ಖಾಕಿಗೆ ಬಿಟ್ ಕಾಯಿನ್ ಕಳಂಕ; ಇನ್​ಸ್ಪೆಕ್ಟರ್ ಸೇರಿ ಇಬ್ಬರ ಬಂಧನ

Bitcoin
Published on

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸ್ ಅಧಿಕಾರಿಗಳೇ ಭಾಗಿಯಾಗಿರುವುದು ಸಿಐಡಿ ತನಿಖೆಯಲ್ಲಿ ದೃಢಪಟ್ಟಿದೆ. 2020ರಲ್ಲಿ ತನಿಖಾಧಿಕಾರಿಗಳಾಗಿದ್ದ ನಾಲ್ವರು ಇನ್​ಸ್ಪೆಕ್ಟರ್ ಹಾಗೂ ಒಬ್ಬ ಖಾಸಗಿ ವ್ಯಕ್ತಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಗುರುವಾರ ಇನ್​ಸ್ಪೆಕ್ಟರ್ ಡಿ.ಎಂ. ಪ್ರಶಾಂತ್ ಬಾಬು ಹಾಗೂ ಸೈಬರ್ ತಜ್ಞ ಸಂತೋಷ್​ನನ್ನು ಬಂಧಿಸಿದ್ದು, ಇವರನ್ನು ಕೋರ್ಟ್ 6 ದಿನ ಸಿಐಡಿ ವಿಶೇಷ ತನಿಖಾ ತಂಡದ (ಎಸ್​ಐಟಿ) ವಶಕ್ಕೆ ಕೊಟ್ಟಿದೆ. ಇದರೊಂದಿಗೆ ಹಗರಣ ನಡೆದಾಗ ಕರ್ತವ್ಯದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳಿಗೂ ಬಿಟ್ ಕಾಯಿನ್ ಹಗರಣದ ಉರುಳು ಸುತ್ತಿಕೊಳ್ಳುವ ಲಕ್ಷಣಗಳು ಗೋಚರಿಸಿವೆ.

ಇನ್​ಸ್ಪೆಕ್ಟರ್​ಗಳಾದ ಲಕ್ಷ್ಮೀಕಾಂತಯ್ಯ, ಚಂದ್ರಾಧರ, ಡಿ.ಎಂ. ಪ್ರಶಾಂತ್ ಬಾಬು ಹಾಗೂ ಶ್ರೀಧರ್ ಕೆ.ಪೂಜಾರ (ಸದ್ಯ ಡಿವೈಎಸ್ಪಿ) ಹಾಗೂ ಎಚ್​ಎಸ್​ಆರ್ ಲೇಔಟ್​ನಲ್ಲಿರುವ ಜಿಸಿಐಡಿ ಟೆಕ್ನಾಲಜಿಸ್ ಪ್ರೖೆವೇಟ್ ಲಿಮಿಟೆಡ್ ಸಿಇಒ ಎಸ್. ಸಂತೋಷ್​ಕುಮಾರ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಈ ಐದೂ ಮಂದಿ ಬಿಟ್ ಕಾಯಿನ್ ಹಗರಣದಲ್ಲಿ ನೇರವಾಗಿ ಭಾಗಿಯಾದ್ದಾರೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಶೀಘ್ರದಲ್ಲೇ ಉಳಿದ ಆರೋಪಿಗಳನ್ನು ಬಂಧಿಸಲು ಎಸ್​ಐಟಿ ಸಿದ್ಧತೆ ನಡೆಸಿದೆ.

ಬಿಟ್ ಕಾಯಿನ್ ಹಗರಣ ನಡೆದ 2020-21ರಲ್ಲಿ ಈಗ ಆರೋಪಿಗಳಾಗಿರುವ ಲಕ್ಷಿ್ಮೕಕಾಂತಯ್ಯ ಕಾಟನ್​ಪೇಟೆ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ಆಗಿದ್ದರು. ಶ್ರೀಧರ್ ಕೆ.ಪೂಜಾರ ಅಶೋಕ್ ನಗರ ಠಾಣೆ ಹಾಗೂ ಸಿಸಿಬಿ ಮಾದಕ ದ್ರವ್ಯ ವಿಭಾಗದ ಇನ್​ಸ್ಪೆಕ್ಟರ್ ಆಗಿದ್ದರು. ಡಿ.ಎಂ. ಪ್ರಶಾಂತ್ ಬಾಬು ಆಡುಗೋಡಿಯ ತಾಂತ್ರಿಕ ಸಲಹಾ ಕೇಂದ್ರದ ಇನ್​ಸ್ಪೆಕ್ಟರ್ ಹಾಗೂ ಚಂದ್ರಾಧರ ಸಿಐಡಿ ಸೈಬರ್ ಠಾಣೆಯ ತನಿಖಾಧಿಕಾರಿಯಾಗಿದ್ದರು.

2020ರಲ್ಲಿ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಖರೀದಿ ಪ್ರಕರಣದಲ್ಲಿ ಬಂಧಿತರಾಗಿದ್ದ 10ನೇ ಆರೋಪಿ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಹಾಗೂ 12ನೇ ಆರೋಪಿ ರಾಬಿನ್ ಖಂಡೇಲ್​ವಾಲ್​ನನ್ನು ಅಕ್ರಮ ಬಂಧನದಲ್ಲಿರಿಸಿಕೊಂಡು ಅವರ ವ್ಯಾಲೆಟ್​ನಲ್ಲಿದ್ದ ಬಿಟ್ ಕಾಯಿನ್​ಗಳನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಜತೆಗೆ ಬೇರೆಬೇರೆ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡಿದ್ದಾರೆ. ಮತ್ತೆ ಕೆಲ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡಲು ಯತ್ನಿಸಿರುವುದು ತಾಂತ್ರಿಕ ವಿಶ್ಲೇಷಣೆಯಲ್ಲಿ ದೃಢಪಟ್ಟಿದೆ ಎಂದು ಎಸ್​ಐಟಿ ಅಧಿಕಾರಿಗಳು ಎಫ್​ಐಆರ್​ನಲ್ಲಿ ಉಲ್ಲೇಖಿಸಿದ್ದಾರೆ.

ತನಿಖೆ ಸಂದರ್ಭದಲ್ಲಿ ಶ್ರೀಕಿ ಹಾಗೂ ರಾಬಿನ್ ಖಂಡೇಲ್​ವಾಲ್​ನ ಕ್ರಿಪ್ಟೋ ವ್ಯಾಲೆಟ್​ನಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಬಿಟ್ ಕಾಯಿನ್​ಗಳನ್ನು ವರ್ಗಾವಣೆ ಮಾಡಿಕೊಳ್ಳಲಾಗಿದೆ. ಜತೆಗೆ ಲ್ಯಾಪ್​ಟಾಪ್​ನಲ್ಲಿದ್ದ ಮಾಹಿತಿಯನ್ನು ಹಲವು ಬಾರಿ ತಿರುಚಲಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್​ಎಸ್​ಎಲ್) ವರದಿ ಕೊಟ್ಟಿತ್ತು. ಈ ವರದಿ ಆಧಾರದಲ್ಲಿ ಪ್ರಶಾಂತ್ ಬಾಬು ಹಾಗೂ ಸಂತೋಷ್ ಕುಮಾರ್​ನನ್ನು ಬುಧವಾರ ತಡರಾತ್ರಿಯವರೆಗೂ ವಿಚಾರಣೆ ನಡೆಸಿದ್ದರು.

ವ್ಯಾಲೆಟ್​ನಿಂದ ಕರೆನ್ಸಿ ಟ್ರಾನ್ಸ್​ಫರ್: 2020 ಡಿ.30, 31 ಹಾಗೂ 2021ರ ಜ.6ರಂದು ರಾಬಿನ್ ಕ್ರಿಪ್ಟೊ ವ್ಯಾಲೆಟ್ ಖಾತೆಗಳನ್ನು ಅನಧಿಕೃತವಾಗಿ ಆಕ್ಸೆಸ್ ಮಾಡಿದ್ದ ಸಂತೋಷ್ ಕುಮಾರ್, ತನ್ನ ಕ್ರಿಪ್ಟೊ ವ್ಯಾಲೆಟ್​ಗಳಿಗೆ 1,83,624 ರೂ. ಮೌಲ್ಯದ ಬಿಟ್ ಕಾಯಿನ್​ಗಳನ್ನು ವರ್ಗಾವಣೆ ಮಾಡಿಕೊಂಡಿದ್ದ. ಇದಕ್ಕೆ ಆಗಿನ ತನಿಖಾಧಿಕಾರಿಗಳಾಗಿದ್ದ ಲಕ್ಷಿ್ಮೕಕಾಂತಯ್ಯ ಹಾಗೂ ಚಂದ್ರಾಧರ ಆರ್ಥಿಕ ಲಾಭಕ್ಕಾಗಿ ಅಕ್ರಮಕ್ಕೆ ಸಹಕಾರ ನೀಡಿದ್ದರು.

ಸ್ನೇಹಿತೆಗೆ ಇ-ಮೇಲ್ ಕಳಿಸಿದ್ದ ಶ್ರೀಕಿ!: ವೆಬ್​ಸೈಟ್​ಗಳ ಹ್ಯಾಕ್ ಮಾಡಲು ತನಿಖಾಧಿಕಾರಿಗಳು ಕೊಟ್ಟಿದ್ದ ಲ್ಯಾಪ್​ಟಾಪ್ ಅನ್ನೇ ಬಳಸಿಕೊಂಡು ಪೊಲೀಸ್ ವಶದಲ್ಲಿದ್ದಾಗಲೇ 2021ರ ಜ.22ರಂದು ಶ್ರೀಕಿ ತನ್ನ ಸ್ನೇಹಿತೆಗೆ ಇ ಮೇಲ್ ಕಳುಹಿಸಿದ್ದ. ತಾಂತ್ರಿಕ ನೆರವು ನೀಡಲು ನಿಯೋಜನೆಗೊಂಡಿದ್ದ ಇನ್​ಸ್ಪೆಕ್ಟರ್ ಪ್ರಶಾಂತ್ ಬಾಬು, ಆರೋಪಿಯನ್ನು ಪೊಲೀಸ್ ವಶದಲ್ಲಿದ್ದ ಅವಧಿಯಲ್ಲಿ ಜಿಸಿಐಡಿ ಟೆಕ್ನಾಲಜೀಸ್ ಖಾಸಗಿ ಕಚೇರಿಗೆ ಕರೆದೊಯ್ದಿದ್ದರು. ಪ್ರಕರಣದ ತನಿಖೆಗೆ ದೊರೆಯಬಹುದಾಗಿದ್ದ ಅಮೂಲ್ಯ ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿಕೊಳ್ಳುವುದರ ಬದಲಿಗೆ, ಆರೋಪಿಗಳ ವಿವಿಧ ಡಿಜಿಟಲ್ ಅಕೌಂಟ್​ಗಳ ಯೂಸರ್ ಪಾಸ್​ವರ್ಡ್​ಗಳನ್ನು ಬದಲಾಯಿಸುವಂತೆ ಸಂತೋಷ್ ಕುಮಾರ್​ಗೆ ಸೂಚಿಸಿ, ಬದಲಾವಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದರು.

ಅಕ್ರಮ ಹೇಗೆ?

  • ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ಶ್ರೀಕಿ ಹಾಗೂ ರಾಬಿನ್​ನನ್ನು ಅಕ್ರಮ ಬಂಧನದಲ್ಲಿರಿಸಿದ್ದ ಆಗಿನ ತನಿಖಾಧಿಕಾರಿಗಳು.
  • ತನಿಖಾಧಿಕಾರಿಯೇ ಖುದ್ದು 60 ಸಾವಿರ ರೂ.ಗೆ ಹೊಸ ಲ್ಯಾಪ್ ಟಾಪ್ ಖರೀದಿಸಿ, ಪೊಲೀಸ್ ವಶದಲ್ಲಿದ್ದ ಶ್ರೀಕಿಗೆ ಕೊಟ್ಟಿದ್ದರು.
  • ಕ್ರಿಪ್ಟೋ ಕರೆನ್ಸಿಯ ವೆಬ್​ಸೈಟ್​ಗಳನ್ನು ಶ್ರೀಕಿಯಿಂದ ಹ್ಯಾಕ್ ಮಾಡಿಸಿದ್ದರು. ಮತ್ತೆ ಕೆಲ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದ್ದರು.
  • ಸಾಕ್ಷ್ಯ ಸಂಗ್ರಹಕ್ಕೆ ಅವಕಾಶವಿದ್ದರೂ ಆರೋಪಿಗಳ ವಿವಿಧ ಕ್ರಿಪ್ಟೋ ವ್ಯಾಲೆಟ್​ಗಳ ಯೂಸರ್ ಐಡಿ ಮತ್ತು ಪಾಸ್​ವರ್ಡ್ ಗಳನ್ನು ಬದಲಾಯಿಸಿದ್ದರು.
  • ಶ್ರೀಕಿ ಅಮೆಜಾನ್ ಕಂಪನಿಯ ಸರ್ವರ್​ಗಳಿಗೆ ಹಲವಾರು ಬಾರಿ ಭೇಟಿ ಕೊಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
  • ಮುಂದೆ ತನಿಖೆ ಅಥವಾ ವಿಚಾರಣೆ ನಡೆದರೆ ಸಿಕ್ಕಿಬೀಳಬಾರದೆಂಬ ಕಾರಣಕ್ಕೆ ಟ್ರಾ್ಯಶ್ ಹಿಸ್ಟರಿ ಡಿಲೀಟ್ ಮಾಡಿರುವುದು ತಾಂತ್ರಿಕ ವಿಶ್ಲೇಷಣಾ ವರದಿಯಲ್ಲಿ ದೃಢ.

ಆರೋಪಿಗಳಿಂದ ಸಾಕ್ಷ್ಯ ನಾಶ

  • ಶ್ರೀಕಿ ಮತ್ತು ರಾಬಿನ್ ಖಂಡೇಲ್​ವಾಲ್​ನ ಕ್ರಿಪ್ಟೊ ವ್ಯಾಲೆಟ್​ಗಳ, ಇ-ಮೇಲ್ ಐಡಿಗಳ, ಬ್ಯಾಂಕ್ ಖಾತೆಗಳ ಯೂಸರ್ ನೇಮ್ ಮತ್ತು ಪಾಸ್​ವರ್ಡ್​ಗಳ ಬದಲಾವಣೆ.
  • ಸಾಕ್ಷ್ಯವನ್ನೂ ಸಂಗ್ರಹಿಸಿಲ್ಲ, ಬದಲಾಯಿಸಿದ ಬಗ್ಗೆ ಯಾವುದೇ ದಾಖಲಾತಿಗಳಲ್ಲಿ ನಮೂದಿಸಿರಲಿಲ್ಲ. ಕೋರ್ಟ್ ಅನುಮತಿ ಪಡೆಯದೆ, ಪಂಚನಾಮೆ ಮಾಡದೆ ಬದಲಾಯಿಸಿದ್ದರು.
  • ಆಡುಗೋಡಿ ಟೆಕ್ನಿಕಲ್ ಸಪೋರ್ಟ್ ಸೆಂಟರ್ ಮತ್ತು ಎಚ್​ಎಸ್​ಆರ್ ಲೇಔಟ್​ನಲ್ಲಿರುವ ಜಿಸಿಐಡಿ ಟೆಕ್ನಾಲಜೀಸ್ ಪ್ರೖೆ.ಲಿ, ಕಚೇರಿಗೆ ಕರೆದೊಯ್ದು ಕೃತ್ಯ.
  • ಶ್ರೀಕಿ ಅಮೆಜಾನ್ ಸರ್ವರ್​ಗಳಿಗೆ ಹಲವು ಬಾರಿ ಭೇಟಿ ನೀಡಿದ್ದಾನೆ. ಆದರೆ, ಅಮೆಜಾನ್ ಸರ್ವರ್​ನಲ್ಲಿರುವ ವ್ಯಾಲೆಟ್ ಫೈಲ್​ಗಳ ವಿವರ ದಾಖಲಾತಿಗಳಲ್ಲಿ ಉಲ್ಲೇಖಿಸದೇ, ಬ್ಯಾಶ್ ಹಿಸ್ಟರಿ ಡಿಲೀಟ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net