

ಬೆಂಗಳೂರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಲ್ಲಿ ರಾಜ್ಯ ಬಿಜೆಪಿ ಕ್ಷಮೆಯಾಚಿಸಿದೆ. ಆ ಮೂಲಕ ಮಾಜಿ ಮಂತ್ರಿ ಆರಗ ಜ್ಞಾನೇಂದ್ರ ಆಡಿದ ಮಾತಿನಿಂದ ಹೊತ್ತಿಕೊಂಡಿರುವ ಕಿಡಿ ನಂದಿಸಲು ಕಮಲಪಡೆ ಯತ್ನಿಸಿದೆ.
ಗಾಂಧಿ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದ ಬಳಿಕ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ ಆರಗ ನೀಡಿದ ಹೇಳಿಕೆಗೆ ಪಕ್ಷದ ಪರವಾಗಿ ಖರ್ಗೆ ಮತ್ತು ಖಂಡ್ರೆ ಕ್ಷಮೆಯಾಚಿಸಿದರು.
ಆರಗ ಜ್ಞಾನೇಂದ್ರ ಮಾತನಾಡುವ ಭರದಲ್ಲಿ ಮಲ್ಲಿಕಾರ್ಜುನ ಖರ್ಗೆ, ಈಶ್ವರ ಖಂಡ್ರೆ ಬಣ್ಣದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಬಿಜೆಪಿ ವ್ಯಕ್ತಿಯ ಬಣ್ಣ ನೋಡಿಯಲ್ಲ, ಗುಣಾವಗುಣಗಳನ್ನು ನೋಡಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.
ಪಕ್ಷದ ವತಿಯಿಂದ ಕ್ಷಮೆಯಾಚಿಸುತ್ತೇನೆ, ಇದನ್ನು ದೊಡ್ಡ ವಿಷಯ ಮಾಡಬೇಕಾಗಿಲ್ಲ. ಏನೋ ಬಹಳ ತಪ್ಪು ಮಾಡಿದ್ದಾರೆ ಎಂದು ಕಾಂಗ್ರೆಸ್‌ನವರು ಬಿಂಬಿಸುತ್ತಿದ್ದಾರೆ. ಈ ವಿಚಾರ ಬದಿಗಿಟ್ಟು, ಆರಗ ಜ್ಞಾನೇಂದ್ರ ಎತ್ತಿರುವ ಅರಣ್ಯ ಸಂಬಂಧಿ ಸಮಸ್ಯೆಗಳತ್ತ ಸರ್ಕಾರ ಚರ್ಚಿಸಿ ಕ್ರಮಕೈಗೊಳ್ಳಲಿ ಎಂದು ಎನ್.ರವಿಕುಮಾರ್ ಆಗ್ರಹಿಸಿದರು.
ಮಾಜಿ ಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ ಪೊಲೀಸ್ ಮಂಡಳಿ ನಿರ್ಧರಿಸಿದ್ದ ಪೊಲೀಸರ ವರ್ಗಾವಣೆ ಪಟ್ಟಿಗೆ ಸರ್ಕಾರ ತಡೆ ನೀಡಿರುವುದು ಕಾನೂನು ಬಾಹಿರ, ವರ್ಗಾವಣೆ ದಂಧೆಯ ಕೈವಾಡವಿರುವುದು ಸ್ಪಷ್ಟವೆಂದು ಆರೋಪಿಸಿದರು.
ಪೊಲೀಸ್ ಮಂಡಳಿಗೆ ಪೊಲೀಸರ ವರ್ಗಾವಣೆ ಅಧಿಕಾರವಿದೆ. ಅಧಿಕಾರ ದುರ್ಬಳಕೆ ಅಥವಾ ಕಾನೂನು ಉಲ್ಲಂಸಿದ್ದರೆ ಸರ್ಕಾರ ತಡೆ ನೀಡಬಹುದು. ಯಾವುದೇ ಆರೋಪಗಳಿಲ್ಲದಿದ್ದರೂ ತಡೆ ಹಿಡಿದಿರುವುದು ಖಂಡನೀಯ. ವರ್ಗಾವಣೆ ದಂಧೆ, ಕಾಮಗಾರಿಗಳ ಬಿಲ್ ಪಾವತಿಗೆ ಹಣದ ಬೇಡಿಕೆಯಿಡಲಾಗುತ್ತಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಓಡಾಡುತ್ತಿದ್ದಾರೆ. ಬೆಂಗಳೂರು ಉಸ್ತುವಾರಿವಹಿಸಿಕೊಂಡ ನಂತರ ಉಸಿರುಗಟ್ಟುವ ವಾತಾವರಣ ಸೃಷ್ಟಿಸಿದ್ದಾರೆ. ಗುತ್ತಿಗೆದಾರರಿಗೆ ಕಿರುಕುಳ ನೀಡಲಾರಂಭಿಸಿದ್ದಾರೆ. ಪಾಪ, ಅವರ ಪಕ್ಷದ ಶಾಸಕರಿಗೆ ಶಕ್ತಿ, ಉಸಿರಿಲ್ಲದೇ ಮೌನಕ್ಕೆ ಶರಣಾಗಿದ್ದಾರೆ ಎಂದು ಅಶ್ವತ್ಥ ನಾರಾಯಣ ಲೇವಡಿ ಮಾಡಿದರು.