

ಬೆಂಗಳೂರು: ಬಿಜೆಪಿ ತನ್ನ ಆಡಳಿತ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸಲು ಅವಕಾಶ ಕಲ್ಪಿಸಿದೆ ಎಂದು ಡಿಸಿಎಂ DK ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು. “ಬಿಜೆಪಿ ಅಧಿಕಾರದಲ್ಲಿದ್ದಾಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸಬಹುದು ಎಂದು ಕಾನೂನು ತಂದಿದೆ. ಚುನಾವಣಾ ಆಯೋಗದ ಉಪಕಾನೂನಿನಲ್ಲಿ ಮತಪತ್ರ ಬಳಸಲು ಅವಕಾಶ ಕಲ್ಪಿಸಲಾಗಿದೆ. ಜಿಬಿಎ ಕಾಯ್ದೆ ಜಾರಿಗೆ ತರುವಾಗ, ಬಿಜೆಪಿ ಮಾಡಿದ್ದ ಕಾಯ್ದೆಯನ್ನೇ ಮುಂದುವರಿಸಿದ್ದೇನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸುವುದರಲ್ಲಿ ತಪ್ಪೇನು ಇಲ್ಲ. ಈ ವಿಚಾರವಾಗಿ ಕಾನೂನು ಸಚಿವರು ಪ್ರಸ್ತಾವನೆ ಸಲ್ಲಿಸಿದ್ದಾರೆ” ಎಂದು ತಿಳಿಸಿದರು.
ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೆಂಟ್ ಮೇರಿಸ್ ಹೆಸರಿಡಬೇಕು ಎಂಬ ಸಿಎಂ ಸಿದ್ದರಾಮಯ್ಯ ಅವರ ಪ್ರಸ್ತಾವನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ಮೆಟ್ರೋ ನಿಲ್ದಾಣಗಳಿಗೆ ಹೆಸರಿಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಈ ವಿಚಾರವಾಗಿ ನಾವು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.
ಮದ್ದೂರಿನಲ್ಲಿ ದ್ವೇಷ ಭಾಷಣ ಹಿನ್ನೆಲ್ಲೆಯಲ್ಲಿ ಬಿಜೆಪಿ ನಾಯಕ ಸಿ.ಟಿ ರವಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿರುವ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನನಗೆ ಹೆಚ್ಚು ಮಾಹಿತಿ ಇಲ್ಲ. ಅವರು ಮಾತು, ಭಾಷೆ, ನಡತೆಯೇ ಅವರ ಪದ್ಧತಿ, ಸಂಸ್ಕೃತಿಯನ್ನು ತೋರುತ್ತದೆ” ಎಂದು ತಿಳಿಸಿದ್ದಾರೆ.