ಕೈನಿಂದ ಒಡೆದು ಆಳುವ ನೀತಿ: ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟೀಕೆ; ಶಿರಾದಲ್ಲಿ ಜನಸಂಕಲ್ಪ ಸಮಾವೇಶ

Nadda
ದಾವಣಗೆರೆಯಲ್ಲಿ ನಡೆದ ವೃತ್ತಿಪರರು ಮತ್ತು ಕೀ ವೋಟರ್​ಗಳ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಸನ್ಮಾನಿಸಲಾಯಿತು. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಎಂಎಲ್​ಸಿ ಕೆ.ಎಸ್.ನವೀನ್ ಮತ್ತಿತರರಿದ್ದರು.
Published on

ತುಮಕೂರು: ಕಾಂಗ್ರೆಸ್ ಎಲ್ಲೆಡೆಯೂ ಒಡೆದು ಆಳುವ ನೀತಿ ಅನುಸರಿಸುತ್ತಿದೆ, ಮನೆಗಳಲ್ಲಿ ಅಣ್ಣ-ತಮ್ಮಂದಿರು, ಸಮಾಜದಲ್ಲಿ ಜಾತಿ, ಧರ್ಮಗಳ ನಡುವೆ ಜಗಳ ತಂದಿಟ್ಟು, ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಾಗ್ದಾಳಿ ನಡೆಸಿದರು. ಶಿರಾ ಕ್ಷೇತ್ರದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದೊಂದಿಗೆ ದೇಶದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಕರ್ನಾಟಕದಲ್ಲಿ ಎಲ್ಲ ವರ್ಗದ ಜನರ ಹಿತ ಬಯಸುವ ಸರ್ಕಾರವಿದೆ, ವಿದೇಶಿ ಬಂಡವಾಳ ಕೂಡ ಕರ್ನಾಟಕಕ್ಕೆ ಹರಿದುಬರುತ್ತಿದೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಮಧ್ಯಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸಶಕ್ತಗೊಳಿಸಲಾಗಿದೆ, ತುಮಕೂರಿನೆಲ್ಲೆಡೆಯೂ ಕಮಲ ಅರಳಲಿದೆ. ಜನಸಂಕಲ್ಪ ಯಾತ್ರೆ ವಿಜಯ ಸಂಕಲ್ಪ ಯಾತ್ರೆಯಾಗಿ ಪರಿವರ್ತನೆಯಾಗಲಿದ್ದು, ಜನರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.

ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಸೂರ್ಯ, ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಈ ಬಾರಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಕೊಟ್ಟ ಭರವಸೆ ಈಡೇರಿಸುವ ಪಕ್ಷ ಬಿಜೆಪಿ ಎಂದರು. 140ಕ್ಕೂ ಹೆಚ್ಚು ಸ್ಥಾನ ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೇರುವ ಮಾತನಾಡುತ್ತಿರುವ ಕಾಂಗ್ರೆಸ್​ನವರ ತಿರುಕನ ಕನಸು ಹಾಗೆಯೇ ಉಳಿಯುವಂತೆ ಮಾಡುತ್ತೇವೆ, ಕಾರ್ಯಕರ್ತರು ವಿಶ್ವಾಸದಿಂದ ನಮ್ಮ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವರಾದ ಆರ್.ಅಶೋಕ್, ಬಿ.ಸಿ.ನಾಗೇಶ್, ಶಾಸಕ ಸಿ.ಟಿ.ರವಿ ಮತ್ತಿತರರಿದ್ದರು.

ಜನರಿಂದ ಆಯ್ಕೆಯಾಗಿರುವ ರಾಜ್ಯದ ಹಾಲಿ ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವಮಾನಿಸಿದ್ದಾರೆ. ಸಿಎಂಗೆ ಅವಮಾನ ಎಂದರೆ ಅದು ರಾಜ್ಯದ ಜನತೆಗೆ ಮಾಡಿರುವ ಅವಮಾನ. ಇದಕ್ಕೆ ಕರ್ನಾಟಕದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎನ್ನುವ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷವನ್ನು ಮನೆಯಲ್ಲಿ ಕೂಡಿಸುವ ಸಂಕಲ್ಪವನ್ನು ಕರ್ನಾಟಕದ ಜನ ಮಾಡಲಿದ್ದಾರೆ. ಇದು ಜನರ ಸಂಕಲ್ಪ ಹಾಗೂ ನಮ್ಮ ಸಂಕಲ್ಪವೂ ಆಗಿರಲಿದೆ. | ಜೆ.ಪಿ.ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮುಂದೆ ಕೈಕಟ್ಟಿ ನಿಲ್ಲುವ ಸಿದ್ದರಾಮಯ್ಯ ಅವರಿಂದ ನಾವು ಪಾಠ ಕಲಿಯಬೇಕಾಗಿಲ್ಲ. ಕರ್ನಾಟಕದ ಪಾಲಿಗೆ ನರೇಂದ್ರ ಮೋದಿ ಅವರು ಕೇಳದೇ ಕೊಡುವ ಕಾಮಧೇನುವಾಗಿದ್ದಾರೆ. ಹುಲಿ ಅಥವಾ ಇಲಿ ಮಾಡುವ ಮಂತ್ರದಂಡ ಕರ್ನಾಟಕ ಜನತೆಯ ಕೈಯಲ್ಲಿದೆ. ಕಾಂಗ್ರೆಸ್​ನವರು ಇಲಿಯೋ ಅಥವಾ ಹುಲಿಯಾಗುವ ಬಗ್ಗೆ ಜನ ತೀರ್ವನಿಸಲಿದ್ದಾರೆ. | ಬಸವರಾಜ ಬೊಮ್ಮಾಯಿ ಸಿಎಂ

ಬಿಜೆಪಿ ಆಡಳಿತದಲ್ಲಿ ಬದಲಾಗುತ್ತಿದೆ ಭಾರತ

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತ ಬದಲಾಗುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿಯ ಹೆಜ್ಜೆಗಳನ್ನಿಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. ಬಿಜೆಪಿ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ವೃತ್ತಿಪರರು ಮತ್ತು ಕೀ ವೋಟರ್​ಗಳ ಸಮಾವೇಶದಲ್ಲಿ ಮಾತನಾಡಿದ ನಡ್ಡಾ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರಿಪೋರ್ಟ್ ಕಾರ್ಡ್ ಮುಂದಿಟ್ಟರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದನಂತರ ದೇಶದ ರಾಜಕೀಯ ಸಂಸ್ಕೃತಿಯೇ ಬದಲಾವಣೆಯಾಯಿತು. ವಂಶ ಪಾರಂಪರ್ಯ ಆಡಳಿತ, ಕುಟುಂಬಕ್ಕೆ ಸೀಮಿತವಾದ ಪಕ್ಷಗಳು, ವೋಟ್ ಬ್ಯಾಂಕ್ ರಾಜಕಾರಣ, ವಿಭಜಿಸಿ ಆಳುವ ನೀತಿ ಕೊನೆಯಾದವು ಎಂದರು.

ನರೇಂದ್ರ ಮೋದಿ ಪ್ರಧಾನಿಯಾದ ನಂತರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರವನ್ನು ಜಪಿಸಿ ಅದರಂತೆಯೇ ನಡೆದುಕೊಂಡು ಬಂದಿದ್ದಾರೆ. ಜಗತ್ತಿನಲ್ಲಿ ಕೋವಿಡ್ ಆತಂಕ ಸೃಷ್ಟಿಯಾದಾಗ ಭಾರತ ಜಗತ್ತೇ ಬೆರಗಾಗುವ ರೀತಿಯಲ್ಲಿ ನಿಭಾಯಿಸಿತು. ವಿವಿಧ ರಾಷ್ಟ್ರಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಭಾರತ ಹಣದುಬ್ಬರವನ್ನು ನಿಯಂತ್ರಿಸಿ ಸ್ಥಿರತೆ ಕಾಯ್ದುಕೊಂಡಿದೆ. ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದ ಆರೋಗ್ಯ ನೀತಿಯಲ್ಲೂ ಪರಿವರ್ತನೆ ತರಲಾಗಿದ್ದು, ಸಮಗ್ರ ಆರೋಗ್ಯ ಸಂರಕ್ಷಣೆಯತ್ತ ಗಮನ ಹರಿಸಲಾಗಿದೆ. ವಿವಿಧ ವೈದ್ಯಕೀಯ ಪದ್ಧತಿಗಳ ಸಮನ್ವಯ ಸಾಧಿಸಲಾಗುತ್ತಿದೆ. 50 ಕೋಟಿ ಜನರು ಆಯುಷ್ಮಾನ್ ಭಾರತ್ ಯೋಜನೆ ವ್ಯಾಪ್ತಿಗೆ ಬಂದಿದ್ದಾರೆ ಎಂದು ನಡ್ಡಾ ವಿವರಿಸಿದರು. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಪಕ್ಷದ ಪ್ರಕೋಷ್ಠಗಳ ರಾಜ್ಯ ಸಹ ಸಂಯೋಜಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಇತರರಿದ್ದರು.

ಬಿಎಸ್​ವೈ ನಾಯಕತ್ವಕ್ಕೆ ಮೆಚ್ಚುಗೆ!: ರಾಜ್ಯದ ಅಭಿವೃದ್ಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಕೊಡುಗೆಯಿದೆ, ಕರ್ನಾಟಕದ ಸವೋಚ್ಛ ನಾಯಕ ಅವರು ಎಂದು ಜೆ.ಪಿ.ನಡ್ಡಾ ಬಣ್ಣಿಸಿದರು. ಬಿಎಸ್​ವೈ ಮಾರ್ಗದರ್ಶನದಲ್ಲಿಯೇ ಇಂದಿನ ಸಿಎಂ ಬಸವರಾಜ ಬೊಮ್ಮಾಯಿ ಕೂಡ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಯಡಿಯೂರಪ್ಪ ಉಪಸ್ಥಿತಿಯಲ್ಲೇ ನಡ್ಡಾ ಮೆಚ್ಚುಗೆ ಸೂಚಿಸಿದರು.

7 ದೇಶಗಳಲ್ಲಿ ಐಐಟಿ ಸ್ಥಾಪನೆ: ವಿಶ್ವದ 7 ದೇಶಗಳಲ್ಲಿ ಐಐಟಿ ಸಂಸ್ಥೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಭಾರತದ ಗುಣಮಟ್ಟದ ಶಿಕ್ಷಣ ವಿದೇಶಗಳಿಗೂ ವಿಸ್ತಾರಗೊಳ್ಳುತ್ತಿದೆ. ಯುಎಇ, ಇಂಗ್ಲೆಂಡ್, ಸೌದಿ ಅರೇಬಿಯಾ, ಮಲೇಷಿಯಾ, ಥೈಲ್ಯಾಂಡ್, ಈಜಿಪ್ಟ್ ಮತ್ತು ಕತಾರ್ ದೇಶಗಳಲ್ಲಿ ಐಐಟಿಗಳು ಬರಲಿವೆ. ನೂತನ ಶಿಕ್ಷಣ ನೀತಿ ಬಡವರಿಗೂ ಕೈಗೆಟುಕುವಂತಿದ್ದು, ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯುವಂತಾಗಿದೆ. ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ಇರುವ ನೀಟ್ ಪರೀಕ್ಷೆಯನ್ನು 14 ಭಾಷೆಗಳಲ್ಲಿ ಬರೆಯಲು ಅವಕಾಶವಿದೆ ಎಂದು ಜೆ.ಪಿ.ನಡ್ಡಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net