ಕಹಿಯಾದ ಸಕ್ಕರೆ: ಏಕಾಏಕಿ ಬೆಲೆ ಏರಿಕೆ ಹಿಂದಿನ ಅಸಲಿ ಕಾರಣಗಳೇನು?

Sugar Price Hike > ಏಕಾಏಕಿ ಬೆಲೆ ಏರಿಕೆ ಹಿಂದಿನ ಅಸಲಿ ಕಾರಣಗಳೇನು?
Sugar Price Hike > ಏಕಾಏಕಿ ಬೆಲೆ ಏರಿಕೆ ಹಿಂದಿನ ಅಸಲಿ ಕಾರಣಗಳೇನು?
Published on

ಒಂದೆಡೆ ಹಬ್ಬಗಳ ಸಂಭ್ರಮ. ಮತ್ತೊಂದೆಡೆ ಸಕ್ಕರೆ ಬೆಲೆ ಏರಿಕೆಯ ಕಹಿ. ಕಳೆದ ಕೆಲ ವಾರಗಳಲ್ಲಿ ದೇಶದಲ್ಲಿ ಸಕ್ಕರೆ ದರ ದಿಢೀರ್​ ಏರಿಕೆಯಾಗಿದೆ. ಜುಲೈ 20ರಂದು ಕಿಲೋಗೆ 48.18 ರೂ. ಇದ್ದ ಸರಾಸರಿ ದರ ಆ. 20ಕ್ಕೆ 55.70 ರೂ.ಗೆ ಏರಿದೆ. ಸಕ್ಕರೆ ಉತ್ಪಾದನೆ ಕಡಿಮೆಯಾಗಿರುವುದು, ಹವಾಮಾನ ವೈಪರೀತ್ಯ, ಹಬ್ಬಗಳ ಮುನ್ನ ಬೇಡಿಕೆ ಹೆಚ್ಚಳ, ಅಕ್ರಮ ದಾಸ್ತಾನು ಸಂಗ್ರಹ, ಜಾಗತಿಕ ಪೂರೈಕೆ ಸಮಸ್ಯೆ, ಎಥನಾಲ್​ ಉತ್ಪಾದನೆ - ಇವುಗಳಲ್ಲಿ ದರ ಏರಿಕೆಗೆ ನಿಜವಾದ ಕಾರಣ ಯಾವುದು? ದರ ಇಳಿಸಲು ಕೇಂದ್ರ ಸರ್ಕಾರ ಏನು ಕ್ರಮ ಕೈಗೊಳ್ಳುತ್ತಿದೆ? ಯಾವಾಗ ದರ ಇಳಿಯುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಸಕ್ಕರೆ ಎಲ್ಲರಿಗೂ ಅಗತ್ಯವಿರುವ ಅತ್ಯಂತ ಸಾಮಾನ್ಯ ಪದಾರ್ಥ. ಚಹಾ, ಕಾಫಿಯಿಂದ ಹಿಡಿದು ಸಿಹಿತಿಂಡಿ, ಬಿಸ್ಕತ್​, ತಂಪುಪಾನೀಯ, ಬೇಕರಿ ಉತ್ಪನ್ನಗಳವರೆಗೆ ಎಲ್ಲದರಲ್ಲೂ ಇದರ ಬಳಕೆ ಇದೆ. ಹೀಗಾಗಿ ಸಕ್ಕರೆಯ ಬೆಲೆಯಲ್ಲಿ ಸಣ್ಣ ಬದಲಾವಣೆಯಾದರೂ ಅದರ ಪರಿಣಾಮ ವ್ಯಾಪಕವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸಗಟು ಮಾರುಕಟ್ಟೆಗಳಲ್ಲಿ ಸಕ್ಕರೆ ದರ ದಾಖಲೆ ಮಟ್ಟ ತಲುಪಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲೂ ಅದರ ಪರಿಣಾಮ ಕಾಣಿಸುತ್ತಿದೆ. ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ಕಿಲೋ ಸಕ್ಕರೆಯ ಸರಾಸರಿ ಚಿಲ್ಲರೆ ದರ ಜು. 20ರಂದು 48.18 ರೂ. ಇದ್ದದ್ದು ಆ. 20ರಂದು 55.70 ರೂ.ಗೆ ಏರಿದೆ. ಅಂದರೆ ಒಂದೇ ತಿಂಗಳಲ್ಲಿ ಶೇ. 16ರಷ್ಟು ಏರಿಕೆ. ಇದೇ ಅವಧಿಯಲ್ಲಿ ಇತರ ಕೆಲವೆಡೆ ದರ 70 ರೂ.ಗೆ ಏರಿದೆ ಎನ್ನಲಾಗುತ್ತಿದೆ. ಹಾಗಾದರೆ ದೇಶದಲ್ಲಿ ಸಕ್ಕರೆ ಅಭಾವ ಉಂಟಾಗಿದೆಯೇ? ಇದೇ ಈಗ ಉದ್ಭವಿಸಿರುವ ಪ್ರಮುಖ ಪ್ರಶ್ನೆ. ಉತ್ತರ ಸ್ವಲ್ಪ ಸಂಕೀರ್ಣ. ದೇಶದಲ್ಲಿ ಹೊಸ ಕಬ್ಬಿನ ಹಂಗಾಮು ಆರಂಭವಾಗುವ ಮೊದಲು ಇರುವ ಹಳೇ ದಾಸ್ತಾನು, ನಿರೀಕ್ಷಿತ ಉತ್ಪಾದನೆ, ಕಾರ್ಖಾನೆಗಳಿಂದ ಮಾರುಕಟ್ಟೆಗೆ ಬರುತ್ತಿರುವ ಪ್ರಮಾಣ ಮತ್ತು ಮುಂದಿನ ಕೆಲವು ತಿಂಗಳ ಬೇಡಿಕೆ - ಈ ಎಲ್ಲದರ ಬಗ್ಗೆ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಿದೆ. ಈ ಆತಂಕವೇ ಬೆಲೆ ಮೇಲೆ ತೀವ್ರ ಪರಿಣಾಮ ಬೀರಿದೆ.

ಉತ್ಪಾದನೆಯ ಲೆಕ್ಕ

ಸಕ್ಕರೆ ಬೆಲೆಯ ಮೊದಲ ಅಧ್ಯಾಯ ಆರಂಭವಾಗುವುದು ಕಬ್ಬಿನ ಹೊಲದಲ್ಲಿ. 2025-26ರ ಸಕ್ಕರೆ ಹಂಗಾಮಿನ ಆರಂಭದಲ್ಲಿ ಉತ್ಪಾದನೆ ಬಗ್ಗೆ ಹೆಚ್ಚು ಆಶಾವಾದವಿತ್ತು. 2026ರ ಮಾ. 31ರವರೆಗೆ ದೇಶದಲ್ಲಿ 272.31 ಲಕ್ಷ ಟನ್​ ಸಕ್ಕರೆ ಉತ್ಪಾದನೆಯಾಗಿತ್ತು. ಹಿಂದಿನ ವರ್ಷದ ಇದೇ ಅವಧಿಯಲ್ಲಿ 248.78 ಲಕ್ಷ ಟನ್​ ಉತ್ಪಾದನೆಯಾಗಿತ್ತು. ಅಂದರೆ ಆರಂಭದಲ್ಲಿ ಉತ್ಪಾದನೆ ಶೇ. 9ರಷ್ಟು ಹೆಚ್ಚಿತ್ತು. ಹಂಗಾಮು ಮುಂದುವರಿದಂತೆ ಪರಿಸ್ಥಿತಿ ಬದಲಾಗಿದೆ. ಈಗಿನ ಅಂದಾಜಿನ ಪ್ರಕಾರ, ಈ ಹಂಗಾಮಿನ ಒಟ್ಟು ಉತ್ಪಾದನೆ ಆರಂಭಿಕ ನಿರೀಕ್ಷೆಯಾದ ಸುಮಾರು 343 ಲಕ್ಷ ಟನ್​ಗಳಿಂದ ಇಳಿದು ಸುಮಾರು 306 ಲಕ್ಷ ಟನ್​ ಆಗಬಹುದು. ಅಂದರೆ ಆರಂಭಿಕ ಅಂದಾಜಿಗಿಂತ ಸುಮಾರು ಶೇ. 11ರಷ್ಟು ಕಡಿಮೆ. ಮಹಾರಾಷ್ಟ್ರ, ಉತ್ತರ ಪ್ರದೇಶದಂತಹ ಪ್ರಮುಖ ಕಬ್ಬು ಉತ್ಪಾದಕ ರಾಜ್ಯಗಳಲ್ಲಿ ಹವಾಮಾನ ಸಂಬಂಧಿತ ಹಾನಿ, ಕೆಲವು ರೋಗಗಳು ಉತ್ಪಾದನೆ ಮೇಲೆ ಪರಿಣಾಮ ಬೀರಿವೆ. ಕಬ್ಬಿನ ಬೆಳೆಗೆ ನೀರು ಹೆಚ್ಚು ಬೇಕಾಗುವುದರಿಂದ ಮಳೆ, ಹವಾಮಾನ ಏರುಪೇರು ಇಳುವರಿ ಕುಂಠಿತವಾಗಲು ಕಾರಣವಾಗುತ್ತದೆ. ಮುಂದಿನ ಹಂಗಾಮಿನ ಬೆಳೆ ಹೇಗಿರಬಹುದು ಎಂಬ ಆತಂಕವೂ ಈಗ ದರ ಏರಿಕೆಗೆ ಕಾರಣವಾಗಬಹುದು.

ಹಬ್ಬದ ಸೀಜನ್ ಬೇಡಿಕೆ

ಆಗಸ್ಟ್​ನಿಂದ ನವೆಂಬರ್​ವರೆಗೆ ಭಾರತದಲ್ಲಿ ಸಿಹಿತಿಂಡಿ ಬಳಕೆ ಹೆಚ್ಚು. ಗಣೇಶ ಚತುರ್ಥಿ, ದಸರಾ, ದೀಪಾವಳಿ ಮುಂತಾದ ಹಬ್ಬಗಳು ಬರುತ್ತವೆ. ಮನೆ, ಬೇಕರಿ, ಹೊಟೇಲ್​, ಆಹಾರ ಸಂಸ್ಕರಣಾ ಸಂಸ್ಥೆಗಳಿಗೆ ಹೆಚ್ಚಿನ ಸಕ್ಕರೆ ಬೇಕಾಗುತ್ತದೆ. ಈ ಬಾರಿ ಸಮಸ್ಯೆ ಏನೆಂದರೆ, ಹಬ್ಬದ ಬೇಡಿಕೆ ಹೆಚ್ಚಾಗುವ ಸಮಯದಲ್ಲೇ ದೇಶೀಯ ಪೂರೈಕೆಯ ಬಗ್ಗೆ ಆತಂಕವೂ ಹೆಚ್ಚಾಗಿ, ಖರೀದಿದಾರರು ಮುಂಚಿತವಾಗಿ ದಾಸ್ತಾನು ಮಾಡಿಕೊಳ್ಳಲು ಮುಂದಾಗಿದ್ದಾರೆ. ಮುಂದೆ ಇನ್ನಷ್ಟು ದುಬಾರಿಯಾಗಬಹುದು ಎಂಬ ನಿರೀಕ್ಷೆಯೂ ಬೆಲೆ ಏರಿಕೆಯಲ್ಲಿ ಪಾತ್ರ ವಹಿಸುತ್ತಿದೆ.

ದಾಸ್ತಾನಿನ ಪಾತ್ರವೇನು?

ಪೂರೈಕೆ ಸೀಮಿತವಾಗಿರುವಾಗ ವ್ಯಾಪಾರಿಗಳು ಅಥವಾ ಸಂಸ್ಥೆಗಳು ಹೆಚ್ಚಿನ ದಾಸ್ತಾನು ಮಾಡಿಟ್ಟುಕೊಂಡರೆ ಮಾರುಕಟ್ಟೆಯಲ್ಲಿ ತಕ್ಷಣ ಲಭ್ಯವಾಗುವ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಬೆಲೆ ಏರುತ್ತದೆ. ಕೇಂದ್ರ ಸರ್ಕಾರ ಜುಲೈ ಅಂತ್ಯದಲ್ಲೇ ಸಕ್ಕರೆ ವ್ಯಾಪಾರಿಗಳ ದಾಸ್ತಾನಿನ ಮೇಲೆ ಮಿತಿ ವಿಧಿಸಿತ್ತು. ಆ. 1ರಿಂದ ನ. 30ರವರೆಗೆ ಈ ನಿಯಮ ಜಾರಿಯಲ್ಲಿರಲಿದೆ. ಸರ್ಕಾರದ ಪ್ರಕಾರ, ಇತ್ತೀಚಿನ ಸಕ್ಕರೆ ಬೆಲೆ ಏರಿಕೆ ಕೇವಲ ಬೇಡಿಕೆ-ಪೂರೈಕೆಗೆ ಸಂಬಂಧಿಸಿದ್ದಲ್ಲ. ಸಂಗ್ರಹಣೆ ಮತ್ತು ಊಹಾಪೋಹದ ಪಾತ್ರವೂ ಇದರಲ್ಲಿದೆ. ದಾಸ್ತಾನಿಗೆ ಮಿತಿ ಹಾಕಿದ ನಂತರವೂ ದರ ಏರಿಕೆ ಮುಂದುವರಿದಿದ್ದರಿಂದ ದೊಡ್ಡ ಪ್ರಮಾಣದ ಸಕ್ಕರೆ ಬಳಕೆದಾರರ ಮೇಲೆ ಮತ್ತಷ್ಟು ಕಠಿಣ ನಿಯಮ ಹೇರಲಾಗಿದೆ. ತಿಂಗಳಿಗೆ 10 ಟನ್​ಗಿಂತ ಹೆಚ್ಚು ಸಕ್ಕರೆ ಬಳಸುವ ದೊಡ್ಡ ಸಂಸ್ಥೆಗಳು ಗರಿಷ್ಠ 15 ದಿನಗಳ ಅಗತ್ಯಕ್ಕೆ ತಕ್ಕಷ್ಟು ದಾಸ್ತಾನು ಮಾತ್ರ ಇಟ್ಟುಕೊಳ್ಳುವಂತೆ ನಿಯಂತ್ರಿಸಲಾಗಿದೆ.

ಎಥನಾಲ್​ ನೀತಿ ಎಷ್ಟು ಕಾರಣ..?

ಸಕ್ಕರೆ ಬೆಲೆ ಏರಿಕೆಯ ಚರ್ಚೆಯಲ್ಲಿ ಅತ್ಯಂತ ಹೆಚ್ಚು ಕೇಳಿಬರುತ್ತಿರುವುದು ಎಥನಾಲ್​ನ ಪಾತ್ರ. ಕಬ್ಬಿನಿಂದ ಸಕ್ಕರೆ ಮಾತ್ರವಲ್ಲ, ಎಥನಾಲ್​ ಕೂಡ ಉತ್ಪಾದಿಸಲಾಗುತ್ತದೆ. ದೇಶದ ಇಂಧನ ಮಿಶ್ರಣ ನೀತಿಯಡಿ ಎಥನಾಲ್​ ಉತ್ಪಾದನೆಗೆ ಕಬ್ಬಿನ ರಸ, ಸಕ್ಕರೆ ಮತ್ತು ಅದರ ಉಪಉತ್ಪನ್ನಗಳನ್ನು ಬಳಸಲಾಗುತ್ತದೆ. ಇದರಿಂದ ಮಾರುಕಟ್ಟೆಗೆ ಬರುವ ಸಕ್ಕರೆ ಪ್ರಮಾಣ ಕಡಿಮೆಯಾಗಿದೆ ಎಂಬ ವಾದವಿದೆ. ಆದರೆ ಕೇಂದ್ರ ಸರ್ಕಾರ ಈ ವಾದವನ್ನು ತಳ್ಳಿಹಾಕಿದೆ. ಎಥನಾಲ್​ಗೆ ಬಳಸುತ್ತಿರುವ ಸಕ್ಕರೆ ಪ್ರಮಾಣ 2022-23ರಲ್ಲಿ ಶೇ. 12ರಷ್ಟಿದ್ದರೆ, 2025-26ರಲ್ಲಿ ಶೇ. 9ಕ್ಕೆ ಇಳಿದಿದೆ. ದೇಶದಲ್ಲಿ ಉತ್ಪಾದನೆಯಾಗುವ ಎಥನಾಲ್​ನ ಮುಕ್ಕಾಲು ಭಾಗ ಮೆಕ್ಕೆಜೋಳದಂತಹ ಧಾನ್ಯಗಳಿಂದ ಬರುತ್ತಿದೆ. ಆದ್ದರಿಂದ ಸಕ್ಕರೆ ಬೆಲೆ ಏರಿಕೆಗೆ ಎಥನಾಲ್​ ಕಾರಣವಲ್ಲ ಎನ್ನುತ್ತಿದೆ ಸರ್ಕಾರ.

ಜಾಗತಿಕ ಮಾರುಕಟ್ಟೆ ಪರಿಣಾಮ

ಸಕ್ಕರೆ ಬೆಲೆ ಸಂಪೂರ್ಣವಾಗಿ ದೇಶದೊಳಗಿನ ಬೆಳವಣಿಗೆಗಳಿಂದ ಮಾತ್ರ ನಿರ್ಧಾರವಾಗುವುದಿಲ್ಲ. ಬ್ರೆಜಿಲ್​, ಥಾಯ್ಲೆಂಡ್​ ಸೇರಿದಂತೆ ಪ್ರಮುಖ ಸಕ್ಕರೆ ಉತ್ಪಾದಕ ರಾಷ್ಟ್ರಗಳ ಉತ್ಪಾದನೆ ಮತ್ತು ಜಾಗತಿಕ ಪೂರೈಕೆಯ ಪರಿಸ್ಥಿತಿಯೂ ಬೆಲೆ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚಿನ ವಾರಗಳಲ್ಲಿ ಜಾಗತಿಕ ಸಕ್ಕರೆ ಪೂರೈಕೆ ಬಗ್ಗೆ ಆತಂಕ ಹೆಚ್ಚಿದ್ದು, ಅಂತಾರಾಷ್ಟ್ರೀಯ ಬೆಲೆಗಳೂ ಏರಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿದಾಗ ಭಾರತದ ಸಕ್ಕರೆ ಕಾರ್ಖಾನೆಗಳಿಗೆ ರಫ್ತು ಮಾಡುವ ಉಮೇದು ಹೆಚ್ಚುತ್ತದೆ. ಅದೇ ವೇಳೆ, ದೇಶೀಯ ಮಾರುಕಟ್ಟೆಯಲ್ಲಿ ಕೊರತೆ ಉಂಟಾಗದಂತೆ ಸರ್ಕಾರ ರಫ್ತನ್ನು ನಿಯಂತ್ರಿಸುತ್ತದೆ. ರಫ್ತು ಮಾಡಬೇಕೇ, ದೇಶೀಯ ಪೂರೈಕೆ ಉಳಿಸಬೇಕೇ ಎಂಬ ದ್ವಂದ್ವದಲ್ಲಿ ಉದ್ಯಮಿಗಳು ಇರುತ್ತಾರೆ.

ಆಮದಿಗೆ ಬಾಗಿಲು ತೆರೆದಿದ್ದೇಕೆ?

ಕೇಂದ್ರ ಸರ್ಕಾರ 10 ಲಕ್ಷ ಟನ್​ ಕಚ್ಚಾ ಸಕ್ಕರೆಯನ್ನು ಸುಂಕವಿಲ್ಲದೆ ಆಮದು ಮಾಡಿಕೊಳ್ಳಲು ಆ. 20ರಂದು ಅವಕಾಶ ನೀಡಿದೆ. ಈ ಆಮದಿಗೆ ಅ. 31ರವರೆಗೆ ಅನುಮತಿ ಇದೆ. ಸುಮಾರು ಒಂದು ದಶಕದ ಬಳಿಕ ಭಾರತ ಇಂತಹ ದೊಡ್ಡ ಪ್ರಮಾಣದಲ್ಲಿ ಸಕ್ಕರೆ ಆಮದಿಗೆ ಬಾಗಿಲು ತೆರೆದಿದೆ. ಇದರ ಉದ್ದೇಶ ಸರಳ - ದೇಶೀಯ ಮಾರುಕಟ್ಟೆಗೆ ಹೆಚ್ಚುವರಿ ಸಕ್ಕರೆ ಬಂದರೆ ಬೆಲೆಯ ಒತ್ತಡ ಕಡಿಮೆ ಆಗುತ್ತದೆ. ಬೆಲೆ ತಕ್ಷಣ ಇಳಿಯುವುದಿಲ್ಲವಾದರೂ "ಸರ್ಕಾರ ಬೆಲೆ ಏರಿಕೆಯನ್ನು ಸುಮ್ಮನೆ ನೋಡುತ್ತ ಕುಳಿತುಕೊಳ್ಳುವುದಿಲ್ಲ' ಎಂಬ ಬಲವಾದ ಸಂದೇಶವನ್ನು ಈ ನಿರ್ಧಾರ ಮಾರುಕಟ್ಟೆಗೆ ನೀಡುತ್ತದೆ. ಹಡಗಿನಲ್ಲಿ ಸಕ್ಕರೆ ಬರುವುದು, ಅದರ ಸಂಸ್ಕರಣೆ, ವಿತರಣೆ ಮತ್ತು ಚಿಲ್ಲರೆ ಮಾರುಕಟ್ಟೆಗೆ ತಲುಪುವುದು ಈ ಎಲ್ಲ ಪ್ರಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತದೆ. "ಹೆಚ್ಚುವರಿ ಸಕ್ಕರೆ ಮಾರುಕಟ್ಟೆಗೆ ಬರುತ್ತದೆ' ಎಂಬ ನಿರೀಕ್ಷೆಯೇ ವ್ಯಾಪಾರಿಗಳ ನಿಲುವನ್ನು ಬದಲಾಯಿಸಬಹುದು. ದಾಸ್ತಾನು ಮಾಡಿಟ್ಟುಕೊಳ್ಳುವ ಅವರ ಉತ್ಸಾಹ ಕಡಿಮೆಯಾಗಬಹುದು.

ಗ್ರಾಹಕರ ಮೇಲಿನ ಪರಿಣಾಮ

ಸಕ್ಕರೆ ಬೆಲೆ ಏರಿಕೆ ನೇರವಾಗಿ ಕುಟುಂಬದ ಮಾಸಿಕ ವೆಚ್ಚವನ್ನು ಹೆಚ್ಚಿಸುತ್ತದೆ. ಆದರೆ ಅದರ ಪರೋಕ್ಷ ಪರಿಣಾಮ ಇನ್ನೂ ದೊಡ್ಡದು. ಸಿಹಿತಿಂಡಿ, ಬಿಸ್ಕತ್​, ಕೇಕ್​, ಬೇಕರಿ ಉತ್ಪನ್ನಗಳು, ಐಸ್​ಕ್ರೀಂ, ತಂಪುಪಾನೀಯಗಳು, ಜಾಮ್​, ಚಾಕೊಲೇಟ್​ ಮತ್ತು ಹಲವು ಸಂಸ್ಕರಿತ ಆಹಾರಗಳಲ್ಲಿ ಸಕ್ಕರೆ ಪ್ರಮುಖ ಕಚ್ಚಾ ವಸ್ತು. ಸಕ್ಕರೆ ಕಿಲೋಗೆ 5 ಅಥವಾ 10 ರೂ. ಏರಿದರೆ ಮನೆಮಂದಿಯ ಸಕ್ಕರೆ ಖರೀದಿಗೆ ಹೆಚ್ಚುವರಿ ಹಣ ಬೇಕಾಗುತ್ತದೆ. ಆದರೆ ಸಿಹಿತಿಂಡಿ ತಯಾರಕರಿಗೆ ಅಥವಾ ಬೇಕರಿಗಳಿಗೆ ಸಕ್ಕರೆ ದೊಡ್ಡ ಪ್ರಮಾಣದಲ್ಲಿ ಬೇಕಾಗುವುದರಿಂದ ಅವರ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಅದನ್ನು ಅವರು ಗ್ರಾಹಕರಿಗೆ ವರ್ಗಾಯಿಸಿದರೆ ಸಂಸ್ಕರಿತ ಆಹಾರಗಳ ಬೆಲೆ ಏರುತ್ತದೆ.

ಮುಂದೇನು..?

ಸಕ್ಕರೆಯ ಬೆಲೆ ಏರಿಕೆ ಎಷ್ಟು ದಿನ ಮುಂದುವರಿಯುತ್ತದೆ ಎಂಬುದು ಮುಖ್ಯವಾಗಿ ಮೂರು ಅಂಶಗಳ ಮೇಲೆ ಅವಲಂಬಿತವಾಗಿದೆ. ಕಾರ್ಖಾನೆಗಳು ತಮ್ಮಲ್ಲಿರುವ ಸಕ್ಕರೆ ದಾಸ್ತಾನನ್ನು ಎಷ್ಟು ವೇಗವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ; ಹಬ್ಬದ ಬೇಡಿಕೆ ಎಷ್ಟು ಹೆಚ್ಚುತ್ತದೆ; ಹೊಸ ಕಬ್ಬಿನ ಹಂಗಾಮಿನ ಉತ್ಪಾದನೆ ಹೇಗಿರುತ್ತದೆ - ಇವೇ ಆ 3 ಅಂಶಗಳು. ಸರ್ಕಾರದ ಕ್ರಮಗಳಿಂದ ಪೂರೈಕೆ ಹೆಚ್ಚಾದರೆ ಬೆಲೆ ಏರಿಕೆ ತಣ್ಣಗಾಗಬಹುದು. ಹಬ್ಬದ ಬೇಡಿಕೆ ನಿರೀಕ್ಷೆಗಿಂತ ಹೆಚ್ಚಾದರೆ ಬೆಲೆ ಮತ್ತೆ ಒತ್ತಡಕ್ಕೆ ಒಳಗಾಗಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net