

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಬಿಟ್‌ಕಾಯಿನ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಇನ್‌ಸ್ಪೆಕ್ಟರ್ ಸೇರಿ ಇಬ್ಬರನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಇನ್ನು ಹಲವು ಅಧಿಕಾರಿಗಳ ಬಂಧನವಾಗುವ ಸಾಧ್ಯತೆ ಇದೆ.
ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು ಹಾಗೂ ಸೈಬರ್ ತಜ್ಞ ಸಂತೋಷ್ ಬಂಧಿತರು.
ಸಾಕ್ಷ್ಯ ನಾಶಪಡಿಸಿದ ಆರೋಪದ ಪ್ರಶಾಂತ್ ಬಾಬು ಹಾಗೂ ಕೆ.ಸಂತೋಷ್ ಕುಮಾರ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಇಬ್ಬರು, ಆರೋಪಿ ರಾಬಿನ್ ಖಂಡೇಲ್‌ವಾಲ್‌ನ ಕ್ರಿಪ್ಟೊ ವ್ಯಾಲೆಟ್ ಖಾತೆಗಳನ್ನು ಅನಧಿಕೃತವಾಗಿ ಆಕ್ಸೆಸ್ ಮಾಡಿ, ತನ್ನ ಕ್ರಿಪ್ಟೊ ವ್ಯಾಲೆಟ್‌ಗಳಿಗೆ ೧,೮೩,೬೨೪ ರೂ. ಗಳಷ್ಟು ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಅಲ್ಲದೇ ಮತ್ತೊಬ್ಬ ಆರೋಪಿ ಕೃಷ್ಣ ಅಲಿಯಾಸ್ ಶ್ರೀಕೆಗೆ, ಬಂಧಿತ ಸಂತೋಷ್, ಲ್ಯಾಪ್‌ಟಾಪ್ ನೀಡಿ ಅಕ್ರಮ ಎಸಗಲು ಸೂಚಿಸಿದ್ದರು. ಇದಕ್ಕೆ ಅಂದಿನ ತನಿಖಾಧಿಕಾರಿಗಳಾಗಿದ್ದ ಲಕ್ಷ್ಮೀಕಾಂತಯ್ಯ, ಚಂದ್ರಧರ್ ಮತ್ತು ಶ್ರೀಧರ್ ಕೆ.ಪೂಜಾರ್ ಅವರು ಸಹಕರಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮ ಲಾಭ ಪಡೆದುಕೊಳ್ಳಲು ಸಹಕರಿಸಿರುವುದು ಬೆಳಕಿಗೆ ಬಂದಿದೆ.
ತಡರಾತ್ರಿವರೆಗೂ ವಿಚಾರಣೆ:
ಎಸ್‌ಐಟಿ ಅಧಿಕಾರಿಗಳು ಪ್ರಶಾಂತ್ ಬಾಬು ಹಾಗೂ ಸಂತೋಷ್ ಅವರನ್ನು ಬುಧವಾರ ವಿಚಾರಣೆಗೆ ಕರೆಸಿದ್ದರು. ತಡರಾತ್ರಿಯವರೆಗೂ ವಿಚಾರಣೆ ನಡೆಸಿದ ಬಳಿಕ ಇಬ್ಬರನ್ನೂ ಬಂಧಿಸಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಬಿಟ್ ಕಾಯಿನ್ ಪ್ರಕರಣದ ತನಿಖೆ ಸಂದರ್ಭದಲ್ಲಿ ಸಾಕ್ಷಿ ನಾಶಪಡಿಸಿದ್ದ ಆರೋಪದಡಿ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಿಸಿಬಿಯ ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ಇತರರ ವಿರುದ್ಧವೇ ಎಫ್‌ಐರ್ ದಾಖಲಾಗಿತ್ತು. ಪೊಲೀಸ್ ಅಧಿಕಾರಿಯ ಬಂಧನವಾಗುವ ಮೂಲಕ ಸಿಸಿಬಿ ಅಧಿಕಾರಿಗಳು ಸಾಕ್ಷಿ ನಾಶಪಡಿಸಿರುವುದು ದೃಢಪಟ್ಟಿದೆ.
ಯಾವೆಲ್ಲಾ ಅಧಿಕಾರಿ ಹೆಸರಿದೆ?
ಸೈಬರ್ ತಜ್ಞ ಹಾಗೂ ಎಚ್.ಎಸ್.ಆರ್ ಲೇಔಟ್‌ನಲ್ಲಿರುವ ಜಿಸಿಐಡಿ ಟೆಕ್ನಾಲಜಿಸ್, ಪ್ರೈವೇಟ್ ಲಿಮಿಟೆಡ್, ಸಿಇಒ ಎಸ್. ಸಂತೋಷ್ ಕುಮಾರ್, ಪೊಲೀಸ್ ಅಧಿಕಾರಿಗಳಾದ ಲಕ್ಷ್ಮೀಕಾಂತಯ್ಯ, ಚಂದ್ರಧರ್, ಪ್ರಶಾಂತ್‌ಬಾಬು, ಶ್ರೀಧರ್ ಪೂಜಾರಿ ಅವರುಗಳ ಹೆಸರಿದ್ದು, ತನಿಖೆ ಮುಂದುವರಿದಿದೆ. ಉಳಿದ ಪೊಲೀಸ್ ಅಧಿಕಾರಿಗಳು ಎಸ್‌ಐಟಿ ನಾವು ಕರೆದ್ದಾಗ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ನೀಡಿ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ
ಬಂಧಿತರಾದ ಪ್ರಶಾಂತ್ ಬಾಬು ಹಾಗೂ ಸೈಬರ್ ತಜ್ಞ ಸಂತೋಷ್ ಅವರನ್ನು ಗುರುವಾರ ಮಧ್ಯಾಹ್ನ ೧ ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಸಿಐಡಿ ಪೊಲೀಸರು ಹಾಜರು ಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳನ್ನು 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.