ತಪಾಸಣೆ ಹೆಸರಲ್ಲಿ ಬಟ್ಟೆ ಬಿಚ್ಚಿಸಿದ ಪುರುಷ ಅಧಿಕಾರಿ: ಅಮೆರಿಕದಲ್ಲಿ ಭಾರತೀಯ ಮಹಿಳೆಗೆ ಕಹಿ ಅನುಭವ! Indian woman

Indian woman
Published on

Indian woman : ವ್ಯವಹಾರ ಮತ್ತು ವೈಯಕ್ತಿಕ ಕಾರಣಗಳಿಗಾಗಿ ಅಮೆರಿಕಕ್ಕೆ ತೆರಳಿದ್ದ ಭಾರತೀಯ ಉದ್ಯಮಿ ಶ್ರುತಿ ಚತುರ್ವೇದಿ ಅವರನ್ನು ಅಮೆರಿಕದ ಅಲಾಸ್ಕಾದ ಆಂಕಾರೇಜ್ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಪೊಲೀಸರು ಮತ್ತು ಎಫ್‌ಬಿಐ ಅಧಿಕಾರಿಗಳು ಅನುಚಿತವಾಗಿ ನಡೆಸಿಕೊಂಡಿದ್ದಾರೆ.

ಶ್ರುತಿ ಅವರನ್ನು ಮಹಿಳಾ ಅಧಿಕಾರಿಯಿಂದ ತಪಾಸಣೆ ಮಾಡಿಸದೇ ಓರ್ವ ಪುರುಷ ಅಧಿಕಾರಿಯಿಂದ ವೈಯಕ್ತಿಕ ತಪಾಸಣೆ ಮಾಡಿಸಿ, ನಿಯಮ ಉಲ್ಲಂಘನೆ ಮಾಡುವ ಮೂಲಕ ಕೆಟ್ಟಿದಾಗಿ ನಡೆದುಕೊಂಡರು. ಅಷ್ಟೇ ಅಲ್ಲದೆ, ಶೀತ ವಾತಾವರಣದಲ್ಲಿ ಬೆಚ್ಚಗಿರಲು ಶ್ರುತಿ ಅವರು ಧರಿಸಿದ್ದ ಹೆಚ್ಚುವರಿ ಬಟ್ಟೆಗಳನ್ನು ಸಹ ಬಲವಂತಗಾಗಿ ತೆಗೆಸಿದ್ದಾರೆ. ಇದು ಇಷ್ಟಕ್ಕೆ ನಿಲ್ಲಲಿಲ್ಲ, ಆಕೆಯನ್ನು ಟಾಯ್ಲೆಟ್​ ಹೋಗಲು ಸಹ ಬಿಡಲಿಲ್ಲ. ಸುಮಾರು 8 ಗಂಟೆಗಳ ಕಾಲ ಆಕೆಯನ್ನು ತಮ್ಮ ಸೆಲ್‌ನಲ್ಲಿ ಇರಿಸಿಕೊಂಡು ವಿವಿಧ ಪ್ರಶ್ನೆಗಳನ್ನು ಕೇಳುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡಿದರು. ಸಹಾಯಕ್ಕಾಗಿ ಯಾರನ್ನೂ ಕರೆಯಲು ಸಹ ಅವಕಾಶ ಮಾಡಿಕೊಡಲಿಲ್ಲ. ಶ್ರುತಿ ಭಾರತವನ್ನು ತಲುಪಿದ ನಂತರ, ಅಮೆರಿಕ ವಿಮಾನ ನಿಲ್ದಾಣದಲ್ಲಿ ತಾನು ಅನುಭವಿಸಿದ ಅವಮಾನವನ್ನು ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಾನು ವಿಮಾನ ನಿಲ್ದಾಣಕ್ಕೆ ಬಂದಾಗ, ನನ್ನ ಹ್ಯಾಂಡ್​ಬ್ಯಾಗ್​ನಲ್ಲಿ ಸ್ಮಾರ್ಟ್‌ಫೋನ್ ಪವರ್ ಬ್ಯಾಂಕ್ ಇತ್ತು. ಪೊಲೀಸರು ಅದನ್ನು ಹೊಸ ವಸ್ತು ಎಂಬಂತೆ ಅನುಮಾನಾಸ್ಪದವಾಗಿ ನೋಡಿದರು. ಅವರು ತಕ್ಷಣ ಎಫ್‌ಬಿಐ ಅಧಿಕಾರಿಗಳನ್ನು ಕರೆತಂದು ನನ್ನನ್ನು ಪರಿಶೀಲಿಸಿದರು. ತಮಗೆ ಇಷ್ಟ ಬಂದಂತೆ ಅರ್ಥಹೀನ ಪ್ರಶ್ನೆಗಳಿಂದ ನನಗೆ ಕಿರುಕುಳ ನೀಡಿದರು. ವಾಸ್ತವವಾಗಿ, ಒಬ್ಬ ಮಹಿಳಾ ಅಧಿಕಾರಿ ಪರಿಶೀಲಿಸಬೇಕಿತ್ತು. ಆದರೆ, ಓರ್ವ ಪುರುಷ ಅಧಿಕಾರಿ ಬಂದು ನನ್ನನ್ನು ಪರಿಶೀಲಿಸಿದರು. ವಿಪರೀತ ಚಳಿಯಿಂದಾಗಿ ನಾನು ಧರಿಸಿದ್ದ ಬೆಚ್ಚಗಿನ ಬಟ್ಟೆಗಳನ್ನು ಸಹ ತೆಗೆಸಿದರು. ನನ್ನನ್ನು ಸತತ 8 ಗಂಟೆಗಳ ಕಾಲ ಎಲ್ಲಿಯೂ ಹೋಗಲು ಬಿಡಲಿಲ್ಲ. ನನ್ನನ್ನು ಟಾಯ್ಲೆಟ್​ಗೆ ಹೋಗುವುದಕ್ಕೂ ಬಿಡಲಿಲ್ಲ ಮತ್ತು ಸಹಾಯಕ್ಕಾಗಿ ಯಾರಿಗೂ ಕರೆ ಮಾಡಲು ಬಿಡಲಿಲ್ಲ. ನನ್ನ ಫೋನ್ ಮತ್ತು ವ್ಯಾಲೆಟ್ ಅನ್ನು ವಶಪಡೆದುಕೊಂಡಿದ್ದರು. ಅವರು ಎಲ್ಲಾ ರೀತಿಯ ಪರಿಶೀಲನೆ ಮಾಡಿದ ಬಳಿಕ ಅಂತಿಮವಾಗಿ ಏನೂ ಇಲ್ಲ ಎಂದು ದೃಢಪಡಿಸಿದರು ಮತ್ತು ನನ್ನನ್ನು ಹೋಗಲು ಬಿಟ್ಟರು ಎಂದು ಶ್ರುತಿ ಹೇಳಿದ್ದಾರೆ.

ಶ್ರುತಿ ಅವರು ತಮ್ಮ ಪೋಸ್ಟ್ ಅನ್ನು ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಮತ್ತು ವಿದೇಶಾಂಗ ಸಚಿವಾಲಯದೊಂದಿಗೆ ಟ್ಯಾಗ್ ಮಾಡಿದ್ದಾರೆ. ಅಂದಹಾಗೆ ಶ್ರುತಿ ಅವರು 'ಇಂಡಿಯಾ ಆಕ್ಷನ್ ಪ್ರಾಜೆಕ್ಟ್' ಮತ್ತು ಚರ್ಚಾ ವೇದಿಕೆ 'ಚೈಪಾನಿ' ಅನ್ನು ಸ್ಥಾಪಿಸಿದ್ದಾರೆ. ಅವರು ಈ ಕಂಪನಿಗಳ ಸಿಇಒ ಕೂಡ ಹೌದು. ಅಮೆರಿಕದ ಅಧಿಕಾರಿಗಳು ಶ್ರುತಿ ಜತೆ ಕೆಟ್ಟದಾಗಿ ನಡೆದುಕೊಂಡಿದ್ದನ್ನು, ನೆಟ್ಟಿಗರು ಟೀಕಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net