ಲೋಕಸಭೆಗೆ ಬಿಜೆಪಿ 350+ ಟಾರ್ಗೆಟ್; ಚುನಾವಣೆಗೆ ಭರ್ಜರಿ ಸಿದ್ಧತೆ

bjp
Published on

ನವದೆಹಲಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ 303 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, 2024ರ ಸಾರ್ವತ್ರಿಕ ಚುನಾವಣೆಯಲ್ಲಿ 350ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ಈ ಟಾರ್ಗೆಟ್ ತಲುಪಲು ಏಕಕಾಲಕ್ಕೆ ಹಲವು ಚಟುವಟಿಕೆ ಆರಂಭ ಮಾಡಿದೆ.

ತನ್ನ ಭದ್ರಕೋಟೆಯ ಜೊತೆಗೆ, ಸೋನಿಯಾ ಗಾಂಧಿ, ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್, ಶರದ್ ಪವಾರ್ ಮತ್ತು ಇತರ ಹಿರಿಯ ನಾಯಕರು, ಸಂಸದರ ಕ್ಷೇತ್ರಗಳ ಮೇಲೂ ಗಮನ ಕೇಂದ್ರೀಕರಿಸಿದೆ. ಈ ಹಿಂದೆ ಗೆಲ್ಲಲು ಸಾಧ್ಯವಾಗಿರದ ಹಲವು ಕ್ಷೇತ್ರಗಳಲ್ಲೂ ಗೆಲ್ಲುವ ಟಾರ್ಗೆಟ್ ಹೊಂದಿದೆ. 2019ರಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ದಕ್ಷಿಣ ಭಾರತದ ರಾಜ್ಯಗಳ ಮೇಲೂ ಕಣ್ಣಿಟ್ಟಿದೆ.

2019ರ ಚುನಾವಣೆಯಲ್ಲಿ ಸೋತ ಕ್ಷೇತ್ರಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದು, 2ನೇ ಸ್ಥಾನದಲ್ಲಿದ್ದ ಅಥವಾ ಅತಿ ಕಡಿಮೆ ಅಂತರದಿಂದ ಸೋತ ಕ್ಷೇತ್ರಗಳ ಕಡೆ ಹೆಚ್ಚಿನ ಗಮನ ನೀಡುತ್ತಿದೆ. ಇಂಥ 160 ಸ್ಥಾನಗಳನ್ನು ಗುರುತು ಮಾಡಿರುವ ಬಿಜೆಪಿ ಈ ಕ್ಷೇತ್ರಗಳಲ್ಲಿ ಸಂಘಟನೆ, ಚುನಾವಣಾ ಸಿದ್ಧತೆಗಳನ್ನು ಈಗಾಗಲೇ ಆರಂಭ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಬಾರಿ ಬಿಜೆಪಿ 2ಕ್ಕಿಂತ ಕಡಿಮೆ ಸ್ಥಾನದಲ್ಲಿದ್ದ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿಯನ್ನು ಕೇಂದ್ರ ಸಚಿವರು ಮತ್ತು ಪಕ್ಷದ ಹಿರಿಯ ನಾಯಕರಿಗೆ ನೀಡಲಾಗಿದೆ. ರಾಜ್ಯ ಮಟ್ಟದಲ್ಲಿ ಸಂಯೋಜಕರು ಮತ್ತು ಸಹ ಸಂಚಾಲಕರನ್ನು ನೇಮಿಸಲಾಗಿದೆ. ‘ಲೋಕಸಭಾ ಪ್ರವಾಸ ಯೋಜನೆ’ ಹಮ್ಮಿಕೊಂಡು ಪಕ್ಷದ ನೆಲೆಯನ್ನು ಬಲಪಡಿಸಲು ಈ ಕ್ಷೇತ್ರಗಳಿಗೆ ಕೇಂದ್ರ ಸಚಿವರು ಮತ್ತು ಹಿರಿಯ ನಾಯಕರನ್ನು ನಿಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಬನ್ಸಾಲ್, ವಿನೋದ್ ತಾವ್ಡೆ ಮತ್ತು ತರುಣ್ ಚುಗ್ ಅವರಿಗೆ ನೀಡಿದೆ.

ಮಿಷನ್ ಸೌತ್: ದಕ್ಷಿಣ ಭಾರತದ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ ಮತ್ತು ಪುದುಚೇರಿ ಮೇಲೂ ಬಿಜೆಪಿ ನಿಗಾ ಇಟ್ಟಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಬಿಜೆಪಿ ಕರ್ನಾಟಕದಲ್ಲಿ ತನ್ನ ನೆಲೆ ಉಳಿಸಿಕೊಳ್ಳುವ ಜತೆಗೆ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಯೋಜನೆ ರೂಪಿಸಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಖಾತೆ ತೆರೆಯುವತ್ತ ವಿಶೇಷ ಗಮನ ಹರಿಸುತ್ತಿದೆ. ದಕ್ಷಿಣ ಭಾರತದ ಐದು ರಾಜ್ಯಗಳಾದ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಒಟ್ಟು 129 ಲೋಕಸಭಾ ಸ್ಥಾನಗಳಿವೆ. ಈ ಪೈಕಿ ಬಿಜೆಪಿ ಕೇವಲ 29 ಸ್ಥಾನಗಳನ್ನು ಹೊಂದಿದೆ. ಕರ್ನಾಟಕ ಒಂದರಲ್ಲೇ 25 ಸ್ಥಾನ ಹೊಂದಿದೆ. ತೆಲಂಗಾಣದಲ್ಲಿ ನಾಲ್ಕು ಸ್ಥಾನ ಗೆದ್ದಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಕರ್ನಾಟಕದಲ್ಲಿ 25 ಉಳಿಸಿಕೊಳ್ಳುವುದು ಬಿಜೆಪಿಗೆ ಸವಾಲಾಗಿದೆ.

ಸಮಾಜವಾದಿ ಪಕ್ಷಕ್ಕೆ ಶಾಕ್: ಉತ್ತರ ಪ್ರದೇಶದ ಅಖಿಲೇಶ್ ಯಾದವ್​ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಆಘಾತವಾಗಿದೆ. ಪೂರ್ವ ಉತ್ತರ ಪ್ರದೇಶದ ಒಬಿಸಿ ಸಮುದಾಯದ ಪ್ರಭಾವಿ ನಾಯಕ ಸುಹೇಲ್​ದೇವ್ ನೇತೃತ್ವದ ಭಾರತೀಯ ಸಮಾಜ ಪಕ್ಷವು ಭಾನುವಾರ ಬಿಜೆಪಿ ನೇತೃತ್ವದ ಎನ್​ಡಿಎಗೆ ಮರುಸೇರ್ಪಡೆ ಗೊಂಡಿದೆ. ಮುಂದಿನ ವರ್ಷ ನಡೆಯಲಿ ರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತ ವಾಗಿ ಮೈತ್ರಿಕೂಟಕ್ಕೆ ಇನ್ನಷ್ಟು ಬಲ ಬಂದಿದೆ. ಯೋಗಿ ಆದಿತ್ಯನಾಥ ಮೊದಲ ಬಾರಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಭಾರತೀಯ ಸಮಾಜ ಪಕ್ಷ ಎನ್​ಡಿಎ ಜತೆ ಇತ್ತು. ನಂತರ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು, ಚುನಾವಣೆಗೆ ಸ್ಪರ್ಧೆ ಮಾಡಿತ್ತು. ಎಸ್​ಬಿಎಸ್​ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್​ಭರ್ ಮತ್ತು ಸುಹೇಲ್​ದೇವ್ ಕೇಂದ್ರ ಗೃಹ ಸಚಿವ ಅಮಿತ್ ಷಾ ಜತೆಗಿನ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ಮೈತ್ರಿ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಘೊಸಿ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕ ದಾರಾ ಸಿಂಗ್ ಶನಿವಾರ ರಾಜೀನಾಮೆ ನೀಡಿದ್ದರು.

ಎಎಪಿ ಹೋರಾಟಕ್ಕೆ ಕಾಂಗ್ರೆಸ್​ ಬೆಂಬಲ: ದೆಹಲಿ ಆಡಳಿತದ ಮೇಲಿನ ಹಿಡಿತದ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ವಿರುದ್ಧ ಹೋರಾಟ ನಡೆಸುತ್ತಿರುವ ಆಮ್ ಆದ್ಮಿ ಅಭಿಯಾನಕ್ಕೆ ಬೆಂಬಲ ನೀಡಲು ಕೊನೆಗೂ ಕಾಂಗ್ರೆಸ್ ಒಪ್ಪಿಗೆ ನೀಡಿದೆ. ಬೆಂಗಳೂರಿನಲ್ಲಿ ಸೋಮವಾರ ಪ್ರತಿಪಕ್ಷಗಳ ಸಭೆ ನಡೆಯಲಿದ್ದು, ಮುನ್ನಾ ದಿನ ಕಾಂಗ್ರೆಸ್ ತನ್ನ ನಿರ್ಧಾರ ಪ್ರಕಟಿಸಿದೆ. ‘ಕೇಂದ್ರದ ಸುಗ್ರೀವಾಜ್ಞೆ ಬಗ್ಗೆ ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದೆ. ಸುಗ್ರೀವಾಜ್ಞೆಗೆ ಕಾಂಗ್ರೆಸ್ ಬೆಂಬಲ ನೀಡುವುದಿಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ. ಸುಗ್ರೀವಾಜ್ಞೆ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಬೆಂಬಲಿಸುವವರೆಗೆ ಪ್ರತಿಪಕ್ಷಗಳ ಯಾವುದೇ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಎಎಪಿ ಹೇಳಿತ್ತು. ಹೀಗಾಗಿ ಕಾಂಗ್ರೆಸ್ ತನ್ನ ನಿರ್ಧಾರ ಪ್ರಕಟಿಸಿದೆ. ಈ ಬೆಳವಣಿಗೆಯಿಂದ ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ದೆಹಲಿ ಸಿಎಂ ಕೆಜ್ರಿವಾಲ್, ಪಂಜಾಬ್ ಸಿಎಂ ಭಗವಂತ ಮಾನ್ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಅಜಿತ್ - ಶರದ್ ಭೇಟಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ, ಎನ್​ಸಿಪಿಯ ಅಜಿತ್ ಪವಾರ್ ಮತ್ತು ಅವರ ಬೆಂಬಲಿತ ಕೆಲ ಸಚಿವರು ಭಾನುವಾರ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿ ಮಾಡಿ, ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ. ನಮ್ಮ ಮಾತುಗಳನ್ನು ಆಲಿಸಿದ ಶರದ್ ಪವಾರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಅಜಿತ್ ಬಣದ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ. ಪಕ್ಷದ ವಿರುದ್ಧ ಬಂಡಾಯವೆದ್ದು ಶಿವಸೇನೆ-ಬಿಜೆಪಿ ಸರ್ಕಾರಕ್ಕೆ ಸೇರ್ಪಡೆಯಾದ ನಂತರ ಅಜಿತ್ ಪವಾರ್ ಮತ್ತು ಶರದ್ ಪವಾರ್ ನಡುವಿನ ಮೊದಲ ಭೇಟಿ ಇದು. ‘ಶರದ್ ಪವಾರ್ ನಮಗೆ ಆರಾಧ್ಯ ದೈವವಾಗಿದ್ದು, ಅವರ ಆಶೀರ್ವಾದ ಪಡೆಯಲು ನಾವು ಬಂದಿದ್ದೆವು. ಎನ್​ಸಿಪಿಯನ್ನು ಒಗ್ಗೂಡಿಸಲು ವಿನಂತಿಸಿದ್ದೇವೆ’ ಎಂದು ಪ್ರಫುಲ್ ಹೇಳಿದ್ದಾರೆ.

  • ಕರ್ನಾಟಕದಲ್ಲಿ 25 ಕ್ಷೇತ್ರ ಉಳಿಸಿಕೊಳ್ಳುವ ಸವಾಲು
  • ಭದ್ರಕೋಟೆ ಜತೆಗೆ ಪ್ರತಿಪಕ್ಷ ನಾಯಕರ ಕ್ಷೇತ್ರವನ್ನೂ ಗೆಲ್ಲುವ ಗುರಿ
  • ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತ ಕ್ಷೇತ್ರಗಳಿಗೆ ಆದ್ಯತೆ
  • 160 ಸ್ಥಾನಗಳಲ್ಲಿ ಈಗಾಗಲೇ ತಯಾರಿ ಆರಂಭ
  • ನೆಲೆ ಇಲ್ಲದ ಕ್ಷೇತ್ರಗಳಿಗೆ ಸಚಿವರು, ಹಿರಿಯ ನಾಯಕರ ನಿಯೋಜನೆ
  • ಉಸ್ತುವಾರಿಗಾಗಿ ಮೂವರು ಪ್ರಧಾನ ಕಾರ್ಯದರ್ಶಿಗಳ ನೇಮಕ
  • ಲೋಕಸಭಾ ಪ್ರವಾಸ ಯೋಜನೆ’ ಸಧ್ಯದಲ್ಲೇ ಆರಂಭ
  • ದಕ್ಷಿಣ ಭಾರತದಲ್ಲಿ ನೆಲೆ ಕಾಣಲು ವಿಶೇಷ ಯತ್ನ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net