

ಬೆಂಗಳೂರು: ಕೇಂದ್ರ ಸರ್ಕಾರದ ಸಲಹೆಯಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕ ಸೇರಿ ಒಟ್ಟು ಆರು ವಿಧೇಯಕಗಳು ಬುಧವಾರ ವಿಧಾನಸಭೆಯಲ್ಲಿ ಮಂಡನೆಯಾಗಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ 2023ನೇ ಸಾಲಿನ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ತಿದ್ದುಪಡಿ ವಿಧೇಯಕ ಹಾಗೂ ಸರಕು-ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಪ್ರಿಯಾಂಕ್ ಖರ್ಗೆ, ಕಾನೂನು ಸಚಿವ ಎಚ್.ಕೆ.ಪಾಟೀಲ್ ಪರವಾಗಿ ವಿಧಾನಮಂಡಲ (ಅನರ್ಹತಾ ನಿವಾರಣಾ) ತಿದ್ದುಪಡಿ ವಿಧೇಯಕ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರವಾಗಿ ಅಗ್ನಿಶಾಮಕ ತಿದ್ದುಪಡಿ ವಿಧೇಯಕ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರವಾಗಿ ರಾಜ್ಯ ರಸ್ತೆ ಸುರಕ್ಷತಾ ಪ್ರಕಾರ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು.
ಕಾಯ್ದೆ ಉದ್ದೇಶ ವಿಫಲ: ಖಾಸಗಿ ವ್ಯಾಪಾರಿಗಳು ರೈತರಿಂದ ನೇರವಾಗಿ ಬೆಳೆ ಖರೀದಿಸಲು ಅವಕಾಶ ನೀಡುವ, ಎಪಿಎಂಸಿಯ ಚೌಕಟ್ಟಿನ ಹೊರಗೂ ವ್ಯವಹಾರ ನಡೆಸಬಹುದಾದ ಕಾಯ್ದೆಯನ್ನು ಕೇಂದ್ರ ಸರ್ಕಾರ ಮಂಡಿಸಿತ್ತು. ಅದೇ ಪ್ರಕಾರ ರಾಜ್ಯದಲ್ಲೂ ಜಾರಿ ಮಾಡಲಾಗಿತ್ತು. ಆದರೆ, ದೇಶದ ಕೆಲವು ಕಡೆಗಳಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಈ ವಿಧೇಯಕವನ್ನು ಕೇಂದ್ರ ಹಿಂಪಡೆದಿತ್ತು. ರಾಜ್ಯ ಸರ್ಕಾರ ಮಾತ್ರ ಹಿಂಪಡೆದಿರಲಿಲ್ಲ. ಇದೀಗ ಎಪಿಎಂಪಿ ಕಾಯ್ದೆಗಳ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ.
ಪ್ರಸ್ತಾವನೆಯಲ್ಲೇನಿದೆ?: ಮಾರುಕಟ್ಟೆ ಪ್ರಾಂಗಣಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣಕ್ಕೆ ಯಾವುದೇ ವ್ಯವಸ್ಥೆ ಇಲ್ಲದೆ ರೈತರು ಶೋಷಣೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಸರ್ಕಾರಕ್ಕೆ ಬರಬೇಕಾದ ತೆರಿಗೆ, ಉಪಕರಗಳ ಸೋರಿಕೆಗೆ ಅವಕಾಶವಾಗಲಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಮಾರುಕಟ್ಟೆಯಲ್ಲಿ ಆನ್ಲೈನ್ (ಏಕೀಕೃತ ವೇದಿಕೆ) ಮೂಲಕ ಸಗಟು ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಇದರಿಂದ ರೈತರಿಗೆ ನ್ಯಾಯೋಚಿತ ಮತ್ತು ಸ್ಪರ್ಧಾತ್ಮಕ ಬೆಲೆಯ ಪ್ರಯೋಜನ ದೊರೆಯಲು ಅವಕಾಶ ಇರಲಿದೆ. ಪ್ರಸ್ತುತ ಮಾರುಕಟ್ಟೆಯ ಹೊರಗೆ ಆನ್ಲೈನ್ ವ್ಯವಸ್ಥೆ ಇಲ್ಲದೆ ಇರುವುದರಿಂದ ರೈತರು ಬೆಳೆದ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಮತ್ತು ನ್ಯಾಯೋಚಿತ ಬೆಲೆ ಸಿಗುವ ಸಾಧ್ಯತೆ ಕಡಿಮೆಯಾಗಿರುತ್ತದೆ ಎಂದು ಸರ್ಕಾರ ವಾದಿಸಿದೆ.
ಮಾರುಕಟ್ಟೆಯ ಪ್ರಾಂಗಣದ ಒಳಗೆ ನಡೆಯುವ ವಹಿವಾಟಿಗೆ ಉತ್ಪನ್ನದ ತೂಕ, ಹಣದ ಪಾವತಿ, ಇತ್ಯಾದಿಗೆ ಸಂಬಂಧಿಸಿದಂತೆ ರೈತರು ಮತ್ತು ಮಾರುಕಟ್ಟೆ ಕಾರ್ಯನಿರ್ವಾಹಕರ ನಡುವೆ ಉದ್ಭವಿಸುವ ವಿವಾದಗಳನ್ನು ಇತ್ಯರ್ಥಪಡಿಸಲು ಅವಕಾಶ ಇರಲಿದೆ. ಮಾರುಕಟ್ಟೆ ಹೊರಗೆ ನಡೆಯುವ ವ್ಯವಹಾರಗಳಿಗೆ ಸಂಬಂಧಿಸಿದಂತೆ ಇತ್ಯರ್ಥ ವ್ಯವಸ್ಥೆ ಇರುವುದಿಲ್ಲ. ಹಾಗೆಯೇ ರೈತರಿಗೆ ದರಗಳ ಬಗ್ಗೆ ತಿಳಿದಿರುವುದಿಲ್ಲ. ಇದರಿಂದ ಸ್ಪರ್ಧಾತ್ಮಕ ಬೆಲೆ ಪಡೆಯುವಲ್ಲಿ ವಿಫಲರಾಗುತ್ತಾರೆ ಎಂಬುದು ಸರ್ಕಾರ ಅಭಿಪ್ರಾಯಪಟ್ಟಿದೆ.
ಎಪಿಎಂಸಿಯಲ್ಲಿ ಸೃಜಿಸಲಾಗಿದ್ದ ಮೂಲಸೌಕರ್ಯ ಬಳಕೆಯಾಗದೇ ಇದ್ದುದರಿಂದ ಕಾಲಕ್ರಮೇಣ ನಿರುಪಯುಕ್ತವಾಗುತ್ತವೆ, ಸರಿಸುಮಾರು ಒಂದು ಲಕ್ಷ ಮಂದಿ ಮಾರುಕಟ್ಟೆ ಸಮಿತಿಯಿಂದ ಲೈಸೆನ್ಸ್ ಪಡೆದು ಕಾರ್ಯನಿರ್ವಹಿಸುತ್ತಿದ್ದರು, ಮಾರಾಟಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ನಿರ್ವಹಿಸುತ್ತಿದ್ದರು. ಹಮಾಲರು, ತೂಕ ಮಾಡುವವರು, ಚಕ್ಕಡಿಯವರು, ವರ್ತಕರ- ದಲ್ಲಾಳಿಗಳಲ್ಲಿ ಕಾರ್ಯನಿರ್ವಹಿಸುವ ಸಹಾಯಕರ ಜೀವನೋಪಾಯ ಕಷ್ಟಸಾಧ್ಯವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಒಟ್ಟಾರೆ ಮಾರುಕಟ್ಟೆ ಪ್ರಾಂಗಣದ ಹೊರಗೆ ವ್ಯಾಪಾರ ವಹಿವಾಟಿಗೆ ಅನುಮತಿಸಿ, ಈ ಹಿಂದೆ ತಿದ್ದುಪಡಿ ತರುವ ಮೂಲಕ ರೈತರ ಉತ್ಪನ್ನದ ಬೆಲೆ ಹಾಗೂ ಆದಾಯದಲ್ಲಿ ಹೆಚ್ಚಳವಾಗುವುದೆಂಬ ನಿರೀಕ್ಷೆಗಳು ವಿಫಲವಾಗಿದೆ ಎಂಬುದು ಗಮನಕ್ಕೆ ಬಂದಿದೆ ಎಂದು ಸರ್ಕಾರ ವಾದಿಸಿದೆ.
ಈ ಎಲ್ಲ ಕಾರಣಗಳಿಂದ ಎಪಿಎಂಸಿ ಹೊರಗೆ ನಡೆಯುವ ವಹಿವಾಟಿನ ಮೇಲೆ ಹಿಂದಿನಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ನಿಯಂತ್ರಣ ಹೊಂದುವುದು ರೈತ ಬೆಳೆಗಾರರ ಹಿತದೃಷ್ಟಿಯಿಂದ ಮುಖ್ಯ ಎಂದು ಸರ್ಕಾರ ತಿಳಿಸಿದ್ದು ತಿದ್ದುಪಡಿ ವಿಧೇಯಕ ಮಂಡಿಸಿದೆ.
ಎತ್ತರದ ಕಟ್ಟಡಗಳಿಗೆ ಇನ್ನು ಮುಂದೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲು ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ವಿಧೇಯಕ-2023ನ್ನು ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ. ವಿಧೇಯಕದ ಉದ್ದೇಶ ಪ್ರಸ್ತಾಪಿಸಿರುವ ಸರ್ಕಾರ, ರಾಷ್ಟ್ರೀಯ ಕಟ್ಟಡ ಸಂಹಿತೆ 2016 ರಲ್ಲಿ ಇರುವಂತೆ 21 ಮೀಟರ್ಗೂ ಎತ್ತರದ ಕಟ್ಟಡಗಳನ್ನು ನಿರ್ವಿುಸುವ ಮುನ್ನ ನಿಗದಿತ ಶುಲ್ಕ ಪಾವತಿಸಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯಬೇಕು ಎಂದು ಹೇಳಿದೆ. ಬೆಂಕಿ ನಂದಿಸುವ ಸಂದರ್ಭದಲ್ಲಿ ಸ್ಥಳದಲ್ಲಿರುವವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವುದು ಹಾಗೂ ಅಪಾಯ ಉಂಟು ಮಾಡುವ ಯಾವುದೇ ವಸ್ತುಗಳನ್ನು ಸ್ಥಳಾಂತರಿಸಲು ಅಗ್ನಿಶಾಮಕ ದಳದ ಅಧಿಕಾರಿಗೆ ಅಧಿಕಾರ ಕೊಡಲಾಗುವುದು, ನಿರಾಕ್ಷೇಪಣಾ ಪತ್ರ ಪಡೆಯುವಿಕೆ, ಶುಲ್ಕ ನಿಗದಿ ಸಂಬಂಧ ಸರ್ಕಾರವೇ ನಿಯಮ ರೂಪಿಸಲಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ರಾಜ್ಯದಲ್ಲಿ 6021 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆ ಮಂಜೂರಾಗಿದ್ದು, 5351 ಹುದ್ದೆ ಭರ್ತಿಯಾಗಿದೆ. ಇನ್ನೂ 660 ಹುದ್ದೆ ಖಾಲಿ ಇದೆ. ಈ ಪೈಕಿ 385 ಹುದ್ದೆಗಳನ್ನು ನೇರ ನೇಮಕ ಮಾಡಿಕೊಳ್ಳಲು ಅವಕಾಶವಿದ್ದು, ಪ್ರಸ್ತುತ 150 ಮಂದಿಯನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ತಿಳಿಸಿದರು. ಶಾಸಕ ಬಸನಗೌಡ ದದ್ದಲ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಚಿವರು ಉತ್ತರ ನೀಡಿದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಹುದ್ದೆಯಲ್ಲಿ 2194 ಮಂಜೂರಾಗಿದ್ದು, 1590 ಭರ್ತಿಯಾಗಿದೆ, 604 ಖಾಲಿ ಇದೆ. ಗ್ರೇಡ್-2 ಕಾರ್ಯದರ್ಶಿ ಹುದ್ದೆ 3827 ಮಂಜೂರಾಗಿದ್ದು, 719 ಖಾಲಿ ಇದೆ. ದ್ವಿತೀರ್ಯ ದರ್ಜೆ ಲೆಕ್ಕ ಸಹಾಯಕ ಹುದ್ದೆ 345 ಖಾಲಿ ಇದೆ ಎಂದು ಸರ್ಕಾರ ಉತ್ತರ ನೀಡಿದೆ.
ದಂಡದ ಕುಣಿಕೆ: ಎಪಿಎಂಸಿ ವಿಧೇಯಕ ಶಾಸನ ಸಭೆಯಿಂದ ಅನುಮೋದನೆಗೊಂಡ ಬಳಿಕ ಕಾಯ್ದೆ ರೂಪ ಪಡೆಯುತ್ತಿದ್ದಂತೆ ನಿಯಮಗಳು ಲಾಗು ಆಗುತ್ತದೆ. ಕೃಷಿ ಉತ್ಪನ್ನದ ಖರೀದಿಗಾಗಿ ಅಥವಾ ಮಾರಾಟಕ್ಕಾಗಿ ಬಳಸುವ ಯಾವನೇ ವ್ಯಕ್ತಿಯು ಅಪರಾಧ ನಿರ್ಣಿತನಾದ ಮೇಲೆ ಶಿಕ್ಷೆ ವಿಧಿಸಲು ಅವಕಾಶವಿದೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರರ್ಶಕತೆ (ತಿದ್ದುಪಡಿ) ವಿಧೇಯಕ-2023ನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಈ ಹಿಂದೆ 50 ಲಕ್ಷ ರೂ.ವರೆಗಿನ ಕಾಮಗಾರಿಗಳಿಗೆ ಇದ್ದ 4ಜಿ ವಿನಾಯಿತಿಯನ್ನು 1 ಕೋಟಿ ರೂ.ವರೆಗಿನ ಕಾಮಗಾರಿಗಳಿಗೂ ನೀಡಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಈ ಕಾಮಗಾರಿಗಳಿಗೆ ಟೆಂಡರ್ ಕರೆಯುವ ಅವಶ್ಯಕತೆಯೂ ಇರುವುದಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿ ಅನುಷ್ಠಾನಕ್ಕೆ ತರಲಾಗಿತ್ತು. ಕಳೆದ ಸಂಪುಟ ಸಭೆಯಲ್ಲಿ ವಿಧೇಯಕ ತರಲು ನಿರ್ಣಯಿಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಸಲಹೆಗಾರರಾಗಿ ನೇಮಕಗೊಂಡಿರುವ ಎ.ಎಸ್. ಪೊನ್ನಣ್ಣ ಅವರನ್ನು ಲಾಭದಾಯಕ ಹುದ್ದೆಯ ತೂಗುಗತ್ತಿಯಿಂದ ಪಾರು ಮಾಡಲು ಕಾಯ್ದೆ ರೂಪಿಸಲು ಸರ್ಕಾರ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಪೊನ್ನಣ್ಣರನ್ನು ಸಿಎಂ ಕಾನೂನು ಸಲಹೆಗಾರರಾಗಿ ನೇಮಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.
ಈ ಹುದ್ದೆಯ ಸೃಜನೆ ಹಾಗೂ ಇದಕ್ಕಾಗಿ ಕಚೇರಿ ಸ್ಥಾಪಿಸಲು ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) ಅಧಿನಿಯಮಕ್ಕೆ ತಿದ್ದುಪಡಿ ಮಾಡಬೇಕಿತ್ತು. ಹೀಗಾಗಿ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ವಿಧೇಯಕ-2023ನ್ನು ಮಂಡಿಸಿದ್ದು, ಸ್ಪೀಕರ್, ಸಭಾಪತಿ, ಉಪಸಭಾಧ್ಯಕ್ಷ, ಉಪಸಭಾಪತಿ, ಸಚಿವರು, ಸಂಸದೀಯ ಕಾರ್ಯದರ್ಶಿ, ವಿರೋಧ ಪಕ್ಷದ ನಾಯಕ, ಸರ್ಕಾರದ ಮುಖ್ಯ ಸಚೇತಕ, ನಗರಸಭೆ, ಜಿಪಂ, ತಾಪಂ ಅಧ್ಯಕ್ಷ, ಉಪಾಧ್ಯಕ್ಷ, ನಗರ ಪಾಲಿಕೆ ಮೇಯರ್, ಉಪಮೆಯರ್, ಸಿಎಂ ರಾಜಕೀಯ ಕಾರ್ಯದರ್ಶಿಗೆ ಅನ್ವಯಿಸುವಂತೆ ಅನರ್ಹಗೊಳಿಸದಿರುವ ನಿಯಮಗಳಿಗೂ ಕಾನೂನು ಸಲಹೆಗಾರರಿಗೂ ಅನ್ವಯಿಸುವ ಪ್ರಸ್ತಾವನೆಯೂ ತಿದ್ದುಪಡಿ ವಿಧೇಯಕದಲ್ಲಿದೆ.
ಹೊಸ ಪಂಚಾಯಿತಿ ಸದ್ಯಕ್ಕಿಲ್ಲ: ರಾಜ್ಯದಲ್ಲಿ ಹೊಸ ಗ್ರಾಮ ಪಂಚಾಯಿತಿ ರಚನೆ ಸದ್ಯಕ್ಕಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಐಹೊಳೆ ದುರ್ಯೋಧನ ಮಹಾಲಿಂಗಪ್ಪ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಹೊಸ ಪಂಚಾಯಿತಿ ರಚನೆಗೆ ಸಾಕಷ್ಟು ಬೇಡಿಕೆ ಇದೆ. ಆದರೆ, ಹೊಸ ಜನಗಣತಿ ವರದಿ ಬರುವವರೆಗೂ ಹೊಸ ಗ್ರಾಮ ಪಂಚಾಯಿತಿ ರಚನೆ ಸೂಕ್ತವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ ಎಂದು ಮಾಹಿತಿ ನೀಡಿದರು.
ಅನ್ನಭಾಗ್ಯ ಹಣ ಬಿಡುಗಡೆ ತಯಾರಿ: ಕೇಂದ್ರ ಸರ್ಕಾರ ನೀಡುವ ಐದು ಕೆಜಿ ಅಕ್ಕಿ ಹೊರತಾಗಿ ರಾಜ್ಯ ಸರ್ಕಾರದ ಕಡೆಯಿಂದ ಐದು ಕೆಜಿ ಅಕ್ಕಿಯನ್ನು ನೀಡುವ ಅನ್ನಭಾಗ್ಯ ಯೋಜನೆಗೆ ಸೋಮವಾರ ವಿಧ್ಯುಕ್ತ ಚಾಲನೆ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಬಿಪಿಎಲ್ ಕಾರ್ಡ್ದಾರರಿಗೆ ತಲಾ ಐದು ಕೆಜಿ ಅಕ್ಕಿ ಹೊಂದಿಸಲು ಸಾಧ್ಯವಾಗದ ಕಾರಣ ಐದು ಕೆಜಿ ಅಕ್ಕಿಯ ಬಾಬ್ತು ಹಣವನ್ನು ಕಾರ್ಡ್ನ ಯಜಮಾನರ ಖಾತೆಗೆ ಜಮಾ ಮಾಡಲು ನಿರ್ಧರಿಸಿದ್ದು, ಜು.10ರಂದು ಫಲಾನುಭವಿಗಳ ಸಮಾವೇಶ ಮಾಡಿ ಸಂವಾದ ನಡೆಸಿ, ಆ ವೇದಿಕೆ ಮೂಲಕವೇ ಏಕಕಾಲಕ್ಕೆ ಖಾತೆದಾರರಿಗೆ ಹಣ ಜಮಾ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ವಿಧಾನಸಭೆ ಕಲಾಪದಲ್ಲಿ ಸಚಿವರು, ಶಾಸಕರ ಗೈರಿನ ಹಿನ್ನೆಲೆಯಲ್ಲಿ ಸದನವನ್ನು ಕೆಲ ಕಾಲ ಮುಂದೂಡುವಂತೆ ಆಡಳಿತ ಪಕ್ಷದ ಸದಸ್ಯರೇ ಆಗ್ರಹಿಸಿದ ಘಟನೆ ನಡೆಯಿತು. ಬೇಳೂರು ಗೋಪಾಲಕೃಷ್ಣ ಮಾತನಾಡುವ ವೇಳೆ ಬಿಜೆಪಿಯ ಆರ್.ಅಶೋಕ್, ಸುನೀಲ್ ಕುಮಾರ್ ಸದನದಲ್ಲಿ ಸಚಿವರೇ ಇಲ್ಲ. ಎಲ್ಲಿ ಹೋಗಿದ್ದಾರೆ. ಅಧಿಕಾರಿಗಳೂ ಇಲ್ಲ. ಎಲ್ಲರೂ ವರ್ಗಾವಣೆ ದಂಧೆಯಲ್ಲಿದ್ದಾರಾ? ಕೆಲ ಕಾಲ ಸದನ ಮುಂದೂಡಿ. ನಾವು 2.30ಕ್ಕೆ ಸರಿಯಾಗಿ ಬಂದಿದ್ದೇವೆ. 135 ಸ್ಥಾನ ಗೆದ್ದವರು ಎಲ್ಲಿ ಎಂದು ಕಿಚಾಯಿಸಿದರು. ಅದಕ್ಕೆ ದನಿಗೂಡಿಸಿದ ಕಾಂಗ್ರೆಸ್ನ ಬಿ.ಆರ್.ಪಾಟೀಲ್, ಇದು ಸದನಕ್ಕೆ ಶೋಭೆ ಅಲ್ಲ, 10 ನಿಮಿಷ ಸದನ ಮುಂದಕ್ಕೆ ಹಾಕಿ ಎಂದು ಸ್ಪೀಕರ್ಗೆ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಗೈರನ್ನು ಯಾರೂ ಸಮರ್ಥಿಸಿಕೊಳ್ಳುವುದು ಬೇಡ ಎಂದರಲ್ಲದೆ, ಡೆಪ್ಯೂಟಿ ಸ್ಪೀಕರ್ ಚುನಾವಣೆ ಸಂಬಂಧ ಚರ್ಚೆಯಲ್ಲಿದ್ದಾರೆ ಬರುತ್ತಾರೆ ಎಂದು ಸಮಜಾಯಿಶಿ ನೀಡಿದರು.
ಹಾಸ್ಟೆಲ್ಗಳಿಗೆ ಸೌಕರ್ಯ: ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ ಹಾಸ್ಟೆಲ್ ಪ್ರವೇಶಕ್ಕೆ ಬೇಡಿಕೆ ಹೆಚ್ಚಿದ್ದು, ಹಾಲಿ ಇರುವ ಹಾಸ್ಟೆಲ್ಗಳಲ್ಲಿ ಮೂಲಸೌಕರ್ಯ ಹೆಚ್ಚಿಸಿ ಪ್ರವೇಶ ಸಂಖ್ಯೆ ಹೆಚ್ಚಿಸಲು ಸಾಧ್ಯವಿದ್ದರೆ ಕ್ರಮಕೈಗೊಳ್ಳಲಾಗುತ್ತದೆ, ಅವಕಾಶ ಸಿಗದೇ ಇರುವವರಿಗೆ ವಿದ್ಯಾಸಿರಿ ಯೋಜನೆಯಡಿ ಮಾಸಿಕ 1500 ರೂ. ನೀಡಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಿಂದುಳಿದ ವರ್ಗಗಳ ಹಾಸ್ಟೆಲ್ ಪ್ರವೇಶದ ಬಗ್ಗೆ ಸರ್ಕಾರದ ಗಮನ ಸೆಳೆದರು. ಬಳಿಕ ಉತ್ತರ ನೀಡಿದ ಸಚಿವರು, ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಸ್ಥಳಾವಕಾಶ ಲಭ್ಯ ಇರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಸಂಖ್ಯಾಬಲವನ್ನು ಶೇ.25 ಹೆಚ್ಚಳ ಮಾಡಿ ಆದೇಶಿಸಲಾಗಿದೆ ಎಂದರು.