ಬರ ಪರಿಸ್ಥಿತಿ ಅಧ್ಯಯನಕ್ಕೆ ಬಿಜೆಪಿ 17 ತಂಡಗಳು ರಾಜ್ಯ ಪ್ರವಾಸ

ravikumar
Published on

ಬೆಂಗಳೂರು: ಕೇಂದ್ರ ಸರ್ಕಾರದ ನೆರವು ಬಂದಿಲ್ಲವೆಂದು ಕಾಲಹರಣ ಮಾಡದೆ, ಸಮರೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂತ್ರ ಪ್ರಯೋಗಕ್ಕೆ ಪ್ರತಿಪಕ್ಷ ಬಿಜೆಪಿ ಮುಂದಾಗಿದೆ.

ನದಿಗಳು ಬತ್ತಿವೆ, ಜಲಾಶಯಗಳ ನೀರಿನಮಟ್ಟ ಕುಸಿಯಲಾರಂಭಿಸಿದೆ. ಉಳಿದ ಬೆಳೆ ರಕ್ಷಿಸಿಕೊಳ್ಳಲು ಕರೆಂಟ್ ಇಲ್ಲ, ಕುಡಿಯಲು ನೀರಿಲ್ಲ, ಕೃಷಿ ಕೂಲಿಕಾರರ ಕೈಗೆ ಕೆಲಸವಿಲ್ಲ. ಬೆಲೆಗಳು ದುಬಾರಿಯಾಗಿವೆ ಎಂಬ ವಿಷಯಗಳನ್ನು ಮುಂದಿಟ್ಟು ಜನರಿಗೆ ಧ್ವನಿಯಾಗಲು ಸಜ್ಜಾಗಿದೆ.

ಬರ ಪರಿಸ್ಥಿತಿ ಅಧ್ಯಯನಕ್ಕೆ ಪಕ್ಷದ ರಾಜ್ಯ ನಾಯಕರನ್ನು ಒಳಗೊಂಡ 17 ತಂಡಗಳು ರಚನೆಯಾಗಿವೆ. ಪ್ರತಿಯೊಂದು ಎರಡು ಜಿಲ್ಲೆಗಳಂತೆ ರಾಜ್ಯದ 33 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾಹಿತಿ ನೀಡಿದ್ದಾರೆ.

ಮಾಜಿ ಸಿಎಂ.ಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಮಾಜಿ ಸಚಿವರು, ಸಂಸದ-ಶಾಸಕರು, ಮಾಜಿ ಶಾಸಕರು, ಪಕ್ಷದ ರಾಜ್ಯ ಪದಾಧಿಕಾರಿಗಳು ಈ ತಂಡಗಳಲ್ಲಿದ್ದಾರೆ. ಅಧ್ಯಯನ ಕಾಲಕ್ಕೆ ಬೆಳೆ ನಷ್ಟ, ರೈತರ ಸಂಕಷ್ಟ, ಕೃಷಿ ಕೂಲಿಕಾರರ ತಾಪತ್ರಯ, ಜನ-ಸಾಮಾನ್ಯರ ಬವಣೆ ಆಲಿಸಲಿದೆ. ರಾಜ್ಯ ಸರ್ಕಾರ ಪರಿಹಾರ ಕ್ರಮಗಳನ್ನು ಪರಾಮರ್ಶಿಸಿ, ವಿಸ್ತೃತ ಮಾಹಿತಿ ಸಂಗ್ರಹಿಸಲಿದೆ.

ನ.3 ರಿಂದ 10ರವರೆಗೆ ಪ್ರವಾಸ

ಪಕ್ಷದ ಬರ ಅಧ್ಯಯನ ತಂಡಗಳು ನ.3 ರಿಂದ 10ರವರೆಗೆ ರಾಜ್ಯ ಪ್ರವಾಸ ಕೈಗೊಳ್ಳಲಿವೆ. ಸರ್ಕಾರ ಹೇಳಿಕೆಯಲ್ಲಿ ಕಾಲಯಾಪನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಜನರ ಕಷ್ಟ-ಕಾರ್ಪಣ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಬರ ಪರಿಸ್ಥಿತಿಯಿದ್ದರೂ ಕಲೆಕ್ಷನ್ ನಿಲ್ಲಿಸಿಲ್ಲ. ಎಟಿಎಂ ಸರ್ಕಾರದ ವರ್ಗಾವಣೆ ದಂಧೆ ನಿರಂತರವಾಗಿದೆ ಎಂದು ಟೀಕಿಸಿದರು.

ಸಾಕ್ಷಾತ್ ಸಮೀಕ್ಷೆ ನಂತರ ವರದಿ ಸಿದ್ಧಪಡಿಸಿ ಬಿಡುಗಡೆ ಮಾಡಲಾಗುವುದು. ಸರ್ಕಾರಕ್ಕೂ ವರದಿ ಸಲ್ಲಿಸಿ, ವಿಧಾನ ಮಂಡಲದ ವಿಶೇಷ ಅಧಿವೇಶನಕ್ಕೆ ಸಮಯ ನಿಗದಿಪಡಿಸಲು ಒತ್ತಾಯಿಸುತ್ತೇವೆ ಎಂದರು.

ಕೊಳವೆ ಬಾವಿಗಳು ಬತ್ತಿ ಹೋಗಿದ್ದರೆ, ಕೆಲವೆಡೆ ನೀರಿದ್ದರೂ ಸರಬರಾಜಿಗೆ ವಿದ್ಯುತ್ ಇಲ್ಲ. ಅನೇಕ ಕಡೆ ವಾಹನಗಳ ಮೂಲಕ ನೀರು ಪೂರೈಸಲಾಗುತ್ತಿದೆ. ದನ-ಕರಗಳುಗಳಿವೆ ಮೇವಿನ ಅಭಾವದ ದೂರುಗಳ ಹಿನ್ನೆಲೆಯಲ್ಲಿ ಗೋಶಾಲೆಗಳಿಗೆ ತಂಡಗಳು ಭೇಟಿ ನೀಡಲಿವೆ ಎಂದು ಎನ್.ರವಿಕುಮಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net