಸಂದರ್ಭಕ್ಕೆ ಒಂದೆರಡು ಸಾಲ ಬಳಸಿ ಅವರ ತಲೆಗೆ ಕಟ್ಟುವ ಪ್ರೊ.ಭಗವಾನ್ ಪ್ರಯತ್ನ ಸಮರ್ಥನೀಯವಲ್ಲ, ಒಕ್ಕಲಿಗರ ಬಗೆಗಿನ ಮಾತುಗಳ ಅವರ ಮನಸ್ಥಿತಿ ಎತ್ತಿ ತೋರಿಸುತ್ತದೆ ಎಂದು ಸಿ.ಟಿ.ರವಿ ಹರಿಹಾಯ್ದರು.

ಸೀಟು ಹಂಚಿಕೆ ಮಾತುಕತೆ ಸದ್ಯಕ್ಕೆ ಡೌಟು

ಬಿಜೆಪಿ, ಜೆಡಿಎಸ್ ನಡುವೆ ಸೀಟುಗಳ ಹಂಚಿಕೆ ಯಾವತ್ತದಾದರೂ ಒಂದು ದಿನ ಆಗಬೇಕು. ಆದರೆ ಪಕ್ಷದ ವರಿಷ್ಠರು ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ವ್ಯಸ್ತರಾಗಿದ್ದು, ಸದ್ಯಕ್ಕೆ ಈ ಕುರಿತು ಮಾತುಕತೆ ಡೌಟು ಎಂದು ಸಿ.ಟಿ.ರವಿ ಹೇಳಿದರು.

ಐದು ರಾಜ್ಯಗಳ ಚುನಾವಣೆ ಮುಗಿಯುವ ತನಕ ಲೋಕಸಭೆ ಚುನಾವಣೆಯತ್ತ ರಾಷ್ಟ್ರೀಯ ನಾಯಕರು ಗಮನಹರಿಸುವುದಿಲ್ಲ. ದೆಹಲಿಯಲ್ಲಿ 21ಕ್ಕೆ ದೇವೇಗೌಡ- ಬಿಜೆಪಿ ವರಿಷ್ಠರ ನಡುವೆ ಸೀಟುಹಂಚಿಕೆ ಚರ್ಚೆ ಬಗ್ಗೆ ಮಾಹಿತಿಯಿಲ್ಲವೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net